ಹೃದಯಾಘಾತದಿಂದ ಹೆಡ್ ಕಾನ್ಸ್ಟೇಬಲ್ ನಿಧನ!
ವಿಜಯನಗರ: ಕರೊನಾ ವೈರಸ್ ನಂತರದ ಕಾಲದಲ್ಲಿ ಹೃದಯಾಘಾತ ಹಾಗೂ ಕುಸಿದು ಬಿದ್ದು ಸಾಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ತೀವ್ರ ಆತಂಕವನ್ನು ಸೃಷ್ಟಿ ಮಾಡಿದೆ. ಪ್ರತಿನಿತ್ಯ ಒಂದಲ್ಲ ಒಂದು ಕಡೆ ಹೃದಯಾಘಾತಕ್ಕೀಡಾಗಿ ಕುಸಿದು ಬಿದ್ದು ಸಾವಿಗೀಡಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿದ್ದು, ಕಾರಣ ಏನು ಎಂಬುದು ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ.
ಇದೀಗ ಹೃದಯಾಘಾತಕ್ಕೆ ಪೊಲೀಸ್ ಸಿಬ್ಬಂದಿಯೊಬ್ಬರು ಬಲಿಯಾಗಿದ್ದಾರೆ. ನಿನ್ನೆ ತಡರಾತ್ರಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಘಟನೆ ನಡೆದಿದ್ದು, ಮೃತರನ್ನು ಪೊಲೀಸ್ ಕಾನ್ಸ್ಟೆಬಲ್ ರಾಘವೇಂದ್ರ ಎಂದು ಗುರುತಿಸಲಾಗಿದೆ.
ರಾಘವೇಂದ್ರ ಅವರು 2005ರಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ನೇಮಕವಾದರು. ಕಳೆದ 18 ವರ್ಷದಿಂದ ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಇತ್ತೀಚಿಗಷ್ಟೇ ಬಳ್ಳಾರಿಯ ಲೋಕಾಯುಕ್ತ ಕಚೇರಿಯಿಂದ ಕಮಲಾಪುರ ಠಾಣೆಗೆ ವರ್ಗಾವಣೆ ಆಗಿದ್ದರು. ಹೆಡ್ ಕಾನ್ಸ್ಟೆಬಲ್ ಆಗಿ ಬಡ್ತಿ ಪಡೆದು ಸೇವೆ ಸಲ್ಲಿಸುತ್ತಿದ್ದರು.
ವಿಜಯನಗರದ ಪೊಲೀಸ್ ವರಿಷ್ಠಧಿಕಾರಿ ಶ್ರೀಹರಿ ಬಾಬು ಬಿ.ಎಲ್., ಡಿವೈಎಸ್ಪಿ ಮಂಜುನಾಥ್ ತಳವಾರ್, ಹಂಪಿ ಸಿಪಿಐ ಕೆ. ಶಿವರಾಜ್ ಅವರು ರಾಘವೇಂದ್ರ ಅವರ ಅಕಾಲಿಕ ಮರಣಕ್ಕೆ ಸಂತಾಪ ಸೂಚಿಸಿದ್ದು, ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಮೃತ ರಾಘವೇಂದ್ರ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕುಟುಂಬದ ಆಧಾರಸ್ತಂಭವನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.