ರಾಜಕೀಯದಲ್ಲಿ ಸಂಚಲನ ಮೂಡಿಸಿದ ಜನಾರ್ದನ ರೆಡ್ಡಿ ನಡೆ ; ಬಿಜೆಪಿ ಸೇರ್ಪಡೆ ಸಾಧ್ಯತೆ..!!
ಲೋಕಸಭಾ ಚುನಾವಣೆ ಹಿನ್ನೆಲೆ ಕೇಸರಿ ಪಡೆ ಭರ್ಜರಿ ತಯಾರಿ ನಡೆಸಿದೆ. ರಾಜಕೀಯ ಚಾಣಾಕ್ಷ ಅಮಿತ್ ಶಾ ಅವರನ್ನ ಮಾಜಿ ಸಚಿವ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಅವರು ದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಹೌದು, ಲೋಕಸಮರಕ್ಕೆ ಬಿಜೆಪಿ ಸಕಲ ರೀತಿಯಲ್ಲೂ ಸಜ್ಜಾಗಿದ್ದು, ಈಗಾಗಲೇ ಗೆಲ್ಲುವ ಅಭ್ಯರ್ಥಿಗಳ ಆಯ್ಕೆಗಾಗಿ ಹುಡುಕಾಟ ನಡೆಸುತ್ತಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಅನ್ಯ ಪಕ್ಷದ ನಾಯಕರನ್ನ ಸೆಳೆಯುವಂತ ಪ್ರಯತ್ನವನ್ನ ಬಿಜೆಪಿ ನಾಯಕರು ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರು ಅಮಿತ್ ಶಾ ಅವರನ್ನ ಭೇಟಿ ಮಾಡಿರುವುದು ಹಲವು ಅನುಮಾನಗಳನ್ನ ಹುಟ್ಟಿಸಿದೆ.
ಈ ಭೇಟಿಯ ವಿಚಾರವನ್ನು ಅವರು ತಮ್ಮ ಎಕ್ಸ್ ( ಟ್ವಿಟ್ಟರ್) ಖಾತೆಯಲ್ಲಿ ಮಾಜಿ ಸಚಿವ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಹಂಚಿಕೊಂಡಿದ್ದು, ಅಮಿತ್ ಶಾ ಅವರ ಆಹ್ವಾನ ಮೇರೆಗೆ ದೆಹಲಿಗೆ ಆಗಮಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷನಾಗಿ ಭೇಟಿ ಮಾಡಿ ಕರ್ನಾಟಕ ರಾಜ್ಯದ ಕೆಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದು, ಬಹಳ ಸಂತೋಷ ತಂದಿದೆ ಎಂದೂ ಹೇಳಿಕೊಂಡಿದ್ದಾರೆ.
ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಕೆಲವೊಂದು ಬೆಳವಣಿಗೆಗಳ ಹಿನ್ನಲೆಯಲ್ಲಿ ಅಮಿತ್ ಶಾ ಅವರನ್ನ ಜನಾರ್ದನ ರೆಡ್ಡಿ ಅವರು ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಅವರು ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮತವನ್ನು ಚಲಾಯಿಸಿದ್ದರು. ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಇತ್ತೀಚ್ಚಿಗಷ್ಟೇ ಮಾಡಿ ಮಾತುಕತೆ ನಡೆಸಿದ್ದರು.
ಅಲ್ಲದೇ ಅಮಿತ್ ಶಾ ಅವರ ಆಹ್ವಾನದ ಮೇರೆಗೆ ದಿಢೀರಾಗಿ ದೆಹಲಿಗೆ ತೆರಳಿ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸಹಜವಾಗಿ ಈ ಭೇಟಿ ಕುತೂಹಲಕ್ಕೆ ಕಾರಣವಾಗಿದೆ. ಈ ಹಿಂದೆ ಬಿಜೆಪಿಯಲ್ಲೇ ಇದ್ದ ಜನಾರ್ದನ ರೆಡ್ಡಿ ಗಣಿ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದರು.
