Hathras: ಶಾಲೆಯ ಏಳಿಗೆಗಾಗಿ ಬಾಲಕನ ಬಲಿ, ಐವರ ಬಂಧನ
ಲಕ್ನೋ (Hathras): ಉತ್ತರ ಪ್ರದೇಶದ (Uttar Pradesh Hathras) ಹಾಥರಸ್ನ ಶಾಲೆಯೊಂದರ ಮ್ಯಾನೇಜರ್ 2ನೇ ತರಗತಿಯಲ್ಲಿ ಕಲಿಯುತ್ತಿದ್ದ 11 ವರ್ಷದ ವಿದ್ಯಾರ್ಥಿಯನ್ನು ಇತರ ನಾಲ್ವರ ಸಹಾಯದಿಂದ ಬಲಿಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಶಿಕ್ಷಣ ಸಂಸ್ಥೆಯ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಕುಟುಂಬಕ್ಕೆ ಸಮೃದ್ಧಿಯನ್ನು ತರುತ್ತದೆ ಎಂದು ಬಾಲಕನ ಬಲಿಕೊಡಲಾಗಿದೆ ಎಂದು ತನಿಖಾಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಶಾಲೆಯ ಮ್ಯಾನೇಜರ್ ದಿನೇಶ್ ಬಘೇಲ್, ಆತನ ತಂದೆ ಜಸೋದನ್ ಸಿಂಗ್, ಪ್ರಾಂಶುಪಾಲ ಲಕ್ಷ್ಮಣ್ ಸಿಂಗ್, ಶಿಕ್ಷಕರಾದ ರಾಮ್ ಪ್ರಕಾಶ್ ಸೋಲಂಕಿ ಮತ್ತು ವೀರಪಾಲ್ ಅವರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ತನಿಖಾಧಿಕಾರಿಗಳು ಮರಣೋತ್ತರ ಪರೀಕ್ಷೆಯ ವರದಿಯನ್ನು ಉಲ್ಲೇಖಿಸಿದ್ದಾರೆ. ಬಾಲಕನು ಅನಾರೋಗ್ಯದಿಂದ ಸಾವಿಗೀಡಾಗಿದ್ದಾನೆ ಎಂದು ಶಾಲಾ ಅಧಿಕಾರಿಗಳು ಆರಂಭದಲ್ಲಿ ಹೇಳುತ್ತಿದ್ದರೂ ಸಹ ಬಾಲಕ ಕತ್ತು ಹಿಸುಕಿದ್ದು ಮರಣೋತ್ತರ ಪರೀಕ್ಷೆ ವರದಿಯಲ್ಲಿದೆ. ಜಸೋದನ್ ಸಿಂಗ್ ಮತ್ತು ಬಾಘೆಲ್ ಅವರು ಮಾಟ ಮಂತ್ರ ಮಾಡುತ್ತಿದ್ದು ಹುಡುಗನನ್ನು ಬಲಿ ಕೊಟ್ಟಿರುವುದಾಗಿ ಒಪ್ಪಿಕೊಂಡಿದ್ದಾರೆ.
ಶಾಲೆಯ ಹಾಸ್ಟೆಲ್‌ನಲ್ಲಿ ವಾಸವಿದ್ದ ಬಾಲಕ ಮಲಗಿದ್ದ ವೇಳೆ ಸೋಲಂಕಿ ಆತನನ್ನು ಎತ್ತಿಕೊಂಡು ಕಾಡಿಗೆ ಬಲಿ ಕೊಡಲು ಕರೆದೊಯ್ದಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಮಗು ಸಹಾಯಕ್ಕಾಗಿ ಕೂಗುತ್ತಿದ್ದಂತೆ ವೀರಪಾಲ್ ಮತ್ತು ಲಕ್ಷ್ಮಣ್ ಸಿಂಗ್ ಬಲಿ ಸರಾಗವಾಗುವಂತೆ ಖಚಿತಪಡಿಸಿಕೊಳ್ಳಲು ನಿಗಾ ಇರಿಸಿದ್ದರು.
