ಹೆಚ್‌ಡಿಕೆ ಹೆಸರೇಳಿ ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಡಿಸುವುದಾಗಿ ವಂಚನೆ; ಡ್ರೋನ್ ಪ್ರತಾಪ್ ವಿರುದ್ಧ ಮತ್ತೊಂದು ದೂರು...!
ಬೆಂಗಳೂರು: ಬಿಗ್‌ಬಾಸ್ ಸೀಸನ್ 10ರ (BBK SEASON 10) ರನ್ನರ್ ಅಪ್ ಡ್ರೋನ್ ಪ್ರತಾಪ್ (Drone Prathap) ವಿರುದ್ಧ ಸಾಲು ಸಾಲು ವಂಚನೆ ದೂರುಗಳು ದಾಖಲಾಗುತ್ತಿವೆ. ಲೈಸೆನ್ಸ್ ಪಡೆಯದೆ ಡ್ರೋನ್ ಹಾರಾಟ-ಮಾರಾಟದ ಹಿನ್ನೆಲೆಯಲ್ಲಿ ದೂರು ದಾಖಲಾದ ಬೆನ್ನಲ್ಲೇ ಇದೀಗ ಮತ್ತೊಂದು ವಂಚನೆ ಕೇಸ್ ದಾಖಲಾಗಿದೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಹೆಸರು ದುರ್ಬಳಕೆ ಮಾಡಿಕೊಂಡು ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಡಿಸುವುದಾಗಿ ವಂಚನೆ ಆರೋಪದಲ್ಲಿ ಡ್ರೋನ್ ಪ್ರತಾಪ್ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಕೆಯಾಗಿದೆ.
ಚಂದನ್ ಕುಮಾರ್ ಗೌಡ ಎಂಬುವವರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರಿಗೆ ದೂರು ನೀಡಿದ್ದಾರೆ. ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಡಿಸುವುದಾಗಿ 2 ಲಕ್ಷ ಹಣ ಪಡೆದು ಪ್ರತಾಪ್ ವಂಚಿಸಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಪರಿಚಯವಿದೆ, ನಾನು ಆಗಾಗ ಕುಮಾರಸ್ವಾಮಿಯವರ ಫಾರ್ಮ್ ಹೌಸ್‌ಗೆ ಹೋಗಿ ಭೇಟಿಯಾಗುತ್ತೇನೆ ಎಂದು ನಂಬಿಸಿ ಮೋಸ ಮಾಡಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತಳಗವಾದಿ ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಡಿಸುವುದಾಗಿ ಪ್ರತಾಪ್ ವಂಚಿಸಿರುವ ಆರೋಪ ಕೇಳಿಬಂದಿದೆ. ಬಿಗ್ ಬಾಸ್‌ನಿಂದ ಹೊರಬಂದ ನಂತರ ಕರೆ ಸ್ವೀಕರಿಸದೇ ಹಣ ಹಿಂದಿರುಗಿಸದೆ ವಂಚಿಸಲಾಗಿದೆ ಎಂದು ಪ್ರತಾಪ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರ ಚಂದನ್ ಕುಮಾರ್ ಗೌಡ ಮನವಿ ಮಾಡಿದ್ದಾರೆ.
ಪ್ರತಾಪ್ ಮಾತನಾಡಿರುವ ಆಡಿಯೊ ವೈರಲ್
ಡ್ರೋನ್ ಪ್ರತಾಪ್, ಚಂದನ್ ಕುಮಾರ್ ಗೌಡ ಜತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಲಭ್ಯವಾಗಿದೆ. ನನ್ನನ್ನು ಕಾಂಗ್ರೆಸ್‌ಗೆ ಬನ್ನಿ, ಯೂತ್ ಕಾಂಗ್ರೆಸ್ ಪ್ರೆಸಿಡೆಂಟ್ ಮಾಡುತ್ತೇವೆ ಎಂದಿದ್ದರು. ಆಗ ನಾನು ಕುಮಾರಸ್ವಾಮಿಯವರ ಜೊತೆ ಓಡಾಡುತ್ತಿದ್ದೆ. ಈಗಲೂ ಕುಮಾರಸ್ವಾಮಿಯವರನ್ನು ಭೇಟಿ ಮಾಡಲು ಹೋಗುತ್ತೇನೆ. ಆದರೆ, ಕುಮಾರಸ್ವಾಮಿಯವರ ಜೊತೆಗಿನ ಫೋಟೋ ಹಾಕಲ್ಲ.
ನನ್ನ ಜೊತೆ ಕುಮಾರಸ್ವಾಮಿಯವರ ತೋಟದ ಮನೆಗೆ ಬಾ ಪರಿಚಯ ಮಾಡಿಸುತ್ತೇನೆ. ಕುಮಾರಸ್ವಾಮಿ ಕೆಟ್ಟ ಪದ ಬೈಯಬಹುದು, ಆದರೆ ಒಳ್ಳೆಯ ಮನುಷ್ಯ. ಡಿ.ಕೆ. ಶಿವಕುಮಾರ್ ತರ ಪೇಪರ್ ಎಸೆಯೋದು ಮಾಡಲ್ಲ. ಕುಮಾರಸ್ವಾಮಿ ಯಾರೇ ಹೋದರೂ ದುಡ್ಡು ಕೊಡುತ್ತಾರೆ ಎಂದು ಪ್ರತಾಪ್ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ವೈರಲ್ ಆಗಿದೆ.