ಪಾಳುಬಿದ್ದ ಮನೆಯಲ್ಲಿ ನಿಗೂಢವಾಗಿ ಐದು ಅಸ್ಥಿಪಂಜರ ಪತ್ತೆ..!
ಚಿತ್ರದುರ್ಗ, ಡಿಸೆಂಬರ್ 29: ನಗರದ ಚಳ್ಳಕೆರೆ (Challakere) ಗೇಟ್ ಸಮೀಪವಿರುವ ಜೈಲ್ ರಸ್ತೆಯಲ್ಲಿರುವ ಪಾಳುಬಿದ್ದ ಮನೆಯಲ್ಲಿ ಐದು ಅಸ್ಥಿಪಂಜರ (Skeleton) ಪತ್ತೆ ಆಗಿವೆ. ಈ ಸಂಬಂಧ ಪವನ್ ಕುಮಾರ್ ಎಂಬುವರು ಚಿತ್ರದುರ್ಗ (Chitradurga) ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಮನೆಯಲ್ಲಿ ಪವನ್ ಕುಮಾರ್ ಸಂಬಂಧಿ ಜಗನ್ನಾಥರೆಡ್ಡಿ ಮತ್ತು ಕುಟುಂಬ ವಾಸವಾಗಿದ್ದರು. ಜಗನ್ನಾಥರೆಡ್ಡಿ, ಪತ್ನಿ ಪ್ರೇಮಕ್ಕ, ಪುತ್ರಿ ತ್ರಿವೇಣಿ, ಪುತ್ರ ಕೃಷ್ಣರೆಡ್ಡಿ, ನರೇಂದ್ರರೆಡ್ಡಿ ವಾಸವಾಗಿದ್ದರು.
ಸ್ಥಳೀಯರೊಬ್ಬರು ನೀಡಿದ ಮಾಹಿತಿ ಅಧರಿಸಿ ಪೊಲೀಸರು ಪಾಳುಬಿದ್ದ ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಈ ಅಸ್ಥಿಪಂಜರಗಳು ಸಿಕ್ಕಿವೆ. ಸ್ಥಳಕ್ಕೆ ಡಿವೈಎಸ್ಪಿ ಪಿ.ಅನಿಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ? ಇಲ್ಲವೇ ಕೊಲೆಯಾಗಿದ್ದಾರೆಯೇ? ಎಂಬುವುದರ ಕುರಿತು ಇನ್ನಷ್ಟೇ ತಿಳಿಯಬೇಕಿದೆ. ಸದ್ಯ ಅಸ್ಥಿಪಂಜರಗಳನ್ನು ಎಫ್ಎಸ್ಎಲ್ ಪರೀಕ್ಷೆಗೆ ಕಳಿಸಲು ತೀರ್ಮಾನಿಸಲಾಗಿದೆ. ಪೊಲೀಸರ ಸೂಕ್ತ ತನಿಖೆ ಬಳಿಕವಷ್ಟೇ ಐದು ಅಸ್ಥಿಪಂಜರಗಳ ಹಿನ್ನೆಲೆ ಗೊತ್ತಾಗಲಿದೆ.
ಈ ಬಗ್ಗೆ ಜಗನ್ನಾಥರೆಡ್ಡಿ ಸಂಬಂಧಿ ಪವನ್ ಕುಮಾರ್ ಮಾತನಾಡಿ “ಜಗನ್ನಾಥರೆಡ್ಡಿ (80) ನಿವೃತ್ತ ಇಂಜಿನಿಯರ್ ಆಗಿದ್ದರು. ಸುಮಾರು ವರ್ಷಗಳಿಂದ ಜಗನ್ನಾಥರೆಡ್ಡಿ ಕುಟುಂಬ ನಮ್ಮ ಸಂಪರ್ಕದಲ್ಲಿರಲಿಲ್ಲ. ನಮ್ಮ ಮನೆಗೆ ಅವರು ಬರುತ್ತಿರಲಿಲ್ಲ, ಅವರ ಮನೆಗೆ ನಾವು ಹೋಗುತ್ತಿರಲಿಲ್ಲ. ಕೆಲ ವರ್ಷಗಳಿಂದ ಜಗನ್ನಾಥರೆಡ್ಡಿ ಮತ್ತು ಕುಟುಂಬದವರು ಕಂಡಿಲ್ಲ. ಜಗನ್ನಾಥರೆಡ್ಡಿ ಮನೆಯಲ್ಲಿ ಪತ್ತೆ ಆಗಿರುವ ಅಸ್ಥಿಪಂಜರ ಅವರದ್ದೇ ಆಗಿರಬಹುದು. ಮೂರು ವರ್ಷದ ಹಿಂದೆಯೇ ಅವರು ಮನೆಯಲ್ಲೇ ಮೃತಪಟ್ಟಿರಬಹುದು” ಎಂದು ಶಂಕಿಸಿದ್ದಾರೆ.