ಆರೋಪಿಗಳು ಬಾಲಕನ ಕತ್ತು ಹಿಸುಕಿ ಕೊಲೆ ಮಾಡಿದ ಬಳಿಕ ಬಾಲಕನ ಶವವನ್ನು ಬಘೇಲ್ ಕಾರಿನಲ್ಲಿಟ್ಟು ಬಿಸಾಡಲು ಸ್ಥಳ ಹುಡುಕುತ್ತಿದ್ದರು. ಹುಡುಗನ ತಂದೆಗೆ ಅವರ ಮಗ ಅಸ್ವಸ್ಥನಾಗಿದ್ದು ವೈದ್ಯರ ಬಳಿಗೆ ಕರೆದೊಯ್ಯಲಾಗಿದೆ ಎಂದು ತಿಳಿಸಲಾಯಿತು. ಬಾಲಕನ ಕುಟುಂಬವು ಹೇಗಾದರೂ ಸದಾಬಾದ್‌ನಲ್ಲಿ ಬಘೇಲ್‌ನ ಕಾರನ್ನು ಟ್ರ್ಯಾಕ್ ಮಾಡಿ ಮತ್ತು ಸೆಪ್ಟೆಂಬರ್ 23 ರಂದು ಬಾಲಕನ ಮೃತ ದೇಹವನ್ನು ವಶಪಡಿಸಿಕೊಂಡರು.
ಬಾಲಕನನ್ನು ಬರ್ಬರವಾಗಿ ಕೊಲ್ಲಲಾಗಿದೆ. ಅವನ ಹೆಗಲ ಮೂಳೆ ಮುರಿದಿದೆ. ಆರೋಪಿಗಳು ಬಾಯಿ ಬಿಗಿದು ಕತ್ತು ಹಿಸುಕಿದ್ದಾರೆ. ಬಲಿಯ ಆಚರಣೆಯ ಭಾಗವಾಗಿ ಬಾಲಕನ ಕೂದಲನ್ನು ಒಂದು ಬದಿಯಿಂದ ಕತ್ತರಿಸಲಾಯಿತು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಐವರು ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103 (1) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಲಂಕಿ, ಬಘೇಲ್ ಮತ್ತು ಜಸೋಧನ್ ಸಿಂಗ್ ಅವರು ಸೆಪ್ಟೆಂಬರ್ 23 ರಂದು ಶಾಲೆಯ ಹಾಸ್ಟೆಲ್‌ನಿಂದ ಬಾಲಕನನ್ನು ಅಪಹರಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ಸಿಂಗ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. “ಜಸೋಧನ್ ಸಿಂಗ್ ಮಾಟ ಮಂತ್ರದಲ್ಲಿ ನಂಬಿಕೆ ಹೊಂದಿದ್ದಾರೆ. ಶಾಲೆ ಮತ್ತು ಅವರ ಕುಟುಂಬದ ಏಳಿಗೆಗಾಗಿ ಮಗುವನ್ನು ಬಲಿ ಕೊಡುವಂತೆ ಅವರು ಮಗ ಬಘೇಲ್ನಲ್ಲಿ ಕೇಳಿಕೊಂಡರು” ಎಂದು ಸಿಂಗ್ ಹೇಳಿದ್ದಾರೆ.
ಬಾಲಕ ಅಳುತ್ತಿದ್ದಂತೆಯೇ ಆರೋಪಿ ಕತ್ತು ಹಿಸುಕಿ ಕೊಂದಿದ್ದಾನೆ. ವೀರಪಾಲ್ ಸಿಂಗ್ ಮತ್ತು ಶಾಲೆಯ ಪ್ರಾಂಶುಪಾಲ ಲಕ್ಷ್ಮಣ್ ಸಿಂಗ್ ಕೂಡ ಸ್ಥಳದಲ್ಲಿ ಹಾಜರಿದ್ದರು. ಶಾಲೆ ಮತ್ತು ಮಾಲೀಕರ ಕುಟುಂಬದ ಏಳಿಗೆಗಾಗಿ ವಿದ್ಯಾರ್ಥಿಯನ್ನು ಬಲಿಕೊಡಲಾಗಿದೆ ಎಂದು ಆರೋಪಿಗಳು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ ತನಿಖಾಧಿಕಾರಿಗಳು.
