ಕೆಎಸ್ ಈಶ್ವರಪ್ಪ ಪುತ್ರ ಕಾಂತೇಶ್ಗೆ ಟಿಕೆಟ್ ತಪ್ಪಲು ನಾನು ಕಾರಣ ಅಲ್ಲ.; ಬಿಎಸ್ ಯಡಿಯೂರಪ್ಪ

ರಾಜ್ಯದಲ್ಲಿ 25-26 ಕ್ಷೇತ್ರಗಳಲ್ಲಿ ಗೆದ್ದು ನಿಮ್ಮನ್ನು ನೋಡಲು ಲೋಕಸಭೆಗೆ ಬರುತ್ತೇವೆ ಅಂತ ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾತು ಕೊಟ್ಟಿದ್ದೇನೆ. ಒಂದೆರಡು ಆಚೆ, ಈಚೆ ಆಗಬಹುದು. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ (BJP) ಈಗಾಗಲೇ ಗೆದ್ದು ಆಗಿದೆ. ಆದರೆ ಹೆಚ್ಚಿನ ಅಂತರಕ್ಕಾಗಿ ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಹೇಳಿದರು. ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷಕ್ಕೆ ಜನ ಆಶೀರ್ವಾದ ಮಾಡುತ್ತಾರೆಂದು ವಿಶ್ವಾಸವಿದೆ. ನನ್ನ ಅವಶ್ಯಕತೆ ಎಲ್ಲಿದೆ ಆ ಕ್ಷೇತ್ರಕ್ಕೆ ಹೋಗಿ ಪ್ರಚಾರ ಮಾಡುತ್ತೇನೆ ಎಂದರು.
ಕೆಎಸ್ ಈಶ್ವರಪ್ಪ ಪುತ್ರ ಕಾಂತೇಶ್ಗೆ ಟಿಕೆಟ್ ತಪ್ಪಲು ನಾನು ಕಾರಣ ಅಲ್ಲ. ಬಿಜೆಪಿಯ ಕೇಂದ್ರ ಚುನಾವಣೆ ಸಮಿತಿ ಟಿಕೆಟ್ ನಿರ್ಧಾರ ಮಾಡಿದೆ. ಈಶ್ವರಪ್ಪ ಪಕ್ಷ ಕಟ್ಟಿ ಬೆಳೆಸಿದವರು, ಮನಸ್ಸಿಗೆ ನೋವಾಗಿರಬಹುದು. ರಾಜ್ಯ ನಾಯಕರು ಈಶ್ವರಪ್ಪ ಜತೆ ಮಾತಾಡುವ ಪ್ರಯತ್ನ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ಎಲ್ಲರೂ ಬರುತ್ತಾರೆ. ಕಾರ್ಯಕ್ರಮಕ್ಕೆ ಬಂದು ಕೆ.ಎಸ್.ಈಶ್ವರಪ್ಪ ಮಾತನಾಡುವ ವಿಶ್ವಾಸ ಇದೆ. ಅವರನ್ನು ಮತ್ತೆ ಕರೆತರುವ ಪ್ರಯತ್ನ ಪಕ್ಷದ ಹಿರಿಯರು ಮಾಡುತ್ತಿದ್ದಾರೆ. ತಮ್ಮ ಮನಸ್ಸಿಗೆ ಆದ ನೋವಿನಿಂದ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ ಅಂದಿದ್ದಾರೆ. ಟಿಕೆಟ್ ವಿಚಾರದಲ್ಲಿ ನಮ್ಮ ಪಾತ್ರ ಏನೂ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಕಲಬುರಗಿಯಲ್ಲಿ ನಡೆದ ಮೋದಿ ಕಾರ್ಯಕ್ರಮ ಯಶಸ್ವಿಯಾಗಿದೆ. ರಾಜ್ಯದ 28 ಕ್ಷೇತ್ರಗಳಲ್ಲೂ ನಾವು ಗೆಲ್ಲಲು ಪ್ರಯತ್ನ ಮಾಡುತ್ತಿದ್ದೇವೆ. ಕೂತಲ್ಲೂ ನಿಂತಲ್ಲೂ ಬಿಜೆಪಿ ಪರ ಒಳ್ಳೆಯ ಅಭಿಪ್ರಾಯ ಸಿಗುತ್ತಿದೆ. ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕೋಪದಲ್ಲಿ ಮಾತನಾಡಿದ್ದಾರೆ. ಮೋದಿ ಕಾರ್ಯಕ್ರಮಕ್ಕೆ ಈಶ್ವರಪ್ಪ ಕೂಡ ಬರುತ್ತಾರೆ. ಬಿಜೆಪಿ ಕಟ್ಟಲು ಕೆ.ಎಸ್.ಈಶ್ವರಪ್ಪ ಸಹ ಪ್ರಮುಖ ಪಾತ್ರ ವಹಿಸಿದ್ದಾರೆ. ಎಲ್ಲವೂ ಸರಿ ಹೋಗುತ್ತೆ ಅನ್ನೋ ವಿಶ್ವಾಸ ಇದೆ ಎಂದು ಹೇಳಿದರು.
ಪುತ್ರನಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಬೇಸರಗೊಂಡಿರುವ ಕೆಎಸ್ ಈಶ್ವರಪ್ಪ, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದರು. ಸ್ವತಂತ್ರವಾಗಿ ಸ್ಪರ್ಧಿಸಿ ನಾನು ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಹೋಗುತ್ತಿಲ್ಲ. ಪಕ್ಷ ಒಂದು ಕುಟುಂಬದ ಕೈಯಲ್ಲಿ ಸಿಲುಕಿರುವುದನ್ನು ಬಿಡಿಸಲು ಸ್ಪರ್ಧೆ ಮಾಡುತ್ತೇನೆ. ನೊಂದ ಪಕ್ಷದ ಕಾರ್ಯಕರ್ತರ ಧ್ವನಿಯಾಗಿ ಸ್ಪತಂತ್ರವಾಗಿ ನಿರ್ಧರಿಸುವೆ ಎಂದು ಹೇಳಿದ್ದರು.
ನನ್ನಿಂದಲೇ ಎನ್ನುವವರ ವಿರುದ್ಧ ಚುನಾವಣಾ ಕಣಕ್ಕೆ ಇಳಿಯುತ್ತಿದ್ದೇನೆ. ಸಭೆಯಲ್ಲಿ ಭಾಗಿಯಾಗಿರುವವರೆಲ್ಲೂ ನನ್ನ ಪರ ಕೆಲಸ ಮಾಡಬೇಕು. ಪಕ್ಷದ ಸಿದ್ಧಾಂತ ಪರವಿರುವ ನನ್ನನ್ನು ಬೆಂಬಲಿಸಬೇಕು. ಚುನಾವಣೆ ವೇಳೆ ಜಾತಿ ವಿಚಾರ ಪ್ರಬಲವಾಗಿ ಚರ್ಚೆಯಾಗುತ್ತದೆ, ಎಲ್ಲಾ ಸಮುದಾಯದ ಮುಖಂಡರನ್ನು ಸಂಪರ್ಕಿಸಿ ನಿರ್ಧರಿಸಿದ್ದು, ಶಿವಮೊಗ್ಗ ಕ್ಷೇತ್ರದಲ್ಲಿ ನಾನು ಗೆದ್ದರೆ ಮೋದಿಯನ್ನೇ ಬೆಂಬಲಿಸುತ್ತೇನೆ, ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಎಲ್ಲರೂ ಶ್ರಮಿಸೋಣ ಎಂದಿದ್ದರು.