ನಾನೊಬ್ಬ ಹೆಮ್ಮೆಯ ಹಿಂದೂ, ನಾನು ಹಿಂದೂ ಆಗಿಯೇ ಬೆಳೆದಿದ್ದೇನೆ: ರಿಷಿ ಸುನಕ್
ನವದೆಹಲಿ: 18ನೇ ಶೃಂಗಸಭೆಯಲ್ಲಿ ಭಾಗವಹಿಸುವ ಸಲುವಾಗಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ (Rishi Sunak) ಭಾರತಕ್ಕೆ ಆಗಮಿಸಿದ್ದು, ನಾನೊಬ್ಬ ಹೆಮ್ಮೆಯ ಹಿಂದೂ (Hindu) ಎಂದು ಹೇಳಿದ್ದಾರೆ.
ಭಾರತಕ್ಕೆ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನೊಬ್ಬ ಹೆಮ್ಮೆಯ ಹಿಂದೂ. ನಾನು ಹಿಂದೂ ಆಗಿಯೇ ಬೆಳೆದಿದ್ದೇನೆ. ನಾನು ಹೀಗೆಯೇ ಇದ್ದೇನೆ. ಮುಂದಿನ ಒಂದರಡು ದಿನಗಳಲ್ಲಿ ಹಲವು ದೇವಾಲಯಗಳಿಗೆ (Temple) ಭೇಟಿ ನೀಡಲಿದ್ದೇನೆ ಎಂದು ತಿಳಿಸಿದರು.
ಖಲಿಸ್ತಾನಿ ಕೃತ್ಯವನ್ನು ಖಂಡಿಸಿದ ಅವರು, ಭಾರತದ ಸಹಾಯದೊಂದಿಗೆ ಖಲಿಸ್ತಾನಿ ಹಾವಳಿಯನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು. ಅಲ್ಲದೇ ಪ್ರಧಾನಿ ಮೋದಿಯವರ (Narendra Modi) ಬಗ್ಗೆ ಅಪಾರ ಗೌರವವಿದೆ ಎಂದು ಹೇಳಿದರು.
ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ (Akshata Murthy) ಅವರು ಶುಕ್ರವಾರ ನವದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅಲ್ಲಿ ಅವರನ್ನು ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ಸ್ವಾಗತಿಸಿದರು. ಅಲ್ಲದೇ ಸುನಕ್ ದಂಪತಿಗೆ ಭಗವದ್ಗೀತೆ ಮತ್ತು ಹನುಮಾನ್ ಚಾಲೀಸಾ ಪ್ರತಿ, ರುದ್ರಾಕ್ಷಿಯನ್ನು ನೀಡಿದರು.
ರಿಷಿ ಸುನಕ್ ಅವರು ತಮ್ಮ ಮೂರು ದಿನಗಳ ಭಾರತ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.
ಲೋಕಸಭೆಗೆ ಕಮಲ, ತೆನೆ ಮೈತ್ರಿ ಫೈನಲ್ – ಜೆಡಿಎಸ್‍ಗೆ 4 ಕ್ಷೇತ್ರವಷ್ಟೇ ಬಿಡಲು ಬಿಜೆಪಿ ಒಪ್ಪಿಗೆ
ಬೆಂಗಳೂರು: ಬಿಜೆಪಿ-ಜೆಡಿಎಸ್ (BJP-JDS) ಮೈತ್ರಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ (Lokasabha Election) ಈಗಿರುವ ಸ್ಥಾನಗಳನ್ನು ಉಳಿಸಿಕೊಳ್ಳುವ ಸಲುವಾಗಿ ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಇದರ ಭಾಗವಾಗಿ ರಾಜ್ಯದಲ್ಲಿ ಜೆಡಿಎಸ್ ಜೊತೆ ಮೈತ್ರಿಗೆ ಮುಂದಾಗಿದೆ.
ಇತ್ತೀಚಿಗೆ ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರು (HD Devegowda) ಮತ್ತು ಕೇಂದ್ರ ಸಚಿವ ಅಮಿತ್ ಶಾ (Amit Shah) ದೆಹಲಿಯಲ್ಲಿ ಸಭೆ ಸೇರಿ ಮೈತ್ರಿ ಸೂತ್ರ ಹೆಣೆದಿದ್ದಾರೆ. ಆದರೆ ಸೀಟು ಹಂಚಿಕೆ ಇನ್ನೂ ಅಂತಿಮಗೊಂಡಿಲ್ಲ. ಬಹುತೇಕ 24+4 ಸೀಟು ಹಂಚಿಕೆ ಸೂತ್ರವೇ ಫೈನಲ್ ಆಗುವ ಸಾಧ್ಯತೆಗಳಿವೆ. ಎಲ್ಲಾ ಸೂತ್ರಗಳಿಗೆ ಒಪ್ಪಿಗೆ ಸಿಕ್ಕಿದರೆ ಸೆಪ್ಟೆಂಬರ್ 10ಕ್ಕೆ ದೋಸ್ತಿ ಡೀಲ್ ಅಧಿಕೃತವಾಗಿ ಪ್ರಕಟವಾಗಬಹುದು ಎನ್ನಲಾಗಿದೆ.
