ಕೇರಳ ಹಾಗೂ ಕರ್ನಾಟಕದಲ್ಲಿ ಉತ್ತಮ ಮಳೆ; ಇನ್ನೂ 3 ದಿನ ಮಳೆ ಮುನ್ಸೂಚನೆ !
ಕಳೆದ ನಾಲ್ಕೈದು ದಿನಗಳಿಂದ ನೆರೆಯ ಕೇರಳದಲ್ಲಿ ಭಾರೀ ಮಳೆಯಾಗುತ್ತಿದೆ. ಈ ಪರಿಣಾಮ ರಾಜ್ಯದಲ್ಲಿಯೂ ಉತ್ತಮ ಮಳೆಯಾಗುವ ನಿರೀಕ್ಷೆಗಳಿವೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಇಂದಿನಿಂದ ಮೂರು ದಿನ ರಾಜ್ಯದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಗಳಿದ್ದು, ಕೆಲವು ಜಿಲ್ಲೆಗಳಲ್ಲಿ ಯೆಲ್ಲೋ ಮತ್ತು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಅದರಲ್ಲಿಯೂ ವಿಶೇಷವಾಗಿ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಭಾರೀ ಮಳೆಯ ಸೂಚನೆಯನ್ನು ನೀಡಲಾಗಿದೆ. ಇಂದು ಸಮುದ್ರತೀರದ ವ್ಯಾಪ್ತಿಯ ಪರಿಸರದಲ್ಲಿ ಆರೆಂಜ್ ಅಲರ್ಟ್ ಪ್ರಕಟಿಸಲಾಗಿದೆ. ನಾಳೆ ಹಳದಿ ಅಲರ್ಟ್ ಪ್ರಕಟಿಸಲಾಗಿದೆ.
ಮಳೆ ಜೊತೆಯಲ್ಲಿ ಗಾಳಿಯ ವೇಗ ಹೆಚ್ಚಳ
ಮಳೆಯ ಜೊತೆಯಲ್ಲಿ ಗಾಳಿಯ ವೇಗವೂ ಏರಿಕೆಯಾಗಲಿದೆ. ಪ್ರತಿ ಗಂಟೆಗೆ 55 ಕಿ.ಮೀನಿಂದ 65 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಕಡಲತೀರಕ್ಕೆ ದೊಡ್ಡ ಅಲೆಗಳು ಅಪ್ಪಳಿಸುತ್ತಿದ್ದು, ಮುಂದಿನ 24 ಗಂಟೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.
ಉತ್ತರ ಒಳನಾಡಿನಲ್ಲಿ ಮೂರು ದಿನ ಮಳೆ
ಇನ್ನು ಉತ್ತರ ಒಳನಾಡಿನ ವಿಜಯಪುರ, ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಭಾಗದಲ್ಲಿ ಮುಂದಿನ ಮೂರು ದಿನ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಅಂದಾಜು 100 ಮಿಮೀ ವರೆಗೆ ಮಳೆ ಸುರಿಯುವ ಸಾಧ್ಯತೆಗಳಿವೆ. ಇನ್ನುಳಿದಂತೆ ಮೋಡ ಕವಿದ ವಾತಾವರಣ ಇರಲಿದ್ದು, ಬಿಟ್ಟು ಬಿಟ್ಟು ಮಳೆಯಾಗಲಿದೆ
64.5 ರಿಂದ 115.5 ಮಿಮೀ ಮಳೆ ಸಾಧ್ಯತೆ
ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಕೊಡಗು ಪರಿಸರದಲ್ಲಿ 64.5 ಮಿಮೀ ರಿಂದ 115.5 ಮಿಮೀವರೆಗೆ ಮಳೆಯಾಗುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಹವಾಮಾನ ಇಲಾಖೆ ಹೇಳಿದೆ.
ರಾಜಧಾನಿಯಲ್ಲಿ ಹಗುರ ಮಳೆ
ಇನ್ನು ರಾಜಧಾನಿಯಲ್ಲಿ ಸಂಜೆ ವೇಳೆಗೆ ಮಳೆ ಆರಂಭವಾಗುವ ಲಕ್ಷಣಗಳಿವೆ. ಕಳೆದ ಎರಡು ದಿನಗಳಿಂದ ರಾಜಧಾನಿಯಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಅಲ್ಲಲ್ಲಿ ಚದುರಿದ ರೀತಿಯಲ್ಲಿ ಮಳೆಯಾಗುತ್ತಿದೆ.