ವಿದ್ಯಾರ್ಥಿನಿಯರಿಗೆ ಮುಂದಿನ ತಿಂಗಳು ಸ್ಯಾನಿಟರಿ ಪ್ಯಾಡ್: ಸಚಿವ ದಿನೇಶ್ ಗುಂಡೂರಾವ್
![ವಿದ್ಯಾರ್ಥಿನಿಯರಿಗೆ ಮುಂದಿನ ತಿಂಗಳು ಸ್ಯಾನಿಟರಿ ಪ್ಯಾಡ್: ಸಚಿವ ದಿನೇಶ್ ಗುಂಡೂರಾವ್](https://urtv24.com/wp-content/uploads/2023/09/WhatsApp-Image-2023-09-11-at-09.08.06-5.jpg)
ಮಂಗಳೂರು: ಸಿದ್ದರಾಮಯ್ಯ 2013ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ವಿದ್ಯಾರ್ಥಿನಿಯರ ಹಿತರಕ್ಷಣೆಯ ಉದ್ದೇಶದಿಂದ ಜಾರಿಗೆ ತಂದಿದ್ದ ಸ್ಯಾನಿಟರಿ ಪ್ಯಾಡ್ ವಿತರಣೆ ಕಳೆದ ಮೂರು ವರ್ಷಗಳಿಂದ ಸ್ಥಗಿತವಾಗಿತ್ತು. ಅದನ್ನು ಮರು ಆರಂಭಿಸಿ ಅಕ್ಟೋಬರ್ನಲ್ಲಿ 40 ಲಕ್ಷ ವಿದ್ಯಾರ್ಥಿನಿಯರಿಗೆ ಪ್ಯಾಡ್ ವಿತರಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ರಾಜ್ಯದ ಸರಕಾರಿ ಪದವಿಪೂರ್ವ ಹಾಗೂ ಅನುದಾನಿತ ಕಾಲೇಜುಗಳ ವಿದ್ಯಾರ್ಥಿನಿಯರ ಆರೋಗ್ಯ ಸುರಕ್ಷೆಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಋತುಸ್ರಾವ ಕಪ್ ವಿತರಿಸುವ ರಾಜ್ಯ ಮಟ್ಟದ “ಮೈತ್ರಿ’ ಮುಟ್ಟಿನ ಕಪ್ ಯೋಜನೆಗೆ ಮಂಗಳೂರಿನಲ್ಲಿ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಮೈತ್ರಿ ಕಪ್ ಅನ್ನು ಆರಂಭಿಕವಾಗಿ ದ.ಕ., ಚಾಮರಾಜನಗರ ಜಿಲ್ಲೆಗಳ ಪದವಿ ತರಗತಿಯ 15 ಸಾವಿರ ವಿದ್ಯಾರ್ಥಿನಿಯರಿಗೆ ವಿತರಿಸಲಾಗುವುದು. ಬಳಿಕ ಇತರ ಜಿಲ್ಲೆಗಳಲ್ಲೂ ವಿತರಿಸಲಾಗುವುದು. ರಾಜ್ಯದ ಸರಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳ 10ರಿಂದ 17 ವರ್ಷ ವಯಸ್ಸಿನ ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ಗಳನ್ನು ವಿತರಿಸಲಾಗುವುದು. ಕಪ್ ಬಳಕೆಯಿಂದ ವಿದ್ಯಾರ್ಥಿನಿಯರಲ್ಲಿ ಮಾನಸಿಕ ಸ್ಥೈರ್ಯ ಹೆಚ್ಚಲಿದೆ. ಜತೆಗೆ ಪ್ಯಾಡ್ಗಳ ಬಳಕೆಯಿಂದಾಗುವ ಪರಿಸರದ ಮೇಲಿನ ಹಾನಿಯನ್ನೂ ತಡೆಯಬಹುದು. ಮುಟ್ಟಿನ ಸಂದರ್ಭದಲ್ಲಿ ಅನಾನುಕೂಲತೆಯಿಂದಾಗಿ ಸಾಕಷ್ಟು ವಿದ್ಯಾರ್ಥಿನಿಯರು ಶಾಲಾ ಕಾಲೇಜುಗಳ ತರಗತಿಗೆ ಹಾಜರಾಗಲು ತೊಂದರೆ ಅನುಭವಿಸುವುದನ್ನು ತಪ್ಪಿಸಲು ಈ ಯೋಜನೆ ಜಾರಿಗೆ ತರಲಾಗಿದೆ ಎಂದರು.
ಆರೋಗ್ಯ ಕಾಳಜಿ ಆಶಯ
ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ಆಧುನಿಕ ವ್ಯವಸ್ಥೆಯಲ್ಲಿ ಅಗತ್ಯ ಸೌಲಭ್ಯಗಳು ಎಲ್ಲರಿಗೂ ದೊರಕಬೇಕೆಂಬ ನಿಟ್ಟಿನಲ್ಲಿ ಜಾರಿಗೆ ತರಲಾದ ಮೈತ್ರಿ ಕಪ್ ವಿತರಣೆ ಯೋಜನೆ ಆರೋಗ್ಯ ಮತ್ತು ಪರಿಸರದ ದೃಷ್ಟಿಯಿಂದ ಅನುಕೂಲಕರ. ಶಿಕ್ಷಕ ವರ್ಗ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಈ ಯೋಜನೆಯ ರಾಯಭಾರಿಗಳಾಗಿ ಆತ್ಮವಿಶ್ವಾಸ ಮೂಡಿಸಬೇಕಿದೆ ಎಂದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಮಂಗಳೂರಿನ ಕೆಲವು ಲೇಡೀಸ್ ಹಾಸ್ಟೆಲ್ಗಳಿಂದ ಒಳಚರಂಡಿಗೆ ಸ್ಯಾನಿಟರಿ ಪ್ಯಾಡ್ಗಳು ಸೇರುತ್ತಿರುವ ಹಲವು ಘಟನೆ ನಡೆಯುತ್ತಿದೆ. ಹೀಗಾಗಿ ಮೈತ್ರಿ ಕಪ್ ಬಳಸುವ ನಿಟ್ಟಿನಲ್ಲಿ ವಿದ್ಯಾರ್ಥಿನಿಯರು ಹೆಚ್ಚು ಆದ್ಯತೆ ನೀಡಬೇಕು ಎಂದರು.