ಇದಕ್ಕೆ ಪೂರಕವಾಗಿ ಸೆಪ್ಟೆಂಬರ್ 10 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಲು ಜೆಡಿಎಸ್ ಸಿದ್ಧತೆ ನಡೆಸಿದೆ. ಇವತ್ತು ಬೆಂಗಳೂರಲ್ಲಿ ಮಾತಾಡಿದ ಮಾಜಿ ಸಿಎಂ ಯಡಿಯೂರಪ್ಪ (Yediyurappa) ಮೈತ್ರಿಯ ಗುಟ್ಟನ್ನು ರಟ್ಟು ಮಾಡಿದ್ದಾರೆ. ಬಿಜೆಪಿ ಜೆಡಿಎಸ್ ಮೈತ್ರಿಗೆ ಪ್ರಧಾನಿ ಮೋದಿ ಒಪ್ಪಿಗೆ ನೀಡಿದ್ದಾರೆ. ರಾಜ್ಯದಲ್ಲಿ ನಾಲ್ಕು ಕ್ಷೇತ್ರಗಳನ್ನು ಜೆಡಿಎಸ್‍ಗೆ ಬಿಟ್ಟುಕೊಡಲು ಬಿಜೆಪಿ ಮುಂದಾಗಿದೆ ಎಂದಿದ್ದಾರೆ.
ಮೈತ್ರಿ ಅಧಿಕೃತ ಆದ ಮೇಲೆ ದೇವೇಗೌಡರು ಮತ್ತು ಕುಮಾರಸ್ವಾಮಿಯನ್ನು (Kumaraswamy) ಭೇಟಿ ಮಾಡುತ್ತೇನೆ ಎಂದು ಯಡಿಯೂರಪ್ಪ ಪ್ರಕಟಿಸಿದ್ದಾರೆ. ಮೈಸೂರು ಹಾಗೂ ಮಂಡ್ಯ ಕ್ಷೇತ್ರವನ್ನು ಬಿಜೆಪಿಯೇ ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸ್ತಿದೆ.
ಜೆಡಿಎಸ್ ಮೈತ್ರಿ ಸೂತ್ರ ಏನು?
7+21 ಸೀಟು ಹಂಚಿಕೆ ಸೂತ್ರವನ್ನು ಜೆಡಿಎಸ್ ಮುಂದಿಟ್ಟಿದೆ. ಹಾಸನ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರಕ್ಕೆ ಬೇಡಿಕೆ ಇಟ್ಟಿದೆ.
ಬಿಜೆಪಿ ಮೈತ್ರಿ ಸೂತ್ರ ಏನು?
24+4 ಸೀಟು ಹಂಚಿಕೆ ಸೂತ್ರವನ್ನು ಬಿಜೆಪಿ ಮಾಡಿದೆ. ಹಾಸನ, ತುಮಕೂರು, ಮಂಡ್ಯ ಬಿಟ್ಟು ಕೊಡಲು ಒಪ್ಪಿಗೆ ನೀಡಿದೆ ಎನ್ನಲಾಗಿದೆ. ಬೆಂಗಳೂರು ಗ್ರಾಮಾಂತರ ಅಥವಾ ಚಿಕ್ಕಬಳ್ಳಾಪುರ ಪೈಕಿ ಒಂದು ಕ್ಷೇತ್ರ ಜೆಡಿಎಸ್‍ಗೆ ಸಿಗುವ ಸಾಧ್ಯತೆಯಿದೆ.
ಕಮಲ-ತೆನೆ ಮೈತ್ರಿಗೆ ಮಂಡ್ಯ ಕಗ್ಗಂಟು
ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಿದ್ದು, ಕ್ಷೇತ್ರಕ್ಕೆ `ತೆನೆ’ ಬೇಡಿಕೆ ವ್ಯಕ್ತಪಡಿಸಿದೆ. ಒಂದು ವೇಳೆ ಬಿಜೆಪಿ ಒಪ್ಪಿಗೆ ನೀಡಿದರೆ ಹಾಲಿ ಎಂಪಿ ಸುಮಲತಾ ಅಂಬರೀಶ್ ಭವಿಷ್ಯವೇನು ಎಂಬ ಪ್ರಶ್ನೆ ಎದ್ದಿದೆ. ವಿಧಾನಸಭಾ ಚುನಾವಣೆ ಸಮಯದಲ್ಲಿ ಬಿಜೆಪಿಗೆ ಸುಮಲತಾ ಬೆಂಬಲ ನೀಡಿದ್ದರು. ಹೀಗಾಗಿ ಈ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಜೆಪಿ ಬಿಟ್ಟುಕೊಡುತ್ತಾ ಎಂಬ ಪ್ರಶ್ನೆ ಎದ್ದಿದೆ.