Hockey: 1972ರ ನಂತರ ಒಲಿಂಪಿಕ್ಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದ ಭಾರತ
Hockey: 1972ರ ನಂತರ ಒಲಿಂಪಿಕ್ಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದ ಭಾರತ. 2020 ರಲ್ಲಿ ನಡೆದಿದ್ದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದ ಭಾರತ ಹಾಕಿ (Hockey) ತಂಡ ಪ್ಯಾರಿಸ್ ಒಲಿಂಪಿಕ್ಸ್ನಲ್ಲೂ ಪದಕದ ನಿರೀಕ್ಷೆ ಹೆಚ್ಚಿಸಿದೆ.
ಪೂಲ್ ಹಂತದಲ್ಲಿ ಸತತವಾಗಿ ಅದ್ಭುತ ಪ್ರದರ್ಶನ ನೀಡುತ್ತಿರುವ ಕೋಚ್ ಕ್ರೇಗ್ ಫುಲ್ಟನ್ ಮತ್ತು ನಾಯಕ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡ, ಕ್ವಾರ್ಟರ್ ಫೈನಲ್ ಸುತ್ತಿಗೂ ಮುನ್ನ ನಡೆದ ಪೂಲ್ ಹಂತದ ಕೊನೆಯ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಸೋಲಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ಪೂಲ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಭಾರತ ತಂಡ ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಆಸ್ಟ್ರೇಲಿಯಾವನ್ನು 3-2 ಗೋಲುಗಳ ಅಂತರದಿಂದ ಮಣಿಸಿದೆ.
ಇದಕ್ಕೂ ಮುನ್ನ 1972ರ ಒಲಿಂಪಿಕ್ ಗೇಮ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು 3-1 ರಿಂದ ಸೋಲಿಸಿತ್ತು. ಅದಾದ 52 ವರ್ಷಗಳ ಬಳಿಕ ಈ ಗೆಲುವು ದಾಖಲಿಸಿದೆ. ಈ ನಡುವೆ ಆಡಿದ ಆರು ಪಂದ್ಯಗಳಲ್ಲಿ ಭಾರತ ಸೋಲು ಕಂಡಿದ್ದರೆ, ಒಂದು ಪಂದ್ಯವನ್ನು ಡ್ರಾ ಮಾಡಕೊಂಡಿತ್ತು. ಭಾರತ ತಂಡ ಈಗಾಗಲೇ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಗೆಲುವಿನೊಂದಿಗೆ ಭಾರತ ತಂಡ ಬಿ ಗುಂಪಿನ 2ನೇ ಸ್ಥಾನಿಯಾಗಿ ಲೀಗ್ ಹೋರಾಟ ಮುಗಿಸಿದೆ. ಹಾಲಿ ಒಲಿಂಪಿಕ್ ಚಾಂಪಿಯನ್ ಬೆಲ್ಜಿಯಂ ತಂಡ ಅಗ್ರಸ್ಥಾನ ಸಂಪಾದಿಸಿದೆ. ಬಿ ಗುಂಪಿನಿಂದ ಭಾರತ ಬೆಲ್ಜಿಯಂ ಅಲ್ಲದೆ, ಆಸ್ಟ್ರೇಲಿಯಾ ಹಾಗೂ ಅರ್ಜೆಂಟೀನಾ ತಂಡಗಳು ಕ್ವಾರ್ಟರ್ ಫೈನಲ್‌ಗೇರಿವೆ. ಎ ಗುಂಪಿನಿಂದ ನೆದರ್ಲೆಂಡ್ಸ್, ಜರ್ಮನಿ, ಗ್ರೇಟ್ ಬ್ರಿಟನ್ ಹಾಗೂ ಸ್ಪೇನ್ ತಂಡಗಳು ಮುಂದಿನ ಹಂತಕ್ಕೇರಿದೆ.