ಕಲಬುರಗಿ: ಮಹಿಳಾ ಕಾನ್ಸ್ಟೇಬಲ್ CDR ಪಡೆದು ಮಾನಸಿಕ ಕಿರುಕುಳ ನೀಡಿದ್ದ ಆರೋಪಿ ವಿರುದ್ಧ FIR
ಕಲಬುರಗಿ, ಡಿ.29: ಮಹಿಳಾ ಕಾನ್ಸ್ಟೇಬಲ್ CDR (Call Detail Record) ಪಡೆದು ಮಾನಸಿಕ ಕಿರುಕುಳ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಕಲಬುರಗಿಯಲ್ಲಿ ಎಂಒಬಿ (ಅಪರಾಧ ಹಿನ್ನೆಲೆಯುಳ್ಳವರು) ಮಹೇಶ್ ಸಂಗಾವಿ ವಿರುದ್ಧ FIR ದಾಖಲಾಗಿದೆ. ಮಹಿಳಾ ಕಾನ್ಸ್ಟೇಬಲ್ (Lady Constable) ನೀಡಿದ ದೂರಿನನ್ವಯ ಕಲಬುರಗಿ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. FIRನಲ್ಲಿ ಕಾನ್ಸ್ಟೇಬಲ್ಗೆ ಮಾನಸಿಕ ಕಿರುಕುಳ ನೀಡಲಾಗಿರುವ ಅಂಶಗಳನ್ನು ಉಲ್ಲೇಖಿಸಲಾಗಿದೆ.
ಮಹಿಳಾ ಕಾನ್ಸ್ಟೇಬಲ್ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ 7 ವರ್ಷ ಕರ್ತವ್ಯ ನಿರ್ವಹಿಸಿದ್ದರು. ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಪರಿಚಯವಾದ ಮಹೇಶ್ ಸಂಗಾವಿ ಬಳಿಕ ನಂಬರ್ ಪಡೆದು ಕಾಲ್ ಮಾಡಿ ಮಾತನಾಡುತ್ತಿದ್ದ. ಮಹಿಳಾ ಕಾನ್ಸ್ಟೇಬಲ್ ಅಶೋಕ ನಗರ ಠಾಣೆಯಿಂದ ಆರ್.ಜಿ. ನಗರ ಠಾಣೆಗೆ ವರ್ಗಾವಣೆಯಾದರು. ಆಗ ಆರ್.ಜಿ. ನಗರ ಠಾಣೆಯಲ್ಲಿ ಎಮ್ ಓಬಿ ಫೈಲ್ನಲ್ಲಿ ಮಹೇಶ್ ಹೆಸರು ನೋಡಿ ಮಹೇಶ್ನಿಂದ ದೂರವಾಗೋದಕ್ಕೆ ಮುಂದಾಗಿದ್ರು. ಆಗ ಮಹಿಳಾ ಕಾನ್ಸ್ಟೇಬಲ್ ಭೇಟಿಯಾಗಿ ಮಹೇಶ್ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ.
ಹಣ ಕೊಡದಿದ್ರೆ ಖಾಸಗಿ ವಿಡಿಯೋ, ಫೋಟೋ ವೈರಲ್ ಮಾಡುವ ಬೆದರಿಕೆ ಹಾಕಿದ್ದ. ಇನ್ನು ವಿಡಿಯೋ ವೈರಲ್ ಮಾಡ್ತೇನೆ ಎಂದಿದ್ದಕ್ಕೆ ಮಹಿಳಾ ಕಾನ್ಸ್ಟೇಬಲ್ ಆರೋಪಿ ಮಹೇಶನಿಗೆ ಕಪಾಳ ಮೋಕ್ಷ ಮಾಡಿ ಅವನಿಂದ ದೂರವಾಗಿದ್ದರು. ಆದರೂ ಬಿಡದೆ ಮಹೇಶ ಮದುವೆ ಆಗುವಂತೆ ಮಹಿಳಾ ಕಾನ್ಸ್ಟೇಬಲ್ಗೆ ಪೀಡಿಸುತ್ತಿದ್ದ. ಮಹೇಶ್ ಮದುವೆಗೆ ನಿರಾಕರಿಸಿ ಮತ್ತೊಬ್ಬ ಕಾನ್ಸ್ಟೇಬಲ್ ಜೊತೆ ಲೇಡಿ ಪಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಲೇಡಿ ಕಾನ್ಸ್ಟೇಬಲ್ ಬಳಿ 1.5 ಲಕ್ಷ ಹಣ ವಸೂಲಿ ಮಾಡಿರೋದಾಗಿ ಎಫ್ಐಆರ್ನಲ್ಲಿ ದಾಖಲಿಸಲಾಗಿದೆ. ನಿಶ್ಚಿತಾರ್ಥ ಆದ ಹುಡುಗನಿಗೆ ಸಿಡಿಆರ್ ಫೋಟೋ ಕಳಿಸಿ ನಿಶ್ಚಿತಾರ್ಥ ಮುರಿದುಬೀಳುವಂತೆ ಮಾಡಲಾಗಿದೆ ಎಂದು ಮಹೇಶ್ ವಿರುದ್ಧ ಮಹಿಳಾ ಕಾನ್ಸ್ಟೇಬಲ್ ಎಫ್ಐಆರ್ ದಾಖಲಿಸಿದ್ದಾರೆ.