ನ್ಯೂಜಿಲೆಂಡ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ರಾಚಿನ್ ರವೀಂದ್ರ ರವರ ಪರಿಚಯ ಇಲ್ಲಿದೆ..!
ಅಪ್ಪನ ಕನಸು ಈಡೇರಿಸುವುದು ಅಂದರೆ ಮಕ್ಕಳಿಗೆ ಅದೇ ದೊಡ್ಡ ಸಂತೋಷ. ಅದ್ರಲ್ಲೂ ಕ್ರೀಡೆಯಲ್ಲಿ ಅಪ್ಪ & ಅಮ್ಮನ ಕನಸು ಈಡೇರಿಸುವುದೇ ಬಹುತೇಕ ಕ್ರೀಡಾಪಟುಗಳ ಗುರಿ. ಹೀಗೆ ಕನ್ನಡ ನೆಲದ ಕುವರ, ಇಂದು ನಡೆದ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ತನ್ನ ತಂದೆ ಆಸೆ ಈಡೇರಿಸಿದ್ದಾನೆ.
ಇಂದಿನಿಂದ 2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಭಾರತದಲ್ಲಿ ಅದ್ಧೂರಿಯಾಗಿ ಶುರು ಆಗಿದೆ. ಆದರೆ ಮೊದಲ ಪಂದ್ಯದಲ್ಲೇ ಆಂಗ್ಲರು ಮಣ್ಣು ಮುಕ್ಕಿದ್ದಾರೆ. ಹೀಗಿದ್ದಾಗ ಭಾರತ ಮತ್ತು ಭಾರತೀಯರು ಕೂಡ ಖುಷಿಪಡುವ ಸುದ್ದಿ ಸಿಕ್ಕಿದೆ. ಅದ್ರಲ್ಲೂ ಟೀಂ ನ್ಯೂಜಿಲೆಂಡ್ ಇಂದು ಗೆದ್ದು ಬೀಗಲು ಕಾರಣವಾಗಿದ್ದೇ ನಮ್ಮ ಹೆಮ್ಮೆಯ ಕನ್ನಡ ನಾಡಿನ ಕುವರ. ಅರೆರೆ ಅದು ಹೇಗೆ ಸಾಧ್ಯ ಅಂದ್ರಾ? ಚೊಚ್ಚಲ ವಿಶ್ವಕಪ್ ಪಂದ್ಯದಲ್ಲೇ ಶತಕ ಸಿಡಿಸಿರುವ ರಚಿನ್ ರವೀಂದ್ರ ಅವರ ಕಂಪ್ಲೀಟ್ ಕಹಾನಿ ಇಲ್ಲಿದೆ.
ಕನ್ನಡ ನಾಡಿಗೂ ನ್ಯೂಜಿಲ್ಯಾಂಡ್‌ಗೂ ನಂಟು! ಹೌದು, ವಿಶ್ವಕಪ್-2023 ಭರ್ಜರಿಯಾಗಿ ಶುರುವಾಗಿದ್ದು ಮೊದಲನೇ ಪಂದ್ಯದಲ್ಲಿ ಇಂಗ್ಲೆಂಡ್ & ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿ ಆಗಿದ್ದವು. ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಕಿವೀಸ್ ತಂಡ ತನ್ನ ರಣತಂತ್ರದಲ್ಲಿ ಬದಲಾವಣೆ ಮಾಡಿತ್ತು. ಕಿವೀಸ್ ತಂಡ ಮೊದಲ ಪಂದ್ಯದಲ್ಲಿ ರಚಿನ್ ರವೀಂದ್ರ ಅವರಿಗೆ ಅವಕಾಶ ನೀಡುವ ಮೂಲಕ ಅಚ್ಚರಿ ಮೂಡಿಸಿತ್ತು. ವರ್ಲ್ಡ್‌ಕಪ್ ಮೊದಲ ಪಂದ್ಯದಲ್ಲಿಯೇ ಅವಕಾಶ ಗಿಟ್ಟಿಸಿಕೊಂಡಿರುವ ರಚಿನ್ ರವೀಂದ್ರ ಇಂಗ್ಲೆಂಡ್ ವಿರುದ್ಧ ನರೇಂದ್ರ ಮೋದಿ ಮೈದಾನದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಅಲ್ಲದೆ ಭರ್ಜರಿ ಸೆಂಚ್ಯುರಿ ಸಿಡಿಸಿ ಇಡೀ ಜಗತ್ತಿನ ಗಮನ ಸೆಳೆದರು. ಇದೆಲ್ಲಕ್ಕಿಂತ ಮುಖ್ಯವಾದ ಅಂಶ ಏನೆಂದರೆ ಈ ಯುವಕ ರಚಿನ್‌ಗೂ ಕನ್ನಡ ನಾಡಿಗೂ ಸಂಬಂಧ ಇದೆ ಗೊತ್ತಾ?
ಸಚಿನ್ & ದ್ರಾವಿಡ್ ಫ್ಯಾನ್ ರಚಿನ್ ಅಪ್ಪ!
