ಶುಂಠಿ ಬೆಳೆಗಾರರಿಗೆ ಜಾಕ್ಪಾಟ್, ಬಂತು ಬಂಗಾರದ ಬೆಲೆ!

ಚಿಕ್ಕಮಗಳೂರು, (ಜುಲೈ 14): ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ದಿನಸಿ ಸೇರಿದಂತೆ ಕೆಲ ತರಕಾರಿ ದರ ಏರಿಕೆಯಾಗಿದೆ.ಅದರಲ್ಲೂ ಮುಖ್ಯವಾಗಿ ಟೊಮೆಟೊ ದರ ಗಗನಕ್ಕೇರಿದೆ. ಇದರ ಮಧ್ಯೆ ಇತಿಹಾಸದಲ್ಲೇ ಮೊದಲ ಬಾರಿಗೆ ಶುಂಠಿಗೆ(ginger) ಬಂಗಾರದ ಬೆಲೆ ಬಂದಿದೆ. ಹೌದು.. 100 ಕೆ.ಜಿ ಶುಂಠಿಗೆ 18 ರಿಂದ 20 ಸಾವಿರ ರೂ.ಗೆ ಏರಿಕೆಯಾಗಿದೆ. ಕಳೆದ ವರ್ಷ ಇದೆ ಸಮಯದಲ್ಲಿ 100 ಕೆಜಿ ಶುಂಠಿಗೆ 900 ರೂ. ರಿಂದ 1200 ರೂಪಾಯಿ ಇತ್ತು. ಇದೀಗ ಶುಂಠಿ ಬೆಲೆ ಗಗನಕ್ಕೇರಿದ್ದು, ರೈತ ಪುಲ್ ಖುಷ್ ಆಗಿದ್ದಾನೆ. ಅಲ್ಲದೇ ಶುಂಠಿ ಬೆಳೆದ ರೈತ ಕುಬೇರನ ಮಗ ಎನ್ನುವಂತಾಗಿದೆ.
ಉತ್ತಮ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದ ಶುಂಠಿ ಬೆಳೆದ ರೈತರು ಇದೀಗ ಜಾಕ್ ಪಾಟ್ ಹೊಡೆದಿದ್ದಾರೆ. ಅದರಲ್ಲೂ ಹಳೆಯ ಶುಂಠಿಗೆ ಬೇಡಿಕೆ ಹೆಚ್ಚಾಗಿದೆ. ಹಳೆ ಶುಂಠಿಗೆ 18ರಿಂದ 20 ಸಾವಿರ ರೂ. ಇದ್ದು, ಈ ವರ್ಷ ಬೆಳೆದಿರುವ ಶುಂಠಿಗೆ 10 ರಿಂದ 12 ಸಾವಿರ ರೂ.ಇದೆ. ಇದರಿಂದ ಕಳೆದ ವರ್ಷದ ಶುಂಠಿಯನ್ನ ಹೊಲದಲ್ಲಿ ಉಳಿಸಿಕೊಂಡ ರೈತರಿಗೆ ಬಂಪರ್ ಬೆಲೆ ಸಿಗುತ್ತಿದೆ. ದೆಹಲಿ ಮತ್ತು ಉತ್ತರ ಭಾರತದಲ್ಲಿ ಶುಂಠಿಗೆ ಬೇಡಿಕೆ ಹೆಚ್ಚಾಗಿದ್ದು, 2011 ರಿಂದ 2023 ರಲ್ಲಿ ಇದೆ ಮೊದಲಿ ಬಾರಿಗೆ ಶುಂಠಿ ಬೆಲೆ 20 ಸಾವಿರ ರೂ. ಗಡಿ ತಲುಪಿದೆ. ಹೀಗಾಗಿ ಒಂದು ಎಕರೆ ಶುಂಠಿ ಬೆಳೆದ ರೈತ 25 ಲಕ್ಷ ರೂ. ಲಾಭದ ನಿರೀಕ್ಷೆಯಲ್ಲಿದ್ದಾನೆ.
