ಹನುಮಾನ್ ದೇವಸ್ಥಾನದ ಅರ್ಚಕ ಶವವಾಗಿ ಪತ್ತೆ; ಓರ್ವ ಶಿಷ್ಯನ ಬಂಧನ!
ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆಯ ರಾಮ ಜನ್ಮಭೂಮಿ ಆವರಣದ ಹೈ-ಸೆಕ್ಯುರಿಟಿ ವಲಯದ ಕೊಠಡಿಯೊಂದರಲ್ಲಿ ಹನುಮಾನ್‌ಗರ್ಹಿ ದೇವಸ್ಥಾನದ ಅರ್ಚಕ ಶವವಾಗಿ ಪತ್ತೆಯಾಗಿದ್ದಾರೆ.
ಇಂದು (ಅ.19,ಗುರುವಾರ) ಬೆಳಗ್ಗೆ ರಕ್ತದ ಮಡುವಿನಲ್ಲಿ ಶವವಾಗಿ ಅರ್ಚಕ ರಾಮ್ ಸಹ್ರೇ ದಾಸ್ (44) ಅವರು ಕಂಡುಬಂದಿದ್ದಾರೆ. ಬೆಳಗ್ಗೆ ದೇಗುಲದ ಪ್ರಾರ್ಥನೆಗೆ ಇವರು ಹಾಜರಾಗದೇ ಇದ್ದಾಗ ಘಟನೆ ಬೆಳಕಿಗೆ ಬಂದಿದೆ.
ಇವರ ಕೋಣೆಗೆ ಇವರ ಇಬ್ಬರು ಶಿಷ್ಯರು ಬಿಟ್ಟರೆ ಬೇರೆಯವರಿಗೆ ಪ್ರವೇಶವಿರಲಿಲ್ಲ. ಹೀಗಾಗಿ ಇವರಿಬ್ಬರೇ ಶಂಕಿತ ಆರೋಪಿಗಳಾಗಿದ್ದಾರೆ.
ಓರ್ವ ಶಿಷ್ಯನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೊಬ್ಬ ಶಿಷ್ಯ ಕಾಣೆಯಾಗಿದ್ದಾನೆ. ಆರೋಪಿಗಳ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಜ್ ಕರಣ್ ನಯ್ಯರ್ ತಿಳಿಸಿದ್ದಾರೆ.
ಅರ್ಚಕ ರಾಮ್ ಸಹ್ರೇ ದಾಸ್ ಅವರನ್ನು ಹರಿತವಾದ ಆಯುಧದಿಂದ ಕೊಲೆ ಮಾಡಲಾಗಿದೆ. ನಿನ್ನೆ ರಾತ್ರಿ ರಾಮ್ ಸಹ್ರೇ ದಾಸ್ ಅವರಿಗೂ ಹಾಗೂ ಅವರ ಶಿಷ್ಯರಿಗೂ ಜಗಳ ಆಗಿತ್ತು ಎಂದು ತಿಳಿದುಬಂದಿದೆ. ತನಿಖೆ ಬಳಿಕ ನಿಖರ ಕಾರಣ ಗೊತ್ತಾಗಲಿದೆ ಎಂದು ನಯ್ಯರ್ ಹೇಳಿದ್ದಾರೆ.
Telangana elections: ಟ್ರಕ್‌ನಲ್ಲಿ 750 ಕೋಟಿ ರೂಪಾಯಿ ನೋಡಿ ಗೊಂದಲಕ್ಕೆ ಒಳಗಾದರು ತೆಲಂಗಾಣ ಚುನಾವಣೆ ಕಾರ್ಯದಲ್ಲಿದ್ದ ಪೊಲೀಸರು
ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆ ಪ್ರಕ್ರಿಯೆಗಳು ಪ್ರಗತಿಯಲ್ಲಿರುವಾಗಲೇ ಟ್ರಕ್ ಒಂದರಲ್ಲಿ 750 ಕೋಟಿ ರೂಪಾಯಿ ನೋಡಿ ಪೊಲೀಸರು ಗೊಂದಲಕ್ಕೆ ಒಳಗಾದ ಘಟನೆ ವರದಿಯಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಗಡವಾಲ್ ಎಂಬಲ್ಲಿ ಮಂಗಳವಾರ ರಾತ್ರಿ ಮೇಲ್ನೋಟಕ್ಕೆ ಸಾದಾಸೀದಾ ಕಾಣುತ್ತಿದ್ದ ಟ್ರಕ್ ಅನ್ನು ಚುನಾವಣಾ ಕರ್ತವ್ಯದಲ್ಲಿದ್ದ ಪೊಲೀಸರು ತಡೆದು ನಿಲ್ಲಿಸಿದ್ದರು. ಟ್ರಕ್ ಅನ್ನು ಪರಿಶೀಲಿಸಿದಾಗ ಅದರಲ್ಲಿ 750 ಕೋಟಿ ರೂಪಾಯಿ ಇತ್ತು. ಚುನಾವಣಾ ಅಕ್ರಮ ತಡೆಯುವ ಕೆಲಸದಲ್ಲಿದ್ದ ಪೊಲೀಸರನ್ನು ಇದು ಗೊಂದಲಕ್ಕೆ ದೂಡಿತು. ಸ್ಥಳದಲ್ಲಿ ದೊಡ್ಡ ಹೈಡ್ರಾಮಾವೇ ನಡೆಯಿತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಪೊಲೀಸರು ಟ್ರಕ್ ಅಡ್ಡಗಟ್ಟಿದ ಸ್ಥಳವು ಕಳ್ಳಸಾಗಣೆದಾರರು ಹೆಚ್ಚಾಗಿ ಸಂಚರಿಸುವ ಮಾರ್ಗದಲ್ಲಿದೆ. ರಾತ್ರಿ 10.30ಕ್ಕೆ ಟ್ರಕ್ ಅನ್ನು ಪೊಲೀಸರು ತಡೆದಿದ್ದರು. ಕೆಲ ಗಂಟೆಗಳ ಹೈಡ್ರಾಮಾ ಸ್ಥಳದಲ್ಲಿ ನಡೆಯಿತು. ಕೊನೆಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಸಂಬಂಧಿಸಿದ ಹಣ ಎಂಬುದು ಖಾತ್ರಿಯಾದ ಬಳಿಕ ಪೊಲೀಸರು ತಣ್ಣಗಾದರು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಸೇರಿದ ಹಣವನ್ನು ಕೇರಳದಿಂದ ಹೈದರಾಬಾದ್‌ಗೆ ಸಾಗಿಸುತ್ತಿರುವಾಗ ಈ ಹೈಡ್ರಾಮಾ ನಡೆಯಿತು.