ಇದೀಗ ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಇನ್ನಷ್ಟು ಕಟ್ಟುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿಯ ಹಲವು ನಾಯಕರು ಜನಾರ್ದನ ರೆಡ್ಡಿ ಅವರನ್ನ ಆಹ್ವಾನಿಸಿದ್ದಾರೆ ಎನ್ನಲಾಗಿತ್ತು. ಇದೀಗ ಅಮಿತ್ ಶಾ ಜೊತೆಗೆ ಮಾತುಕತೆ ನಡೆಸಿರುವುದು ಬಿಜೆಪಿ ಪಕ್ಷ ಸೇರ್ಪಡೆಗೆ ವೇದಿಕೆ ಸಿದ್ದವಾಯ್ತಾ ಎನ್ನುವ ಅನುಮಾನ ಹುಟ್ಟು ಹಾಕುವಂತೆ ಮಾಡಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಪ್ರಭಾವಿ ನಾಯಕರಾಗಿರುವ ಜನಾರ್ದನ ರೆಡ್ಡಿ ಅವರು ಪಕ್ಷಕ್ಕೆ ಸೇರ್ಪಡೆಯಾಗುವುದರಿಂದ ಹೆಚ್ಚು ಬಲ ಸಿಗುತ್ತೆ ಎನ್ನುವ ಮಾತು ರಾಜ್ಯ ಬಿಜೆಪಿ ನಾಯಕರಿಂದ ಕೇಳಿ ಬಂದಿದೆ. ಈಗಾಗಲೇ ರಾಜಕೀಯ ಜೀವನದಲ್ಲಿ ಭಾರೀ ಹಿನ್ನಡೆ ಅನುಭವಿಸಿರುವ ಜನಾರ್ದನ ರೆಡ್ಡಿ ಅವರು, ಕಳೆದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.
ಸದ್ಯ ಅವರ ಪಕ್ಷದಿಂದ ಅವರೊಬ್ಬರೇ ಗೆಲುವು ಸಾಧಿಸಿದ್ದಾರೆ. ಇನ್ನೂ ಅಮಿತ್ ಶಾ ಭೇಟಿಯ ಸಂದರ್ಭದಲ್ಲಿ ರಾಜಕೀಯ ಮಾತುಕತೆಗಳು ನಡೆದಿದೆಯೋ ಇಲ್ಲವೋ ಎಂಬುವುದರ ಕುರಿತಾಗಿ ಅವರು ಯಾವುದೇ ಸ್ಪಷ್ಟೀಕರಣ ನೀಡಿಲ್ಲ. ಕೇವಲ ಕರ್ನಾಟಕದ ಬಗ್ಗೆ ಮಾತ್ರ ಚರ್ಚೆಗಳು ನಡೆದಿದೆ ಎಂದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನವನ್ನ ಗೆಲ್ಲುವ ನಿಟ್ಟಿನಲ್ಲಿ ಹಾಗೂ ಬಿಜೆಪಿ ಭದ್ರಕೋಟೆಯನ್ನ ಇನ್ನಷ್ಟು ಬಲ ಪಡಿಸುವ ನಿಟ್ಟಿನಲ್ಲಿ ಜನಾರ್ದನ ರೆಡ್ಡಿ ಅವರನ್ನ ಪಕ್ಷಕ್ಕೆ ಆಹ್ವಾನಿಸಿದ್ದಾರೆ ಎನ್ನಲಾಗಿದೆ.
ಭಾರತ ರಾಷ್ಟ್ರದ ಕೇಂದ್ರ ಗೃಹಮಂತ್ರಿಗಳಾದ ಅಮಿತ್ ಶಾ ಜಿಯವರ ಆಹ್ವಾನದ ಮೇರೆಗೆ ನವದೆಹಲಿಯಲ್ಲಿ ಇಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷನಾಗಿ ಭೇಟಿ ಮಾಡಿ ಕರ್ನಾಟಕ ರಾಜ್ಯದ ಕೆಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದು ನನಗೆ ಬಹಳ ಸಂತೋಷವನ್ನು ತಂದಿದೆ.
— Gali Janardhana Reddy (@GaliJanardhanar) March 14, 2024
-ಗಾಲಿ ಜನಾರ್ಧನ ರೆಡ್ಡಿ. pic.twitter.com/Z3IUfc7MCC