ಸಾಮಾನ್ಯವಾಗಿ ಏಪ್ರಿಲ್- ಮೇ ತಿಂಗಳಲ್ಲಿ ಶುಂಠಿ ಬಿತ್ತನೆ ಮಾಡಲಾಗುತ್ತದೆ. 8 ತಿಂಗಳಿಗೂ ಹೆಚ್ಚಿನ ಅವಧಿಯ ಈ ಬೆಳೆ ಜನವರಿ ಹೊತ್ತಿಗೆ ಕೈಗೆ ಸಿಗುತ್ತದೆ. ಆದರೆ ಇದೀಗ ಈಗ ರೈತರು ಬೆಳೆಯೆಲ್ಲ ಮಾರಾಟ ಮಾಡಿ ಹೊಸದಾಗಿ ಬಿತ್ತನೆ ಮಾಡಿ ಶುಂಠಿ ಸಸಿ ಬೆಳೆಸುವ ಸಮಯದಲ್ಲಿ ಹಿಂದೆಂದೂ ಕಾಣದ ದಾಖಲೆಯ ಬೆಲೆ ಬಂದಿದೆ. ಹೆಚ್ಚಿನ ರೈತರ ಕೈಯಲ್ಲಿ ಬೆಳೆ ಇಲ್ಲದಿರುವುದರಿಂದ ಬೆಲೆ ಬಂದರೂ ಪ್ರಯೋಜನ ಇಲ್ಲದಂತಾಗಿದೆ. ಇನ್ನು ಮಾರಾಟ ಮಾಡದೇ ಇಟ್ಟುಕೊಂಡಿರುವ ರೈತರಿಗೆ ಮಾತ್ರ ಜಾಕ್ಪಾಟ್.
ಟೊಮ್ಯಾಟೋ ತಿನ್ನುವುದನ್ನೇ ಕಡಿಮೆ ಮಾಡಿದ್ದೇನೆ : ನಟ ಸುನೀಲ್ ಶೆಟ್ಟಿ
ದೇಶದಾದ್ಯಂತ ಟೊಮ್ಯಾಟೋ (Tomato) ಬೆಲೆ ಏರಿ ಕೂತಿದೆ. ಇದು ಮಧ್ಯಮ ಮತ್ತು ಕೆಳಮಧ್ಯಮ ವರ್ಗಕ್ಕೆ ಮಾತ್ರ ತಲೆಬಿಸಿ ತಂದಿಲ್ಲ, ಶ್ರೀಮಂತರು ಕೂಡ ಟೊಮ್ಯಾಟೋ ಬಗ್ಗೆ ಮಾತನಾಡುವಂತಾಗಿದೆ. ಖಾಸಗಿ ವಾಹಿನಿಯೊಂದರ ಜೊತೆ ಮಾತನಾಡಿರುವ ಬಾಲಿವುಡ್ (Bollywood) ನಟ ಸುನೀಲ್ ಶೆಟ್ಟಿ (Sunil Shetty) ಟೊಮ್ಯಾಟೋ ಬೆಲೆ ಬಗ್ಗೆ ಮಾತನಾಡಿದ್ದಾರೆ.
ನನ್ನ ಮನೆಯಲ್ಲಿ ಯಾವಾಗಲೂ ನಾವು ತಾಜಾ ತರಕಾರಿಯನ್ನೇ ತಂದು ಬಳಸುತ್ತೇವೆ. ದಿನಕ್ಕೆ ಎರಡ್ಮೂರು ರೀತಿಯ ತರಕಾರಿಗಳನ್ನು ನನ್ನ ಪತ್ನಿ ಖರೀದಿಸುತ್ತಾರೆ. ಅದರಲ್ಲೂ ಇತ್ತೀಚೆಗೆ ಟೊಮ್ಯಾಟೋ ದರ ಗಗನಕ್ಕೇರಿದೆ. ಹಾಗಾಗಿ ನಾನು ಟೊಮ್ಯಾಟೋ ತಿನ್ನುವುದನ್ನು ಕಡಿಮೆ ಮಾಡಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ಟೊಮ್ಯಾಟೋ ದರ ಏರಿಕೆಯಾಗುತ್ತಿದ್ದಂತೆಯೇ ಹಲವರು ಹಲವು ರೀತಿಯ ಪ್ರಯೋಗಗಳನ್ನು ಅಡುಗೆಯಲ್ಲಿ ಮಾಡುತ್ತಿದ್ದಾರೆ. ಅಲ್ಲದೇ, ತಮ್ಮ ಮನೆಯಲ್ಲೇ ಟೊಮ್ಯಾಟೋ ಬೆಳೆಯುವುದು ಹೇಗೆ ಎನ್ನುವುದನ್ನು ನಟಿ ರಾಖಿ ಸಾವಂತ್ ಹೇಳಿದ್ದರು. ಹದಿನೈದು ದಿನದ ಒಳಗೆ ಟೊಮ್ಯಾಟೋ ಬೆಳೆಯುವುದು ಹೇಗೆ ಎನ್ನುವುದನ್ನು ತೋರಿಸಿಕೊಟ್ಟಿದ್ದರು. ಆ ವಿಡಿಯೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.