ಚುನಾವಣೆಗೆ ಸ್ಪರ್ಧಿಸದಂತೆ ಟಿಕೆಟ್ ತಪ್ಪಿಸಲು ನನ್ನ ವಿರುದ್ಧ ಪಿತೂರಿ ನಡೆಯುತ್ತಿದೆ; ಶೋಭಾ ಕರಂದ್ಲಾಜೆ
ಉಡುಪಿ – ಚಿಕ್ಕಮಗಳೂರು ಕ್ಷೇತ್ರದಲ್ಲಿ ನನಗೆ ಟಿಕೆಟ್ ತಪ್ಪಿಸಲು ಪಿತೂರಿ ನಡೆಯುತ್ತಿದೆ. ಯಾವಾಗ ವಿರೋಧ ವ್ಯಕ್ತವಾಗುತ್ತೋ ಆಗಲೇ ನಮ್ಮ ನಾಯಕರು ನಮ್ಮ ಬಗ್ಗೆ ಮಾಹಿತಿ ಕಲೆ ಹಾಕ್ತಾರೆ. ನಮ್ಮವರು ವಿರೋಧ ಮಾಡಿದ ಕಾರಣಕ್ಕೆ ನನಗೆ ಅನುಕೂಲ ಆಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ವಿರೋಧ ಇಲ್ಲವಾದರೆ ಶೋಭಾ ಒಳ್ಳೆಯ ಕೆಲಸ ಮಾಡ್ತಿದ್ದಾರೆ, ಪಕ್ಷ ಕೆಲಸ ಮಾಡುತ್ತಾರೆ ಎಂದಷ್ಟೇ ಹೇಳ್ತಾರೆ. ಶೋಭಾಗೆ ಏಕೆ ವಿರೋಧ ಮಾಡ್ತಿದ್ದಾರೆ ಎಂದು ಪಕ್ಷದ ನಾಯಕರೂ ಮಾಹಿತಿ ಕಲೆ ಹಾಕ್ತಿದ್ದಾರೆ. ಆಗಲೇ ಸತ್ಯ ಗೊತ್ತಾಗೋದು, ನಮ್ಮ ವ್ಯಕ್ತಿತ್ವವೇನು? ನಮ್ಮ ಅಭಿವೃದ್ಧಿ ಕೆಲಸಗಳು ಏನು ಎಂಬುದು ಗೊತ್ತಾಗುತ್ತವೆ. ನಾವೇನು ಮಾಡಿಲ್ಲ, ಏನನ್ನು ಮಾಡಬಾರದು ಎಂಬುದು ಇಂಥ ವರದಿ ಪಡೆಯುವುದರಿಂದ ಗೊತ್ತಾಗುತ್ತದೆ. ಚುನಾವಣೆ ಸಮಯ ಬಹಳಷ್ಟು ಸೂಕ್ಷ್ಮತೆಯಿಂದ ಕೂಡಿರುತ್ತದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಹೇಗಿದೆ ಎಂದರೆ ಇಲ್ಲಿ ಬಹುಸಂಖ್ಯಾತರಿಗೆ ರಕ್ಷಣೆ ಇಲ್ಲ.ಅಲ್ಪಸಂಖ್ಯಾತರಿಗೆ ಎಲ್ಲವೂ ಇದೆ. ಅವರಿಗೆ ಮೃಷ್ಠಾನ್ನ ಭೋಜನ. ನಮಗೆ ಒಣರೊಟ್ಟಿ ಊಟ ಸ್ಥಿತಿ ನಿರ್ಮಾಣವಾಗಿದೆ. ವಿಧಾನಸೌಧ, ಮುಖ್ಯಮಂತ್ರಿಗಳ ಕಚೇರಿ ಮತ್ತು ಮನೆ ಭಯೋತ್ಪಾದನೆ ಬೆಳೆಸುವ ಕೇಂದ್ರಗಳಾಗಿವೆ. ನಾವು ನಿಷೇಧ ಮಾಡಿರುವ ಸಂಘಟನೆಗಳ ಸದಸ್ಯರು ಇವರ ಮನೆ ಕಚೇರಿ ಹಾಗೂ ಗೃಹಸಚಿವರ ಮನೆಯ ಮುಂದೆ ಕುಳಿತಿರುತ್ತಾರೆ ಎಂದರು.
ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ ಅವರ ಸಾವಿರದಷ್ಟು ಬೆಂಬಲಿಗರು ವಿಧಾನಸೌಧಕ್ಕೆ ಹೇಗೆ ಬಂದರು. ಅವರಿಗೆ ಯಾರು ಪಾಸುಗಳನ್ನು ಕೊಟ್ಟರು ಎಂದು ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.
ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಕರ್ನಾಟಕ ಭಯೋತ್ಪಾದಕರ ಸುರಕ್ಷಿತ ಅಡಗುತಾಣವಾಗಿದೆ. ನಮಗೆ ಇದು ಬಹಳ ಸುರಕ್ಷಿತ ಸ್ಥಳ, ಇಲ್ಲಿನ ಸಚಿವರು ನಮ್ಮ ರಕ್ಷಣೆಗೆ ಬರುತ್ತಾರೆ ಎಂಬ ಭಾವನೆ ಅವರಲ್ಲಿದೆ. ಇದೇ ಕಾರಣದಿಂದ ಇಂತಹ ದೇಶದ್ರೋಹ ಘಟನೆಗಳು ನಡೆಯುತ್ತಿವೆ. ಕಾಂಗ್ರೆಸ್ ಸರಕಾರಕ್ಕೆ ಕೇವಲ ಮತಬ್ಯಾಂಕ್ ಚಿಂತೆ. ಅದಕ್ಕಾಗಿ ಅವರು ಏನೂ ಮಾಡಲು ಸಿದ್ಧ ಎಂದು ವಾಗ್ದಾಳಿ ನಡೆಸಿದರು.
ಶೋಭಾ ಕರಂದ್ಲಾಜೆಗೆ ಬಿಜೆಪಿ ಟಿಕೆಟ್ ನೀಡದಂತೆ ಬಿಜೆಪಿ ಕಾರ್ಯಕರ್ತರ ಒತ್ತಡ: ಹಾಲಿ ಸಂಸದೆ ಶೋಭಾ ಕರಂದ್ಲಾಜೆಗೆ ಬಿಜೆಪಿ ಟಿಕೆಟ್ ನೀಡದಂತೆ ಚಿಕ್ಕಮಗಳೂರಿನಲ್ಲಿ ಕೆಲ ಬಿಜೆಪಿ ಕಾರ್ಯಕರ್ತರು ಪತ್ರ ಚಳುವಳಿ ನಡೆಸಿದ್ದರು. ಪ್ರಧಾನಿ ನರೇಂದ್ರ ಮೋದಿ, ಜೆ.ಪಿ.ನಡ್ಡಾ, ಹಾಗೂ ಅಮಿತ್ ಷಾಗೆ ಪತ್ರ ಬರೆದ ಬಿಜೆಪಿ ಕಾರ್ಯಕರ್ತರು ಹೊಸ ಮುಖಕ್ಕೆ ಟಿಕೆಟ್ ನೀಡುವಂತೆ ಆಗ್ರಹಿಸಿದ್ದರು.
ಉಡುಪಿ ಚಿಕ್ಕಮಗಳೂರು ಲೋಕಾಸಭಾ ಕ್ಷೇತ್ರದಲ್ಲಿ ಎರಡು ಭಾರಿ ಶೋಭಾ ಕರಂದ್ಲಾಜೆ ಆಯ್ಕೆಯಾಗಿದ್ದು ಕ್ಷೇತ್ರಕ್ಕೆ ಹೆಚ್ಚು ಕೊಡುಗೆ ನೀಡಿಲ್ಲ. ಹಾಗಾಗಿ ಬಿಜೆಪಿ ಟಿಕೆಟ್ ಹೊಸ ಮುಖಕ್ಕೆ ನೀಡಬೇಕು ಎಂದು 5 ಸಾವಿರಕ್ಕೂ ಹೆಚ್ಚು ಪತ್ರಗಳನ್ನು ಚಿಕ್ಕಮಗಳೂರು ನಗರದ ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಡುವ ಮೂಲಕ ಬಿಜೆಪಿ ಕಾರ್ಯಕರ್ತರು ಮನವಿ ಮಾಡಿದ್ದರು.