ನಳೀನ್ ಕುಮಾರ್ ಕಟೀಲ್ ಗೆ ಟಿಕೆಟ್ ಕೈ ತಪ್ಪಿದರೂ ಮಹತ್ವದ ಹುದ್ದೆ ಕೊಟ್ಟ ಹೈಕಮಾಂಡ್.!
ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರವನ್ನು ಕಳೆದ ಮೂರು ಅವಧಿಯಿಂದ ಬಿಜೆಪಿ ಸಂಸದರಾಗಿ ನಳಿನ್ ಕುಮಾರ್ ಕಟೀಲ್ ಪ್ರತಿನಿಧಿಸಿದ್ದರು. ಈ ಬಾರಿ ಪಕ್ಷದ ಆಂತರಿಕ ವಿರೋಧದಿಂದಾಗಿ ದಕ್ಷಿಣ ಕನ್ನಡದ ಟಿಕೆಟ್ ಕೈತಪ್ಪಿದ್ದು, ರಾಜ್ಯಾಧ್ಯಕ್ಷ ಹುದ್ದೆಯೂ ಕೈಬಿಟ್ಟಿದೆ. ಆದರೆ ಮತ್ತೊಂದು ಜವಾಬ್ದಾರಿ ಕೊಡಲಾಗಿದೆ.
ತೆಲಂಗಾಣ ಪ್ರಭಾರಿಯಾಗಿ ಅಭಯ್ ಪಾಟೀಲ್, ಮಹಾರಾಷ್ಟ್ರ ಸಹ ಪ್ರಭಾರಿಯಾಗಿ ನಿರ್ಮಲ್‌ಕುಮಾರ್ ಸುರಾನಾ ಅವರ ನೇಮಕ ಮಾಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆದೇಶ ಹೊರಡಿಸಿದ್ದಾರೆ.
440 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧೆ
ಬಿಜೆಪಿ ಈ ಬಾರಿ ಸುಮಾರು 440 ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆ ಇದ್ದು, ಈಗಾಗಲೇ 402 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಈ ಮೂಲಕ ತಾನು ಸ್ಪರ್ಧೆ ಮಾಡುವ ಸುಮಾರು 90ರಷ್ಟು ಕ್ಷೇತ್ರಗಳಿಗೆ ಅಭ್ಯರ್ಥಿಯನ್ನ ಘೋಷಣೆ ಮಾಡಿದಂತಾಗಿದೆ. 2019ರಂತೆ ಈ ಬಾರಿಯೂ ಬಿಜೆಪಿ ಭಾರೀ ಪ್ರಮಾಣದಲ್ಲಿ ಹೊಸ ಮುಖಗಳಿಗೆ ಮಣೆ ಹಾಕಿದೆ. ಈಗಾಗಲೇ 303 ಹಾಲಿ ಸಂಸದರ ಪೈಕಿ 100 ಮಂದಿಗೆ ಖೊಕ್ ನೀಡಿದೆ. ಈ ಮೂಲಕ ಕ್ಷೇತ್ರದಲ್ಲಿರಬಹುದಾದ ಆಡಳಿತ ವಿರೋಧಿ ಅಲೆಗೆ ಮದ್ದರೆದಿದೆ. ಹಾಗೂ ಕೆಲಸ ಮಾಡದ ಸಂಸದರಿಗೆ ಜೊತೆಗೆ 75 ವರ್ಷ ಮೇಲ್ಪಟ್ಟ ಹಲವು ಮಂದಿ ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಿದೆ.
ಬಿಜೆಪಿ ಈ ಬಾರಿ ತನ್ನ ಮಿತ್ರಪಕ್ಷಗಳ ಜೊತೆಗೆ 400 ಕ್ಷೇತ್ರ ಗೆಲ್ಲುವ ಗುರಿ ಹಾಕಿಕೊಂಡಿದ್ದು, ಬಿಜೆಪಿಯೊಂದೇ 370 ಕ್ಷೇತ್ರಗಳನ್ನು ಏಕಾಂಗಿಯಾಗಿ ಗೆಲ್ಲಲು ಪ್ಲ್ಯಾನ್ ಮಾಡಿಕೊಂಡಿದೆ. ಹೀಗಾಗಿ ಆದಷ್ಟು ಬೇಗ ಅಭ್ಯರ್ಥಿಗಳ ಘೋಷಣೆ ಮಾಡುವ ಲೆಕ್ಕಾಚಾರವನ್ನು ಅನುಷ್ಠಾನ ಮಾಡಿ ಮುಗಿಸಿದೆ. ಈ ಮೂಲಕ ಬಿಜೆಪಿ ಅಭ್ಯರ್ಥಿಗಳು ಹೆಚ್ಚು ಪ್ರಚಾರ ಮಾಡಲು ಕಾಲಾವಕಾಶ ಸಿಕ್ಕಂತಾಗಿದೆ. ಬಿಜೆಪಿ ಕಳೆದ ಬಾರಿ ಅಂದರೆ 2019ರಲ್ಲಿ ಶೇ.70ರಷ್ಟಿದ್ದ ಪ್ರಚಾರದ ಪ್ರಮಾಣವನ್ನು ಈ ಬಾರಿ ಶೇ .83ಕ್ಕೆ ಏರಿಸುವ ಗುರಿ ಇಟ್ಟುಕೊಂಡಿದೆ.