ರಚಿನ್ ರವೀಂದ್ರ ಭಾರತ ಮೂಲದ ಆಟಗಾರ. ರವೀಂದ್ರ ಅವರ ತಂದೆ ರವಿ ಕೃಷ್ಣಮೂರ್ತಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾರೆ. ಕೆಲಸದ ಕಾರಣಕ್ಕೆ 90ರ ದಶಕದಲ್ಲಿ ಬೆಂಗಳೂರಿನಿಂದ ನ್ಯೂಜಿಲೆಂಡ್‌ಗೆ ಹೋಗಿದ್ರು ರಚಿನ್ ರವೀಂದ್ರ ಅವರ ತಂದೆ. ಹೀಗೆ ನ್ಯೂಜಿಲೆಂಡ್ ದೇಶಕ್ಕೆ ಹೋಗಿ ಸೆಟಲ್ ಆಗಿದ್ದ ರವಿ ಕೃಷ್ಣಮೂರ್ತಿ ಅವರಿಗೆ ರಚಿನ್ ರವೀಂದ್ರ ಜನಿಸಿದ್ದರು. 1999 ನವೆಂಬರ್ 18ರಂದು ರಚಿನ್ ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್ ನಗರದಲ್ಲಿ ಜನಿಸಿದ್ದರು.
ರಾಹುಲ್ ದ್ರಾವಿಡ್ + ಸಚಿನ್ = ರಚಿನ್!
ರಚಿನ್ ಚಿಕ್ಕ ವಯಸ್ಸಿನಲ್ಲೇ ತಮ್ಮ ಪ್ರತಿಭೆ ಮೂಲಕ ನ್ಯೂಜಿಲೆಂಡ್ ಅಂಡರ್ 19 ತಂಡ ಸೇರಿ ಮಿಂಚಿದರು. ನ್ಯೂಜಿಲೆಂಡ್ ದೇಸಿ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ ಅವರನ್ನ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಅಷ್ಟಕ್ಕೂ ರಚಿನ್ ತಂದೆ ರವಿ ಕೃಷ್ಣಮೂರ್ತಿ ಅವರು ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಅವರ ದೊಡ್ಡ ಅಭಿಮಾನಿ. ಇದೇ ಕಾರಣಕ್ಕೆ ರಚಿನ್ ಅವರಿಗೆ ಈ ಹೆಸರು ಇಟ್ಟಿದ್ದರಂತೆ. ರಾಹುಲ್ ಅವರ ಆರ್ ಮತ್ತು ಸಚಿನ್ ಹೆಸರಿನಿಂದ ಚಿನ್ ಸಂಯೋಜಿಸಿ ಮಗನಿಗೆ ಹೆಸರು ಇಟ್ಟಿದ್ದರಂತೆ. ಹೀಗಾಗಿ ರಚಿನ್ ಹೆಸರನ್ನು ಇಟ್ಟುಕೊಂಡಿದ್ದ ರಚಿನ್ ರವೀಂದ್ರ ಇಂದು ಇಂಗ್ಲೆಂಡ್ ತಂಡದ ಬೌಲರ್‌ಗಳ ಬೆವರು ಇಳಿಸಿ ಮೆರೆದಿದ್ದಾರೆ. ಹೀಗೆ ರಚಿನ್ ರವೀಂದ್ರ ಎಂಟ್ರಿ ಕೊಟ್ಟ ಮೊದಲನೇ ಪಂದ್ಯದಲ್ಲೇ ಸೆಂಚ್ಯುರಿ ಗಳಿಸಿ ದಾಖಲೆ ಬರೆದಿದ್ದಾರೆ. ಒಟ್ಟು 96 ಬಾಲ್‌ಗಳಲ್ಲಿ 123 ರನ್ ಗಳಿಸಿದ ರಚಿನ್ ರವೀಂದ್ರ ಇಡೀ ವಿಶ್ವದ ಗಮನ ಸೆಳೆದರು. ರಚಿನ್ ಅವರ 123 ರನ್‌ಗಳಲ್ಲಿ 5 ಸಿಕ್ಸರ್ ಹಾಗೂ 11 ಬೌಂಡರಿ ಕೂಡ ಸೇರಿತ್ತು. ರಚಿನ್ ರವೀಂದ್ರ ನ್ಯೂಜಿಲೆಂಡ್ ಪರ ಇಲ್ಲಿಯತನಕ 3 ಟೆಸ್ಟ್, 12 ಏಕದಿನ ಹಾಗೂ 18 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದೀಗ ವಿಶ್ವಕಪ್ ಮೊದಲ ಪಂದ್ಯದಲ್ಲೇ ಇಂಗ್ಲೆಂಡ್ ತಂಡದ ಆಟಗಾರರ ಬೆವರು ಇಳಿಸಿ, ಭರ್ಜರಿ ಶತಕ ಗಳಿಸಿದ್ದಾರೆ.