ಈ ಒಲಿಂಪಿಕ್ಸ್‌ನಲ್ಲಿ, ನಾಯಕ ಹರ್ಮನ್‌ಪ್ರೀತ್ ಸಿಂಗ್, ತಮ್ಮ ಡಿಫೆಂಡ್ ಕರ್ತವ್ಯವನ್ನು ನಿಭಾಯಿಸುವುದರೊಂದಿಗೆ, ಪೆನಾಲ್ಟಿ ಕಾರ್ನರ್‌ಗಳು ಮತ್ತು ಪೆನಾಲ್ಟಿ ಸ್ಟ್ರೋಕ್‌ಗಳಿಂದ ಗೋಲುಗಳನ್ನು ಗಳಿಸುವ ಮೂಲಕ ತಂಡವನ್ನು ನಿರಂತರವಾಗಿ ಗೆಲುವಿನತ್ತ ಮುನ್ನಡೆಸುತ್ತಿದ್ದಾರೆ.
ಟೀಂ ಇಂಡಿಯಾ ಮೊದಲ ಕ್ವಾರ್ಟರ್‌ನಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿ ಎರಡು ನಿಮಿಷಗಳ ಅಂತರದಲ್ಲಿ ಎರಡು ಗೋಲುಗಳನ್ನು ಗಳಿಸುವ ಮೂಲಕ 2-0 ಮುನ್ನಡೆ ಸಾಧಿಸಿತು. ಪಂದ್ಯದ 12ನೇ ನಿಮಿಷದಲ್ಲಿ ಅಭಿಷೇಕ್ ತಂಡದ ಪರ ಫೀಲ್ಡ್ ಗೋಲು ಗಳಿಸಿದರೆ, ಮರು ನಿಮಿಷದಲ್ಲೇ ನಾಯಕ ಹರ್ಮನ್‌ಪ್ರೀತ್ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು. ಆ ಬಳಿಕವೂ ಉತ್ತಮ ಆಟ ಮುಂದುವರೆಸಿದ ಭಾರತ ತಂಡ ಆಸ್ಟ್ರೇಲಿಯಾಕ್ಕೆ ಯಾವುದೇ ಅವಕಾಶ ನೀಡಲಿಲ್ಲ
ಆದರೆ 25ನೇ ನಿಮಿಷದಲ್ಲಿ ಆಸ್ಟ್ರೇಲಿಯ ಮೊದಲ ಗೋಲು ದಾಖಲಿಸಿ ಸ್ಕೋರ್ ಅನ್ನು 2-1 ಕ್ಕೆ ಕೊಂಡೊಯ್ಯಿತು. ಮೂರನೇ ಕ್ವಾರ್ಟರ್‌ನ ಆರಂಭದಲ್ಲಿ ಟೀಂ ಇಂಡಿಯಾ ಮತ್ತೆ ತನ್ನ ಮುನ್ನಡೆಯನ್ನು ಬಲಗೊಳಿಸಿ, 32ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಸ್ಟ್ರೋಕ್ ಅನ್ನು ಹರ್ಮನ್‌ಪ್ರೀತ್ ಗೋಲಾಗಿ ಪರಿವರ್ತಿಸಿದರು. ನಾಲ್ಕನೇ ಕ್ವಾರ್ಟರ್‌ನಲ್ಲಿ ಟೀಂ ಇಂಡಿಯಾ ಮತ್ತೊಂದು ಗೋಲು ದಾಖಲಿಸಿತು ಆದರೆ ರೆಫರಿ ಅದನ್ನು ಅಸಿಂಧುಗೊಳಿಸಿದರು. ನಂತರ ಆಸ್ಟ್ರೇಲಿಯಾದ ಸ್ಟಾರ್ ಬ್ಲೇಕ್ ಗೋವರ್ಸ್ 55ನೇ ನಿಮಿಷದಲ್ಲಿ ಪೆನಾಲ್ಟಿ ಗೋಲು ಗಳಿಸಿ ಸ್ಕೋರ್ ಅನ್ನು 3-2ಕ್ಕೆ ಏರಿಸಿದರು.
