ಕರಾವಳಿಯಲ್ಲಿ ಇಂದು ಗುಡುಗು ಸಹಿತ ಭಾರಿ ಮಳೆಯ ಮುನ್ಸೂಚನೆ!
ಬೆಂಗಳೂರು : ರಾಜ್ಯದಲ್ಲಿ ಮತ್ತೆ ವರುಣನ ಸಿಂಚನವಾಗಿದೆ. ರಾಜ್ಯದಲ್ಲಿ ಇನ್ನು ನಾಲ್ಕು ದಿನ ಮಳೆಯಾಗಲಿದೆ. ನಿನ್ನೆ ಮಧ್ಯಾಹ್ನದಿಂದಲೇ ಸಿಲಿಕಾನ್ ಸಿಟಿಯಲ್ಲಿ ಮಳೆಯಾಗುತ್ತಿದೆ. ನಗರದ ಬಹುತೇಕ ಕಡೆಗಳಲ್ಲಿ ಮಳೆ ಸಿಂಚನವಾಗಿದೆ. ಇಂದು ಕೂಡಾ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ರಾಮನಗರ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಭಾಗದಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಇನ್ನು ಇಂದು ಕರಾವಳಿ ಜಿಲ್ಲೆಗಳಲ್ಲಿ ಕೂಡಾ ಮಳೆಯ ಎಚ್ಚರಿಕೆ ನೀಡಲಾಗಿದೆ.
ಉತ್ತರ ಒಳನಾಡಿನಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ.
ಕಾರ್ಕಳದಲ್ಲಿ ಗಾಳಿ ಮಳೆಗೆ ಶಾಲೆಯ ಹಂಚು ಹಾರಿ 8 ವಿದ್ಯಾರ್ಥಿಗಳಿಗೆ ಗಾಯ..!
ಕಾರ್ಕಳ : ಸೋಮವಾರ ಸಂಜೆ ಬೀಸಿದ ಭಾರಿ ಗಾಳಿಮಳೆಗೆ ಶಾಲೆಯ ಹಂಚುಗಳು ಹಾರಿ ಹೋಗಿ 8 ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಳ್ಳಾರೆ ಪರಿಸರದ ಜನಾರ್ಧನ ಅನುದಾನಿತ ಶಾಲೆಯಲ್ಲಿ ಸಂಭವಿಸಿದೆ.
ಇಬ್ಬರು ವಿದ್ಯಾರ್ಥಿಗಳಿಗೆ ಗಂಭಿರ ಸ್ವರೂಪದ ಗಾಯಗಳಾದ್ರೆ 6 ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡಿರುವ ಕಂಬ್ಳಮನೆ ಕುಕ್ಕುಜೆಯ ಸುಕನ್ಯಾ, ಬೈರಂಪಳ್ಳಿಯ ಪ್ರಶುಲ್ ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಾಲೆಯ ಎರಡು ಕಟ್ಟಡಗಳ ಸುಮಾರು 500 ಕ್ಕೂ ಅಧಿಕ ಹೆಂಚುಗಳು ಗಾಳಿಯ ರಭಸಕ್ಕೆ ನೆಲಕ್ಕುರಳಿ ಭಾರಿ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಘಟನೆ ಕುರಿತು ಮಾಹಿತಿ ಪಡೆದ ಶಾಸಕ ಸುನಿಲ್ ಕುಮಾರ್ ಅವರು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪಂಚಾಯತ್ ಸದಸ್ಯರಿಗೆ ಕರೆ ಮಾಡಿ ಪೂರಕ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಅನಂತ ಶಂಕರ್, ಬಿಇಒ ಭಾಸ್ಕರ್, ಅಜೆಕಾರು ಪೊಲೀಸ್ ಠಾಣೆ ಎಸ್‌ಐ ರವಿ ಬಿ.ಕೆ., ಕ್ರೈಮ್ ಎಸ್‌ಐ ಲಕ್ಷ್ಮಣ್, ಕಡ್ತಲ ಗ್ರಾಮ ಪಂಚಾಯತ್ ಅಧ್ಯಕ್ಷ ಸುಖೇಶ್, ಪಿಡಿಒ ತಿಲಕ್ ರಾಜ್ ಮೊದಲಾದವರು ಭೇಟಿ ನೀಡಿದರು.