ಲಾರಿ-ಆಟೋ ನಡುವೆ ಭೀಕರ ಅಪಘಾತ; ಯುವತಿ ಸಾವು, ಲಾರಿ ಚಾಲಕ ಪರಾರಿ
ಬೆಂಗಳೂರು: ಬೆಳ್ಳಂಬೆಳಗ್ಗೆ ಆಟೋ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ಬೆಂಗಳೂರು ವಿಧಾನಸೌಧ ಕೂಗಳತೆಯ ಕಾಫಿ ಬೋರ್ಡ್ ಸಿಗ್ನಲ್ ಬಳಿ ನಡೆದಿದೆ.
ಶಾಲಿನಿ ಮೃತ ದುರ್ದೈವಿ. ಬೆನ್ಸನ್ ಟೌನ್ ಚಿನ್ನಪ್ಪ ಗಾರ್ಡನ್‌ನಿಂದ `ನಮ್ಮ ಯಾತ್ರಿ’ ಆಪ್ ಮೂಲಕ ಆಟೋ ಬುಕ್ ಮಾಡಿದ್ದ ಯುವತಿ, ಮೆಜೆಸ್ಟಿಕ್ ಕಡೆ ಪ್ರಯಾಣ ಬೆಳಸಿದರು. ಈ ವೇಳೆ ಕಾಫಿ ಬೋರ್ಡ್ ಜಂಕ್ಷನ್‌ಗೆ ಬಂದ ವೇಳೆ ಮತ್ತೊಂದು ರಸ್ತೆಯಲ್ಲಿ ಬರುತ್ತಿದ್ದ ಲಾರಿ ಸಿಗ್ನಲ್ ಜಂಪ್ ಮಾಡಿ ಆಟೋಗೆ ಗುದ್ದಿದ ಪರಿಣಾಮ ಹಿಂಬದಿ ಸೀಟ್‌ನಲ್ಲಿದ್ದ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಘಟನೆ ಸಂಭವಿಸುತ್ತಿದ್ದಂತೆ ಸ್ಥಳದಲ್ಲೇ ಲೋಡ್ ತುಂಬಿದ್ದ ಲಾರಿಯನ್ನೇ ಬಿಟ್ಟು ಚಾಲಕ ಎಸ್ಕೇಪ್ ಆಗಿದ್ದಾನೆ. ಇನ್ನೂ ಘಟನೆಯಲ್ಲಿ ಆಟೋ ಚಾಲಕ ಇಮ್ರಾನ್ ಪವಾಡ ರೀತಿಯಲ್ಲಿ ಬದುಕುಳಿದಿದ್ದಾನೆ. ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾಕಾಳೇಶ್ವರ ದೇವಸ್ಥಾನದ ಎದುರಿನ ಗೋಡೆ ಕುಸಿದು ಇಬ್ಬರು ಸಾವು!
ಉಜ್ಜಯಿನಿ: ಶುಕ್ರವಾರ ಸಂಜೆ ಸುರಿದ ಭಾರಿ ಮಳೆಗೆ ಮಧ್ಯಪ್ರದೇಶದ ಉಜ್ಜಯಿನಿಯ ಪ್ರಸಿದ್ಧ ಮಹಾಕಾಳೇಶ್ವರ ದೇವಸ್ಥಾನದ ಎದುರಿನ ಮಹಾರಾಜವಾಡ ಶಾಲೆಯ ಗೋಡೆ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾಲ್ವರು ಅವಶೇಷಗಳಡಿ ಸಿಲುಕಿರುವ ಶಂಕೆಯಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ನಾಲ್ಕು ಜನರನ್ನು ಆಸ್ಪತ್ರೆಗೆ ಕರೆತರಲಾಯಿತು. ಅವರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಉಜ್ಜಯಿನಿ ಕಲೆಕ್ಟರ್ ನೀರಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ದೇವಸ್ಥಾನದಲ್ಲಿ ಸಂಜೆಯ ಆರತಿಗೆ ಮುನ್ನವೇ ಈ ಅವಘಡ ಸಂಭವಿಸಿದೆ. ಗೋಡೆ ಕುಸಿತದಲ್ಲಿ ಓರ್ವ ಪುರುಷ ಮತ್ತು ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಗಾಯಗೊಂಡ ಇಬ್ಬರು ವ್ಯಕ್ತಿಗಳನ್ನು ಚಿಕಿತ್ಸೆಗಾಗಿ ಇಂದೋರ್‌ನ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಸಿಂಗ್ ಹೇಳಿದರು.