ಯೋಜನೆಯ ರಾಯಭಾರಿ ಚಲನಚಿತ್ರ ನಟಿ ಸಪ್ತಮಿ ಗೌಡ, ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಡಾ| ಮಂಜುನಾಥ ಭಂಡಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಆಯುಕ್ತ ಡಿ. ರಂದೀಪ್, ನಿರ್ದೇಶಕರಾದ ಡಾ| ಎಂ. ಇಂದುಮತಿ, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಡಾ| ನವೀನ್ ಭಟ್ ವೈ., ಯೋಜನಾ ನಿರ್ದೇಶಕ ಡಾ| ಶ್ರೀನಿವಾಸ್ ಜಿ.ಎನ್., ಇಲಾಖೆಯ ಉಪ ನಿರ್ದೇಶಕರಾದ ಡಾ| ವೀಣಾ ವಿ., ವಿಭಾಗೀಯ ಸಹಾ ನಿರ್ದೇಶಕರಾದ ಡಾ| ರಾಜೇಶ್ವರಿ ದೇವಿ, ಜಿಲ್ಲಾಧಿಕಾರಿ ಮುಲ್ಲೆ„ ಮುಗಿಲನ್, ಜಿ.ಪಂ. ಸಿಇಒ ಡಾ| ಆನಂದ್ ಕೆ. ಉಪಸ್ಥಿತರಿದ್ದರು.
ಮುಟ್ಟು ಸಮಸ್ಯೆ ಅಲ್ಲ; ಸಪ್ತಮಿ ಗೌಡ
ಚಲನಚಿತ್ರ ನಟಿ ಸಪ್ತಮಿ ಗೌಡ ಮಾತನಾಡಿ, ಪ್ರತೀ ಕ್ಷೇತ್ರದಲ್ಲೂ ಸಾಧನೆ ತೋರುವ ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಸ್ಯೆ ಬಾಧಕವಾಗಲೇಬಾರದು. ಸ್ಯಾನಿಟರಿ ಪ್ಯಾಡ್ನ ವಿಲೇವಾರಿ ಸಮಸ್ಯೆ ಜತೆಗೆ ಮುಜುಗರ ಹುಟ್ಟಿಸುವ ಕಾರಣದಿಂದ ಪರ್ಯಾಯವಾಗಿ ಪರಿಸರ ಸ್ನೇಹಿ ಮೈತ್ರಿ ಕಪ್ ಬಳಕೆ ಅನುಕೂಲಕರ. ಈ ಬಗ್ಗೆ ತಾಯಂದಿರಲ್ಲಿ ಜಾಗೃತಿ ಮೂಡಬೇಕಿದೆ ಎಂದರು.
ಕೆಲವು ವರ್ಷದವರೆಗೆ ಕಪ್ ಬಳಕೆ
ವಿದ್ಯಾರ್ಥಿನಿ ಶ್ವೇತಾ ಮಾತನಾಡಿ, ಮೈತ್ರಿ ಕಪ್ ಬಳಕೆಯಿಂದ ಕೊಂಚ ದಿನ ಸಮಸ್ಯೆ ಆಯಿತು. ಆದರೆ ಬಳಿಕ ಸುಲಭವಾಗಿದೆ. ಪ್ಯಾಡ್ ಬಳಸಿ ಎಲ್ಲೆಂದರಲ್ಲಿ ಎಸೆಯುವ ಪ್ರಮೇಯವಿಲ್ಲ. ಹಣ ಕೂಡ ಉಳಿತಾಯವಾಗುತ್ತದೆ. ಕಪ್ ಅನ್ನು ಕೆಲವು ವರ್ಷಗಳ ಕಾಲ ಬಳಸಬಹುದಾಗಿದೆ ಎಂದರು.
ಪ್ಯಾಡ್ ಹಣ ಉಳಿತಾಯ
ವಿದ್ಯಾರ್ಥಿನಿ ವಿದ್ಯಾ ಕೆ. ಮಾತನಾಡಿ, “ನಾನು ಮೈತ್ರಿ ಮುಟ್ಟಿನ ಕಪ್ ಬಳಕೆ ಮಾಡುತ್ತಿದ್ದೇನೆ. ಇದರಿಂದ ಪರಿಸರಕ್ಕೆ ಹಾನಿ ಇಲ್ಲ. ಪ್ಯಾಡ್ಗಾಗಿ 200 ರೂ. ಖರ್ಚು ಮಾಡುವುದು ಉಳಿತಾಯವಾಗುತ್ತದೆ. ಜತೆಗೆ ಯಾವುದೇ ಪ್ರದೇಶಕ್ಕೆ ಕೂಡ ಹೋಗಲು ನನಗೆ ಯಾವ ಭಯವೂ ಇಲ್ಲ’ ಎಂದರು.