ತುಳುವಿಗೆ ರಾಜ್ಯದ ಎರಡನೇ ಭಾಷೆಯ ಸ್ಥಾನ ನೀಡುವುದು ನಮ್ಮ ಗಮನದಲ್ಲಿದೆ - ಸಚಿವ ಶಿವರಾಜ ತಂಗಡಗಿ
ತುಳುವಿಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನ ನೀಡುವ ಬಗ್ಗೆ ಈಗಾಗಲೇ ಎರಡು ಭಾಷೆಗಳಿಗೆ ರಾಜ್ಯ ಭಾಷೆಯ ಸ್ಥಾನಮಾನ ನೀಡಿರುವ ಬಿಹಾರ, ಪಶ್ಚಿಮ ಬಂಗಾಲ ಮತ್ತು ಆಂಧ್ರ ಪ್ರದೇಶಕ್ಕೆ ಅಧಿಕಾರಿಗಳ ತಂಡವನ್ನು ಕಳುಹಿಸಿ ವರದಿ ಪಡೆದು ಕಾನೂನು ಇಲಾಖೆಗೆ ಸಲ್ಲಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ವಿಧಾನ ಪರಿಷತ್ ಸದಸ್ಯ ಬಿ. ಎಂ. ಫಾರೂಖ್ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ತುಳುವಿಗೆ ರಾಜ್ಯದ ಎರಡನೇ ಭಾಷೆಯ ಸ್ಥಾನ ನೀಡುವುದು ನಮ್ಮ ಗಮನದಲ್ಲಿದೆ. ಆದರೆ ನಿಯಮಗಳ ಪಾಲನೆ ಆಗಬೇಕಿದೆ. ಡಾ| ಮೋಹನ್ ಆಳ್ವರ ಸಮಿತಿ ನೀಡಿದ ವರದಿ ನಮ್ಮ ಮುಂದಿದೆ. ಆದರೆ ಕಾನೂನು ಇಲಾಖೆಯು ಅನ್ಯ ರಾಜ್ಯಗಳ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ಬಯಸಿರುವ ಹಿನ್ನೆಲೆಯಲ್ಲಿ ಬೇರೆ ರಾಜ್ಯಗಳಿಗೆ ಸಮಿತಿ ಕಳುಹಿಸಲು ಸರಕಾರ ಮುಂದಾಗಿದೆ ಎಂದು ಸಚಿವರು ತಿಳಿಸಿದರು.
ನಾವು ಈಗಾಗಲೇ ಈ ಮೂರು ರಾಜ್ಯಗಳಿಗೆ ಪತ್ರ ಬರೆದು ದ್ವಿಭಾಷೆ ಅಳವಡಿಕೆ ಬಗ್ಗೆ ಮಾಹಿತಿ ನೀಡುವಂತೆ ಕೇಳಿದ್ದೆವು. ಆದರೆ ಈ ರಾಜ್ಯಗಳಿಂದ ಸಮರ್ಪಕ ಪ್ರತಿಕ್ರಿಯೆ ಬಂದಿಲ್ಲ. ಆದ್ದರಿಂದ ನಾವೇ ಈಗ ತಂಡ ಕಳುಹಿಸಲು ಮುಂದಾಗಿದ್ದೇವೆ. ನಮ್ಮ ತಂಡ ನೀಡುವ ವರದಿಯನ್ನು ಕಾನೂನು ಇಲಾಖೆಗೆ ಸಲ್ಲಿಸುತ್ತೇವೆ ಎಂದು ಶಿವರಾಜ ತಂಗಡಿ ಭರವಸೆ ನೀಡಿದರು.
ಇದೇ ವೇಳೆ ರಾಜ್ಯ ಸರಕಾರಕ್ಕೆ ಸಂವಿಧಾನದ ಅನುಚ್ಛೇದ 345ರಡಿ ತುಳು ಭಾಷೆಯನ್ನು ಅಧಿಕೃತ ಭಾಷೆಯೆಂದು ಘೋಷಿಸುವ ಅಧಿಕಾರವಿದೆ ಎಂದು ಕಾನೂನು ಇಲಾಖೆ ಸ್ಪಷ್ಟಪಡಿಸಿದೆ. ಆದರೆ ಈ ಬಗ್ಗೆ ಕ್ರಮ ಕೈಗೊಳ್ಳುವ ಮುನ್ನ ಭಾಷೆಗೆ ಸಂಬಂಧಿಸಿ ಸೂಕ್ತ ಅಧ್ಯಯನ ಮಾಡಲು ಸಮಿತಿ ರಚಿಸಬೇಕು ಮತ್ತು ಆ ಸಮಿತಿಯ ವರದಿ ಆಧಾರದಲ್ಲಿ ಹಾಗೂ ವಿವಿಧ ರಾಜ್ಯಗಳಲ್ಲಿ ಎರಡನೇ ಭಾಷೆಯನ್ನು ಅಧಿಕೃತ ಭಾಷೆಯೆಂದು ಘೋಷಿಸಿರುವ ಬಗ್ಗೆ ಅಧ್ಯಯನ ನಡೆಸಿ ವರದಿ ಪಡೆದುಕೊಳ್ಳಬೇಕು ಎಂದು ತಿಳಿಸಿದೆ.
ತುಳುವಲ್ಲೇ ಮಾತನಾಡಿದ ಉಪಸಭಾಪತಿ ತುಳುವಿನ ಬಗ್ಗೆ ವಿಷಯ ಪ್ರಸ್ತಾವಗೊಂಡಾಗ ಪೀಠದಲ್ಲಿ ಕೂತಿದ್ದ ಸಭಾಪತಿ ಎಂ. ಕೆ. ಪ್ರಾಣೇಶ್, ತುಳುವಲ್ಲೇ ಮಾತನಾಡುವಂತೆ ಸದಸ್ಯರನ್ನು ಪ್ರೋತ್ಸಾಹಿಸಿದರು. ಹರೀಶ್ ಕುಮಾರ್ ಅವರಲ್ಲಿ ನೀವು ತುಳುವಲ್ಲೇ ಮಾತನಾಡಬಹುದು, ಗಮನ ಸೆಳೆಯುವ ಸೂಚನೆ ಆಗಿರುವ ಹಿನ್ನೆಲೆಯಲ್ಲಿ ನಿಯಮಗಳು ಅಡ್ಡಿ ಬರುವುದಿಲ್ಲ ಎಂದು ಹೇಳಿದರು. ಪ್ರತಾಪಸಿಂಹ ನಾಯಕ್, ತುಳುವಲ್ಲೇ ಭಾಷಣ ಆರಂಭಿಸಿದರು. ಅಷ್ಟರಲ್ಲಿ ಸಚಿವ ತಂಗಡಗಿ, ನನಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ, ತುಳು ಅರ್ಥವಾಗುವುದಿಲ್ಲ ಎಂದು ಹೇಳಿದರು. ಆದರೂ ಪ್ರಾಣೇಶ್ ತುಳುವಲ್ಲೇ ಮಾತನಾಡುವಂತೆ ಸದಸ್ಯರನ್ನು ಹುರಿದುಂಬಿಸಿದರು.