ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿ ಬೆಂಗಳೂರಿನಲ್ಲಿ ನಿಧನ

ಬೆಂಗಳೂರು: ಕೇರಳದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಕೇರಳ ಕಾಂಗ್ರೆಸ್ ನ ಹಿರಿಯ ನಾಯಕ ಉಮ್ಮನ್ ಚಾಂಡಿ (79) ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಚಾಂಡಿಯವರು ಕಳೆದ ಕೆಲವು ತಿಂಗಳುಗಳಿಂದ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷ ತನ್ನ ನೇತೃತ್ವದಲ್ಲಿ ನಾನಾ ರಾಜ್ಯಗಳಲ್ಲಿರುವ ವಿಪಕ್ಷಗಳ ಬೃಹತ್ ಸಭೆ ಆಯೋಜಿಸಿರುವ ದಿನವೇ (ಜು. 18), ತನ್ನ ನಾಯಕರೊಬ್ಬರನ್ನು ಕಳೆದುಕೊಂಡಿರುವುದು ವಿಪರ್ಯಾಸ.
1943ರ ಕೇರಳದ ಕೊಟ್ಟಾಯಂ ಜಿಲ್ಲೆಯ ಪುದುಪಲ್ಲಿ ಎಂಬಲ್ಲಿ ಜನಿಸಿದ್ದ ಚಾಂಡಿ, ವಿದ್ಯಾರ್ಥಿಯಾಗಿದ್ದಾಗಿನಿಂದಲೇ ರಾಜಕೀಯ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದರು. ಅಖಿಲ ಭಾರದ ಕಾಂಗ್ರೆಸ್ ನ ವಿದ್ಯಾರ್ಥಿ ಗಳ ವಿಭಾಗವಾದ ಕೇರಳ ಸ್ಟೂಡೆಂಟ್ಸ್ ಯೂನಿಯನ್ ನ (ಕೆಎಸ್ ಯು) ಸದಸ್ಯರಾಗಿ, ಅನೇಕ ಹೋರಾಟಗಳಲ್ಲಿ ಅವರು ಗುರುತಿಸಿಕೊಂಡಿದ್ದರು. ಕಲಾ ವಿಭಾಗದಲ್ಲಿ ಪದವಿಯನ್ನು ಪಡೆದ ನಂತರ ಪೂರ್ಣಪ್ರಮಾಣದಲ್ಲಿ ರಾಜಕೀಯದಲ್ಲಿ ತೊಡಗಿಸಿಕೊಂಡರು.
ಮೊದಲ ಬಾರಿಗೆ ಸ್ಪರ್ಧಿಸಿ ಜಯ ಗಳಿಸಿದ್ದ ಅವರು, ಸತತವಾಗಿ ಐದು ದಶಕಗಳ ಕಾಲ ಆ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2021ರಲ್ಲಿ ನಡೆದಿದ್ದ ಕೇರಳ ವಿಧಾನಸಭೆ ಚುನಾವಣೆಯಲ್ಲಿಯೂ ಅವರು ಅದೇ ಕ್ಷೇತ್ರದಿಂದ ಜಯ ಗಳಿಸಿದ್ದರು. 2004ರಿಂದ 2006ರವರೆಗೆ ಕೇರಳದ 10ನೇ ಮುಖ್ಯಮಂತ್ರಿಯಾಗಿ ಅವರು ಸೇವೆ ಸಲ್ಲಿಸಿದ್ದರು. ಆನಂತರ, 2011ರಿಂದ 2016ರವರೆಗೆ ಕೇರಳದ 10ನೇ ಮುಖ್ಯಮಂತ್ರಿಯಾಗಿ ಅವರು ಸೇವೆ ಸಲ್ಲಿಸುವ ಅವಕಾಶ ಒದಗಿಬಂದಿತ್ತು.
ಕೇರಳ ಕಾಂಗ್ರೆಸ್ ಅಧ್ಯಕ್ಷ ಕೆ. ಸುಧಾಕರನ್ ಅವರು ಟ್ವಿಟರ್ ನಲ್ಲಿ ಚಾಂಡಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಅವರು ಒಬ್ಬ ಧೀಮಂತ ನಾಯಕರೊಬ್ಬರನ್ನು ಕಾಂಗ್ರೆಸ್ ಇಂದು ಕಳೆದುಕೊಂಡಿದೆ ಎಂದು ಅವರು ತಿಳಿಸಿದ್ದಾರೆ.