ಹೆಡ್ ಕಾನ್ಸ್ಟೆಬಲ್ ಹತ್ಯೆ ಪ್ರಕರಣ: ಮೂವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್
ಕಲಬುರಗಿ: ಮರಳು ದಂಧೆಕೋರರಿಂದ ಹೆಡ್ ಕಾನ್ಸ್ಟೆಬಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ನಿರ್ಲಕ್ಷ್ಯ ಆರೋಪದಡಿಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಜೇವರ್ಗಿ ಠಾಣೆಯ ಸಿಪಿಐ ಭೀಮನಗೌಡ್ ಬಿರಾದರ್, ನೆಲೋಗಿ ಠಾಣೆಯ ಪಿಎಸ್ಐ ಗೌತಮ್ ಗುತ್ತೆದಾರ್ ಮತ್ತು ಕಾನ್ಸ್ಟೆಬಲ್ ರಾಜಶೇಖರ ಎಂಬುವರನ್ನು ಅಮಾನತು ಮಾಡಿ ಕಲಬರಗಿ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಇಶಾ ಪಂತ್ ಅವರು ಆದೇಶ ಹೊರಡಿಸಿದ್ದಾರೆ.
ಜೇವರ್ಗಿ ತಾಲೂಕಿನ ಹುಲ್ಲೂರ್ ಬಳಿ ಅಕ್ರಮವಾಗಿ ಮರಳು ಶೇಖರಣೆ ಮಾಡಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಆದರೂ ಇನ್ಸ್ಪೆಕ್ಟರ್ ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ಮಾಡಿರಲಿಲ್ಲ. ದಂಧೆಕೋರರು ಪ್ರತಿನಿತ್ಯ ಹುಲ್ಲೂರ್ ಸ್ಟಾಕ್ ಯಾರ್ಡ್ನಿಂದ ಅಕ್ರಮವಾಗಿ ಮರಳು ಪೂರೈಕೆ ಮಾಡುತ್ತಿದ್ದರು. ನೆಲೋಗಿ ಪಿಎಸ್ಐ ಗೌತಮ್ ಕೂಡ ಸ್ಪಾಟ್ ವಿಸಿಟ್ ಮಾಡಿರಲಿಲ್ಲ.
ಇನ್ಸ್ಪೆಕ್ಟರ್ ಹಾಗೂ ಸಬ್ ಇನ್ಸ್ಪೆಕ್ಟರ್ ಕೇವಲ ಇಬ್ಬರು ಸಿಬ್ಬಂದಿಯನ್ನು ಮಾತ್ರ ಬಂದೋಬಸ್ತ್ಗೆ ನಿಯೋಜನೆ ಮಾಡಿದ್ದರು. ಜೂನ್ 15 ರಂದು ನೆಲೋಗಿ ಠಾಣೆಯ ಹೆಡ್ ಕಾನ್ಸ್ಟೆಬಲ್ ಮೈಸೂರ್ ಚೌಹಾಣ್ ಅವರು ಮರಳು ದಂಧೆ ತಡಯಲು ಹೋದಾಗ ಅವರ ಮೇಲೆ ದಂಧೆಕೋರರು ಟ್ರ್ಯಾಕ್ಟರ್ ಹರಿಸಿ ಹತ್ಯೆ ಮಾಡಿದ್ದರು.
ಈ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನಾರಾಯಣಪುರ ಬಳಿ ನಡೆದಿತ್ತು. ಇದೀಗ ಈ ಪ್ರಕರಣ ಸಂಬಂಧ ಮೂವರು ಸಿಬ್ಬಂದಿಯನ್ನು ಎಸ್ಪಿ ಸಸ್ಪೆಂಡ್ ಮಾಡಿದ್ದಾರೆ.