ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮನೋಹರ್ ಜೋಶಿ ನಿಧನ..!
ಶಿವಸೇನೆಯ ಹಿರಿಯ ನಾಯಕ ಹಾಗೂ ಮಹಾರಾಷ್ಟ್ರದ (Maharashtra) ಮಾಜಿ ಮುಖ್ಯಮಂತ್ರಿ ಮನೋಹರ್ ಜೋಶಿ (Manohar Joshi) (87 ವರ್ಷ) ವಿಧಿವಶರಾಗಿದ್ದಾರೆ. ಮನೋಹರ್ ಜೋಶಿ ಅವರು ಹೃದಯಾಘಾತದಿಂದ ಮುಂಬೈನ (Mumbai) ಹಿಂದೂಜಾ ಆಸ್ಪತ್ರೆಗೆ ದಾಖಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು (ಫೆ.23) ನಸುಕಿನ ಜಾವ 3 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಕೆಲವು ತಿಂಗಳ ಹಿಂದೆ ಮನೋಹರ್ ಜೋಶಿ ಮೆದುಳಿನ ರಕ್ತಸ್ರಾವದಿಂದ ಹಿಂದೂಜಾ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರು ಚೇತರಿಸಿಕೊಂಡ ನಂತರ ಅವರನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದ ಮನೋಹರ್ ಜೋಶಿ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು.
ಮನೋಹರ್ ಜೋಶಿ ಅವರು ರಾಯಗಡ ಜಿಲ್ಲೆಯ ನಂಡ್ವಿ ಗ್ರಾಮದಲ್ಲಿ 1937ರ ಡಿಸೆಂಬರ್ 2 ರಂದು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಎಂಎ ಮತ್ತು ಎಲ್ಎಲ್ಬಿ ಪದವಿಗಳನ್ನು ಮುಂಬೈ ವಿಶ್ವವಿದ್ಯಾಲಯದಿಂದ ಪಡೆದರು. ಮನಹೋರ ಜೋಶಿ ಅವರಿಗೆ ಪತ್ನಿ ಅನಘಾ ಜೋಶಿ, ಓರ್ವ ಪುತ್ರ ಉನ್ಮೇಶ್, ಪುತ್ರಿಯರಾದ ಅಸ್ಮಿತಾ ಮತ್ತು ನಮ್ರತಾ ಇದ್ದಾರೆ.
ಮನೋಹರ ಜೋಶಿ ರಾಜಕೀಯ ಜೀವನ
ಮನೋಹರ ಜೋಶಿ ಅವರು ಶಿವಸೇನೆಯಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗುವ ಮೂಲಕ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಪರಿಷತ್ ಸದಸ್ಯರಾಗಿ 1972 ರಿಂದ 1989 ರವರೆಗೆ ಸೇವೆ ಸಲ್ಲಿಸಿದ್ದಾರೆ. 1976 ರಿಂದ 1977 ರ ಅವಧಿಯಲ್ಲಿ ಮುಂಬೈನ ಮೇಯರ್ ಆದರು. ಅವರು 1990 ರಲ್ಲಿ ಶಿವಸೇನೆ ಟಿಕೆಟ್‌ನಿಂದ ಶಾಸಕಾಂಗ ಸಭೆಗೆ ಆಯ್ಕೆಯಾದರು. ಜೋಶಿ ಅವರು 1995 ರಿಂದ 1999 ರವರೆಗೆ ಮಹಾರಾಷ್ಟ್ರದ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ಮೂಲಕ ಅವಿಭಜಿತ ಶಿವಸೇನೆಯಿಂದ ರಾಜ್ಯದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ ಮೊದಲ ನಾಯಕರಾಗಿದರು.
ಅವರು ಸಂಸತ್ ಸದಸ್ಯರಾಗಿಯೂ ಚುನಾಯಿತರಾಗಿದ್ದರು ಮತ್ತು ವಾಜಪೇಯಿ ಸರ್ಕಾರ ಅಧಿಕಾರದಲ್ಲಿದ್ದಾಗ 2002 ರಿಂದ 2004 ರವರೆಗೆ ಲೋಕಸಭಾ ಸ್ಪೀಕರ್ ಆಗಿದ್ದರು. ಹಾಗೂ ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಮತ್ತು ರಾಜ್ಯಸಭಾ ಸದಸ್ಯ ಮುಂತಾದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.