Goa, Karnataka train : ರೈಲ್ವೇ ಹಳಿ ಮೇಲೆ ಕುಸಿದ ಮಣ್ಣು – ಗೋವಾ, ಕರ್ನಾಟಕ ರೈಲು ಸಂಚಾರದಲ್ಲಿ ಇನ್ನೆರಡು ದಿನ ವ್ಯತ್ಯಯ
150 ಕ್ಕೂ ಹೆಚ್ಚು ಸಿಬ್ಬಂದಿಯಿಂದ 10 ಜೆಸಿಬಿ ಬಳಸಿ ತೆರವು ಕಾರ್ಯ
ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದ ದೂಧ್ ಸಾಗರ್ ಫಾಲ್ಸ್ (Dudhsagar) ಬಳಿ ಬೃಹತ್ ಪ್ರಮಾಣದ ಭೂಕುಸಿತವಾಗಿದೆ. ಇದರಿಂದಾಗಿ ಗೋವಾ ಹಾಗೂ ಕರ್ನಾಟಕ ನಡುವಿನ ರೈಲು ಸಂಚಾರದಲ್ಲಿ ಎರಡು ದಿನಗಳ ಕಾಲ ವ್ಯತ್ಯಯ ಆಗಲಿದೆ. ನೈರುತ್ಯ ರೈಲ್ವೆ (Railway) ವಲಯದ 150 ಕ್ಕೂ ಅಧಿಕ ಸಿಬ್ಬಂದಿಯಿಂದ 10ಕ್ಕೂ ಹೆಚ್ಚು ಜೆಸಿಬಿ ಬಳಸಿ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ.
ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ನಿರಂತರ ಭೂಕುಸಿತವಾಗುತ್ತಿದೆ. ಇದರಿಂದಾಗಿ ಕಳೆದ ಎರಡು ದಿನಗಳಿಂದ ಗೋವಾ-ಕರ್ನಾಟಕ ಮಾರ್ಗ ಮಧ್ಯೆ ರೈಲ್ವೆ ಸಂಚಾರ ಸ್ಥಗಿತವಾಗಿತ್ತು. ಕಳೆದ 36 ಗಂಟೆಗಳಿಂದ ಕಾರ್ಯಾಚರಣೆ ನಡೆಸಿ ರೈಲ್ವೆ ಹಳಿ ಮೇಲೆ ಬಿದ್ದಿರುವ ಕಲ್ಲು ಹಾಗೂ ಮರಗಳನ್ನು ತೆರವುಗೊಳಿಸಲಾಗುತ್ತಿದೆ.
ಕಾರ್ಯಾಚರಣೆ ನಡೆಯುತ್ತಿರುವುದರಿಂದ ದೂಧ್ ಸಾಗರ್ ಬಳಿ ರೈಲ್ವೆ ಸಿಬ್ಬಂದಿ ಹೊರತುಪಡಿಸಿ ಅನ್ಯ ವ್ಯಕ್ತಿಗಳಿಗೆ ಪ್ರವೇಶಕ್ಕೆ ನಿಷೇಧಿಸಲಾಗಿದೆ. ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಠಿಕಾಣಿ ಹೂಡಿದ್ದಾರೆ. ಆದರೆ ಈ ಪ್ರದೇಶದಲ್ಲಿ ಧಾರಾಕಾರ ಮಳೆಯಿಂದಾಗಿ ತೆರವು ಕಾರ್ಯಾಚರಣೆಗೆ ತೊಡಕಾಗಿದೆ. ಇದು ಅಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ.
ಕಾರ್ಯಾಚರಣೆ ಇನ್ನೂ ಒಂದು ದಿನ ನಡೆಯಲಿದ್ದು, ಎರಡು ದಿನಗಳು ರೈಲು ಸಂಚಾರದಲ್ಲಿ ವ್ಯತ್ಯಯ ಆಗಲಿದೆ.
ಮಂಡ್ಯದ ವಿಸಿ ನಾಲೆಗೆ ಕಾರು ಪಲ್ಟಿ – ಚಾಲಕ ನಾಪತ್ತೆ
ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ವಿಸಿ ನಾಲೆ (VC Canal) ಪಲ್ಟಿಯಾಗಿದ್ದು, ಚಾಲಕ ನಾಪತ್ತೆಯಾಗಿರುವ ಘಟನೆ ಮಂಡ್ಯ (Mandya) ತಾಲೂಕಿನ ತಿಬ್ಬನಹಳ್ಳಿಯಲ್ಲಿ ನಡೆದಿದೆ.
ನಾಪತ್ತೆಯಾಗಿರುವ ಕಾರು ಚಾಲಕ (Car Driver) ಲೋಕೇಶ್‌ಗಾಗಿ ತೀವ್ರ ಶೋಧ ನಡೆದಿದೆ. ಕಾಲುವೆಗೆ ತಡೆಗೋಡೆ ಇಲ್ಲದ ಕಾರಣ ಚಾಲಕನ ನಿಯಂತ್ರಣ ತಪ್ಪಿದ ಕಾರು ವಿಸಿ ನಾಲೆಗೆ ಪಲ್ಟಿ ಹೊಡೆದಿದೆ. ಮಳೆಯಿಂದ ಹೆಚ್ಚಾಗಿ ನೀರು ತುಂಬಿದ್ದ ಕಾರಣ ಕಾರು ಸಂಪೂರ್ಣ ಮುಳುಗಡೆಯಾಗಿದೆ. ಕಾರಿನಲ್ಲಿದ್ದ ಓರ್ವ ಪ್ರಾಣಾಪಾಯದಿಂದ ಪಾರಾಗಿದ್ದು, ಚಾಲಕ ನಾಪತ್ತೆಯಾಗಿದ್ದಾನೆ.
ಚಾಲಕ ಲೋಕೇಶ್ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದ್ದು ಕಾಲುವೆಯ ನೀರು ನಿಲ್ಲಿಸುವಂತೆ ಅಧಿಕಾರಿಗಳು ಸೂಚನೆ ನಿಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು, ಕಾಲುವೆಗೆ ಬಿದ್ದಿರುವ ಕಾರನ್ನ ಮೇಲೆತ್ತಲು ಪ್ರಯತ್ನ ನಡೆಸಿದ್ದಾರೆ. ಈ ಸಂಬಂಧ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2017ರಲ್ಲಿ ಕಾಲುವೆಗೆ ತಡೆಗೊಡೆ ಇಲ್ಲದೇ ದೊಡ್ಡ ಬಸ್ ದುರಂತ ನಡೆದಿತ್ತು. ಈ ಘಟನೆಯ ಬಳಿಕ ಕಾಲುವೆಯ ಉದ್ದಕ್ಕೂ ತಡೆಗೊಡೆ ನಿರ್ಮಿಸುವುದಾಗಿ ಹೇಳಿದ್ದ ಸರ್ಕಾರ, ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದಾಗಿ ಆಗಾಗ್ಗೆ ಅಪಘಾತಗಳು ನಡೆಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.