ಕೊನೆಯ 5 ನಿಮಿಷಗಳಲ್ಲಿ, ಆಸ್ಟ್ರೇಲಿಯಾವು ಹೆಚ್ಚು ಆಕ್ರಮಣಗಳನ್ನು ಮಾಡಿತು ಆದರೆ ಅನುಭವಿ ಗೋಲ್‌ಕೀಪರ್ ಪಿಆರ್ ಶ್ರೀಜೇಶ್ ಸೇರಿದಂತೆ ರಕ್ಷಣಾ ಪಡೆ ಈ ಪ್ರಯತ್ನಗಳನ್ನು ವಿಫಲಗೊಳಿಸಿ ಭಾರತಕ್ಕೆ ಐತಿಹಾಸಿಕ ಜಯವನ್ನು ನೀಡಿತು.
ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರ ಜೋಡಿ ಗೋಲ್‌ಗಳುಗಳು ಹಾಗೂ ಪಿಆರ್ ಶ್ರೀಜೇಶ್ ಅವರ ಗೋಲ್‌ಕೀಪಿಂಗ್ ವೀರಾವೇಶದಿಂದ ಒಲಿಂಪಿಕ್ಸ್‌ನಲ್ಲಿ ಭಾರತ ತನ್ನ ದೊಡ್ಡ ಗೆಲುವು ದಾಖಲಿಸಲು ಕಾರಣವಾಯಿತು.
ಹ್ಯಾಟ್ರಿಕ್ ಒಲಿಂಪಿಕ್ ಮೆಡಲ್‌ನತ್ತ ಮನು ಭಾಕರ್
ಈಗಾಗಲೇ ಹಾಲಿ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕಕ್ಕೆ ಕೊರಳೊಡ್ಡಿರುವ ಭಾರತದ ತಾರಾ ಶೂಟರ್ ಮನು ಭಾಕರ್, ಇದೀಗ ಹ್ಯಾಟ್ರಿಕ್ ಪದಕ ಮುಡಿಗೇರಿಸಿಕೊಳ್ಳುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ. ಇದೀಗ ಮನು ಭಾಕರ್ ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿಂದು ಫೈನಲ್‌ಗೆ ಎರಡನೇ ಸ್ಥಾನಿಯಾಗಿ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ. ಫೈನಲ್‌ನಲ್ಲೂ ಮನು ಭಾಕರ್ ಇಂತಹದ್ದೇ ಪ್ರದರ್ಶನ ತೋರಿದರೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮನು ಮೂರು ಪದಕ ತಮ್ಮದಾಗಿಸಿಕೊಳ್ಳಲಿದ್ದಾರೆ.
22 ವರ್ಷದ ಮನು ಭಾಕರ್ ಈಗಾಗಲೇ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸುವ ಮೂಲಕ ಭಾರತ ಪರ ಪದಕದ ಖಾತೆ ತೆರೆದಿದ್ದರು. ಇನ್ನು ಇದಾದ ಬಳಿಕ ಸರಬ್ಜೋತ್ ಸಿಂಗ್ ಜತೆಗೂಡಿ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲೂ ಮನು ಭಾಕರ್ ಕಂಚಿನ ಜಯಿಸಿದ್ದರು. ಈ ಮೂಲಕ ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲೇ ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಜಯಿಸಿದ ಭಾರತದ ಮೊದಲ ಅಥ್ಲೀಟ್ ಎನ್ನುವ ಐತಿಹಾಸಿಕ ದಾಖಲೆ ನಿರ್ಮಿಸಿದ್ದರು.
ಇದೀಗ ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯ ಫೈನಲ್ ಪಂದ್ಯವು ಆಗಸ್ಟ್ 03ರ ಮಧ್ಯಾಹ್ನ 1 ಗಂಟೆಯಿಂದ ಆರಂಭವಾಗಲಿದ್ದು, ಮನು ಭಾಕರ್ ಹ್ಯಾಟ್ರಿಕ್ ಒಲಿಂಪಿಕ್ಸ್ ಪದಕವನ್ನು ತಮ್ಮದಾಗಿಸಿಕೊಳ್ಳಲಿ ಎನ್ನುವುದು ಕೋಟ್ಯಾಂತರ ಅಭಿಮಾನಿಗಳ ಹಾರೈಕೆಯಾಗಿದೆ.