ಈ ಬಾರಿಯ ಟಿಕೆಟ್ ಹಂಚಿಕೆಯಲ್ಲಿ ಕೇಸರಿ ಪಡೆ ಹಲವು ಘಟಾನುಘಟಿಗಳಿಗೆ ಟಿಕೆಟ್ ತಪ್ಪಿಸಿದೆ. ಈ ಪೈಕಿ ಪ್ರಮುಖರೆಂದರೆ ಘಾಜಿಯಾಬಾದ್‌ನ ಜನರಲ್ ವಿ.ಕೆ ಸಿಂಗ್, ಬಕ್ಸರ್‌ನ ಅಶ್ವಿನಿ ಚೌಬೆ, ನವದೆಹಲಿಯ ಮೀನಾಕ್ಷಿ ಲೇಖಿ, ಕರ್ನಾಟಕದ ಸದಾನಂದಗೌಡ ಹಾಗೂ ಅನಂತ್ ಕುಮಾರ್ ಹೆಗಡೆಯವರಂತಹ ದೊಡ್ಡ ನಾಯಕರು, ಕೇಂದ್ರ ಮಂತ್ರಿಗಳು ಸೇರಿದ್ದಾರೆ. ಹಾಗೇ ವಿವಾದಾತ್ಮಕ ನಾಯಕರಾದ ಸಾಧ್ವಿ ಪ್ರಜ್ಞಾ ಠಾಕೂರ್, ರಮೇಶ್ ಬಿಧುರಿ ಮತ್ತು ಪ್ರವೇಶ್ ವರ್ಮಾ ಅವರನ್ನು ಕೈಬಿಟ್ಟಿದೆ.
ಈ ಬಾರಿ ಟಿಕೆಟ್ ದೊರೆಯದ ನಾಯಕರನ್ನು ಪ್ರಚಾರಕ್ಕೆ ತೊಡಗಿಸಿಕೊಂಡು ಪಕ್ಷದ ಗೆಲುವಿಗೆ ಕೈ ಜೋಡಿಸುವಂತೆ ಬಿಜೆಪಿ ಹೈಕಮಾಂಡ್ ಹಾಲಿ ಸಂಸದರಿಗೆ ಸೂಚನೆ ನೀಡಿದೆ. ತನ್ನ ಹಲವು ಹಳೆಯ ಮಿತ್ರರನ್ನು ಮೈತ್ರಿಕೂಟಕ್ಕೆ ಸೇರಿಸಿಕೊಂಡಿದ್ದು, ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಹಾಗೂ ಜನಸೇನೆ ಜೊತೆ ಮೈತ್ರಿ ಮಾಡಿಕೊಂಡಿದೆ. ಆಂಧ್ರಪ್ರದೇಶದಲ್ಲಿ ಬಿಜೆಪಿ 6 ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕೆ ಇಳಿದಿದೆ.
ಒಡಿಶಾದಲ್ಲಿ ಬಿಜೆಪಿ ಹಾಗೂ ಬಿಜೆಡಿ ಮೈತ್ರಿ ಮಾತುಕತೆ ಮುರಿದುಬಿದ್ದಿದ್ದು, ಬಿಜೆಪಿ ಎಲ್ಲಾ 21 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದೆ. ಪಂಜಾಬ್‌ನಲ್ಲೂ ಅಕಾಲಿದಳ ಹಾಗೂ ಬಿಜೆಪಿ ಮೈತ್ರಿ ಮುರಿದುಬಿದ್ದಿದ್ದು, ಎಲ್ಲಾ 13 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡುವುದಾಗಿ ಪಂಜಾಬ್ ಬಿಜೆಪಿ ರಾಜ್ಯಾಧ್ಯಕ್ಷ ಸುನಿಲ್ ಜಾಖರ್ ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿರುವ ಬಿಜೆಪಿ 27 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದೆ. ಈ ಪೈಕಿ 23 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.
ಇದುವರೆಗೂ ಭಾರತೀಯ ಜನತಾ ಪಕ್ಷ, 402 ಅಭ್ಯರ್ಥಿಗಳನ್ನು ಘೋಷಿಸಿದೆ. ಮೊದಲ ಪಟ್ಟಿಯಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಸೇರಿದಂತೆ ಪ್ರಮುಖ ನಾಯಕರ ಹೆಸರನ್ನ ಘೋಷಿಸಿತ್ತು. ಕಾಂಗ್ರೆಸ್ ಇದುವರೆಗೂ 193 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.