ಲೋಕಸಭಾ ಚುನಾವಣೆಗೆ ಮಂಗಳೂರಿಗೆ ಹರೀಶ್ ಕುಮಾರ್, ಉಡುಪಿ-ಚಿಕ್ಕಮಗಳೂರಿಗೆ ಜಯಪ್ರಕಾಶ್ ಹೆಗ್ಡೆ ?
ಮಂಗಳೂರು: ದೇಶದಲ್ಲಿ ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಸಿದ್ಧವಾಗುತ್ತಿದ್ದು, ಎರಡು ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಚಟುವಟಿಕೆಗಳು ಆರಂಭಗೊಂಡಿದೆ. ಕಾಂಗ್ರೆಸ್ಸಿನಲ್ಲಿ ಅಚ್ಚರಿಯ ಬೆಳವಣಿಗೆ ನಡೆಯುತ್ತಿದ್ದು, ಅದರಲ್ಲೂ ಕರಾವಳಿಯ ಕಾಂಗ್ರೆಸ್ಸಿನ ಲೋಕಸಭಾ ಅಭ್ಯರ್ಥಿಗಳಾಗಿ ಎರಡು ಅಚ್ಚರಿಯ ಮುಖಗಳು ಹೊರಹೊಮ್ಮಿದೆ ಎಂದು ತಿಳಿದುಬಂದಿದೆ.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಹಾಗೂ ಮಂಗಳೂರು ಲೋಕಸಭೆಗೆ ಎಂಎಲ್‌ಸಿ ಹರೀಶ್ ಕುಮಾರ್ ಹೆಸರು ಕಾಂಗ್ರೆಸ್ ಹೈಕಮಾಂಡಿನ ಗಂಭೀರ ಪರಿಶೀಲನೆಯಲ್ಲಿದೆ ಎಂದು ತಿಳಿದು ಬಂದಿದೆ.
ಜಯಪ್ರಕಾಶ್ ಹೆಗ್ಡೆ ಈ ಮೊದಲು ಸಚಿವರಾಗಿ, ಸಂಸದರಾಗಿ ಜನಪ್ರಿಯತೆ ಗಳಿಸಿಕೊಂಡಿದ್ದರು. ಅವರು ಸಿದ್ದರಾಮಯ್ಯನವರ ಆಪ್ತ ವಲಯದಲ್ಲೂ ಗುರುತಿಸಿಕೊಂಡಿದ್ದರು. ತದನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು. ಈಗ ಮತ್ತೆ ಕಾಂಗ್ರೆಸ್ಸಿಗೆ ಮರಳಿ ತರುವ ಪ್ರಯತ್ನ ಸಾಗುತ್ತಿದೆ ಎಂದು ಕಾಂಗ್ರೆಸ್ ಮೂಲಗಳು ಸ್ಪಷ್ಟಪಡಿಸಿದೆ.
ಇನ್ನೊಂದು ಕಡೆಯಲ್ಲಿ ಬಹಳಷ್ಟು ನಿಗೂಢವಾಗಿದ್ದ ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ
ಎಂಎಲ್ಸಿ ಹರೀಶ್ ಕುಮಾರ್ ಅವರ ಹೆಸರು ಹೈಕಮಾಂಡ್ ನ ಗಂಭೀರ ಪರಿಶೀಲನೆಯಲ್ಲಿ ಇದೆ ಎಂದು ತಿಳಿದುಬಂದಿದೆ. ಹರೀಶ್ ಕುಮಾರ್ ವಿಧಾನ ಪರಿಷತ್ತು ಸದಸ್ಯರಾಗಿ ರೆವಿನ್ಯೂ ವಿಷಯದಲ್ಲಿ ಜನಸಾಮಾನ್ಯರ ಬಹಳಷ್ಟು ಪ್ರಶ್ನೆಗಳನ್ನು ವಿಧಾನ ಪರಿಷತ್ತಿನಲ್ಲಿ ಎತ್ತಿ ಅದರ ಬದಲಾವಣೆಗೆ ಕಾರಣಕರ್ತರಾಗಿರುವುದನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿದು ಬಂದಿದೆ.
ಎರಡು ಅಭ್ಯರ್ಥಿಗಳ ಬಗ್ಗೆ ಕಾಂಗ್ರೆಸ್ ಗಂಭೀರ ಪರಿಶೀಲನೆಯಲ್ಲಿ ತೊಡಗಿಕೊಂಡಿದೆ ಎಂದು ಕಾಂಗ್ರೆಸ್ ಮೂಲಗಳು ಸ್ಪಷ್ಟಪಡಿಸುವೆ. ಇನ್ನು ಬಿಜೆಪಿಯಿಂದ ಮಂಗಳೂರು ಲೋಕಸಭಾ ಕ್ಷೇತ್ರದಿಂದ ನಳಿನ್ ಕುಮಾರ್ ಕಟೀಲ್ ಹಾಗೂ ಉಡುಪಿ ಲೋಕಸಭಾ ಕ್ಷೇತ್ರದಿಂದ ಪ್ರಮೋದ್ ಮಧ್ವರಾಜ್ ಬಹುತೇಕ ಅಭ್ಯರ್ಥಿಗಳಾಗುವುದು ಪಕ್ಕ ಎನ್ನಲಾಗುತ್ತಿದೆ. ಚುನಾವಣೆಗೆ ಆರು ತಿಂಗಳು ಬಾಕಿ ಉಳಿದಿದ್ದು, ಅಭ್ಯರ್ಥಿಗಳ ಆಯ್ಕೆ ವಿಷಯ ಕುತೂಹಲ ಮೂಡಿಸಿದೆ.