ಹೊಂದಾಣಿಕೆ ರಾಜಕಾರಣದಿಂದ ಬಿಜೆಪಿಗೆ ಸೋಲು: ಸ್ವ ಪಕ್ಷದ ನಾಯಕರ ವಿರುದ್ಧವೇ ಸಿಟಿ ರವಿ ಆಕ್ರೋಶ
ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ (BJP) ಹೀನಾಯ ಸೋಲಿಗೆ ಕಾರಣವೇನು ಎಂಬ ಕುರಿತು ಪಕ್ಷದ ನಾಯಕರು ಪರಾಮರ್ಶೆ ಸಭೆ ನಡೆಸಿದ್ದಾರೆ. ಕೆಲವೊಬ್ಬ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನೂ ಮಾಡಿಕೊಂಡಿದ್ದಾರೆ. ಇವೆಲ್ಲದರ ಮಧ್ಯೆ, ಇದೀಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ಸ್ವಪಕ್ಷೀಯರ ವಿರುದ್ಧವೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮಲ್ಲೂ ರಾಜಿ ರಾಜಕಾರಣ ಮಾಡಿ ತಪ್ಪು ಮಾಡಿದ್ದಾರೆ. ಕೆಲವರ ರಾಜಿ ರಾಜಕಾರಣದಿಂದ ಬಿಜೆಪಿ ಪಕ್ಷ ಅಧಿಕಾರ ಕಳೆದುಕೊಂಡಿತು. ಹೊಂದಾಣಿ ರಾಜಕಾರಣದಿಂದಲೇ ಬಿಜೆಪಿ ಸೋತಿದೆ ಎಂದು ಹೇಳಿದ್ದಾರೆ.
ಹೊಂದಾಣಿಕೆ ರಾಜಕಾರಣ ಮಾಡಿಕೊಳ್ಳದಿದ್ದರೆ ಇವತ್ತು ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಸ್ವ ಪಕ್ಷದ ನಾಯಕರ ವಿರುದ್ಧವೇ ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಲಿನ ಬಗ್ಗೆ ಆತ್ಮಾವಲೋಕನ ಸಭೆಯಲ್ಲಿ ಪ್ರಸ್ತಾಪಿಸಿದ್ದ ಮಾಜಿ ಸಚಿವ ಎಂಟಿಬಿ ನಾಗರಾಜ್ ಕೂಡ ಸ್ವಪಕ್ಷೀಯರ ಮೇಲೆ ವಾಗ್ದಾಳಿ ನಡೆಸಿದ್ದರು. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಆಹ್ವಾನದ ಮೇರೆಗೆ ಬಿಜೆಪಿ ಸೇರಿದ್ದೆ. ಆದರೆ ಎರಡು ಬಾರಿ ಚುನಾವಣೆಯಲ್ಲಿ ಸೋಲುವಂತಾಯಿತು. ಮಾಜಿ ಸಚಿವ ಡಾ ಕೆ ಸುಧಾಕರ್ ಅವರ ಕಾರಣದಿಂದಲೇ ಚುನಾವಣೆಯಲ್ಲಿ ಸೋಲುವಂತಾಯಿತು ಎಂದು ನಾಗರಾಜ್ ಸಭೆಯಲ್ಲಿ ಪ್ರಸ್ತಾಪಿಸಿದ್ದರು ಎಂದು ಮೂಲಗಳು ತಿಳಿಸಿವೆ.