ಗಂಡನ 2ನೇ ಮದುವೆ; ಮನನೊಂದು ಮಹಿಳೆ ನೇಣಿಗೆ ಶರಣು
ನೇಣಿಗೆ ಶರಣಾದ ಮಹಿಳೆಯನ್ನು ವಿಶಾಲಾಕ್ಷಿ (21) ಎಂದು ಗುರುತಿಸಲಾಗಿದೆ. ಈಕೆಯ ಮನೆಯ ಹತ್ತಿರವೇ ವಾಸವಿದ್ದ ತಿಪ್ಪೇಸ್ವಾಮಿ, ಜಿಟಿಟಿಸಿಯಲ್ಲಿ (ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ) ತರಬೇತಿ ಪಡೆಯುತ್ತಿದ್ದ ವಿಶಾಲಾಕ್ಷಿಯನ್ನು ಪ್ರೀತಿಸಿ ಕಳೆದ ವರ್ಷವಷ್ಟೇ ವಿವಾಹವಾಗಿದ್ದ.
ದಲಿತ ಸಮುದಾಯದ ವಿಶಾಲಾಕ್ಷಿಯೊಂದಿಗೆ ಎಸ್ಟಿ ಸಮುದಾಯಕ್ಕೆ ಸೇರಿದ ತಿಪ್ಪೇಸ್ವಾಮಿ ವಿವಾಹವಾಗಿದ್ದ. ಇದನ್ನು ತಿಪ್ಪೇಸ್ವಾಮಿ ಕುಟುಂಬಸ್ಥರು ವಿರೋಧಿಸಿದ್ದರಿಂದ ಆಸಾಮಿ ಪತ್ನಿಯಿಂದ ದೂರವಾಗಿದ್ದ. ದಾರಿಕಾಣದ ವಿಶಾಲಾಕ್ಷಿ ಕೂನಬೇವು ಗ್ರಾಮದಲ್ಲಿದ್ದ ತನ್ನ ತವರು ಮನೆಯಲ್ಲಿದ್ದುಕೊಂಡೇ ಮತ್ತೆ ಜಿಟಿಟಿಸಿ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದರು.
ಈ ನಡುವೆ ತಿಪ್ಪೇಸ್ವಾಮಿ ಬೇರೊಬ್ಬ ಮಹಿಳೆಯೊಂದಿಗೆ ವಿವಾಹವಾದ ವಿಚಾರ ತಿಳಿದು ವಿಶಾಲಾಕ್ಷಿ ನೇಣಿಗೆ ಶರಣಾಗಿದ್ದಾಳೆ. ಈ ಸಂಬಂಧ ತುರುವನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶಾಲಾಕ್ಷಿ ಆತ್ಮಹತ್ಯೆಯಿಂದ ಆಕ್ರೋಶಗೊಂಡ ವಿಶಾಲಾಕ್ಷಿಯ ಕುಟುಂಬಸ್ಥರು ಹಾಗೂ ಸಂಬಂಧಿಕರು ಮೃತದೇಹದ ಅಂತ್ಯ ಸಂಸ್ಕಾರ ನಡೆಸದೇ ಚಿತ್ರದುರ್ಗ ಎಸ್ಪಿ ಕಚೇರಿ ಬಳಿ, ಧರಣಿ ನಡೆಸುತಿದ್ದಾರೆ. ವಿಶಾಲಾಕ್ಷಿ ಸಾವಿಗೆ ಕಾರಣವಾದ ತಿಪ್ಪೇಸ್ವಾಮಿಯನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟಿಸುತಿದ್ದಾರೆ. ಇದರಿಂದ ಪೊಲೀಸರು ಮೊದಲು ಮೃತ ಮಹಿಳೆಯ ಅಂತ್ಯಸಂಸ್ಕಾರ ನಡೆಸುವಂತೆ ಕುಟುಂಬಸ್ಥರ ಮನವೊಲಿಸಿದ್ದಾರೆ.