ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ ಐವರ ಸಾವು...!
ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು (LPG Cylinders Blast) ಒಂದೇ ಕುಟುಂಬದ ಐವರು ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡಿರುವ ಭೀಕರ ಘಟನೆ ನಡೆದಿದೆ. ಕಾಕೋರಿಯ ಹತಾ ಹಜರತ್ ಸಾಹೇಬ್ ಕಾಕೋರಿಯಲ್ಲಿ ಮಂಗಳವಾರ (ಮಾರ್ಚ್ 5) ರಾತ್ರಿ ಈ ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಶಾರ್ಟ್ ಸರ್ಕ್ಯೂಟ್‌ನಿಂದ ಮುಶೀರ್ ಅಲಿ ಎಂಬವರ ಮನೆಯಲ್ಲಿನ ಎರಡು ಸಿಲಿಂಡರ್‌ಗಳು ಸ್ಫೋಟಗೊಂಡು ಸಂಭವಿಸಿದ ಈ ದುರಂತದಲ್ಲಿ ಒಟ್ಟು ಒಂಬತ್ತು ಜನರು ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅದರೆ ಚಿಕಿತ್ಸೆ ಫಲಕಾರಿಯಾಗದೆ ಅಲ್ಲಿ ಐವರು ಮೃತಪಟ್ಟಿದ್ದು, ಈ ಪೈಕಿ ಮೂವರು ಮಕ್ಕಳೂ ಸೇರಿದ್ದಾರೆ. ಉಳಿದ ನಾಲ್ವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.
ಮೃತರನ್ನು ಮುಶೀರ್ (50), ಹಸನ್ ಬಾನೊ (45), ರೈನಾ (7), ಹುಮಾ (4), ಹಿನಾ (2) ಎಂದು ಗುರುತಿಸಲಾಗಿದೆ. ಸಿಲಿಂಡರ್ ಸ್ಫೋಟದಿಂದ ಇಡೀ ಮನೆಗೆ ಹಾನಿಯಾಗಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕದಳದ ಸಿಬ್ಬಂದಿ ಹರ ಸಾಹಸಪಟ್ಟರು. ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಂಕಿ ಕಾರಣ ಸ್ಫೋಟಕ ವಸ್ತು? ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಕೂಡಲೇ ಬೆಂಕಿಯು ಮನೆಯಾದ್ಯಂತ ಹರಡಿದ್ದರಿಂದ ಒಳಗಿದ್ದವರಿಗೆ ತಕ್ಷಣ ಹೊರ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಹೆಚ್ಚಿನ ದುರಂತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮುಶೀರ್ ಅಲಿ ಪಟಾಕಿ ಮಾರಾಟಗಾರರಾಗಿದ್ದು, ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಸ್ಫೋಟಕ ವಸ್ತುಗಳಿಂದ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ ಎಂಬ ಊಹೆಯೂ ಇದೆ. ವಿಧಿವಿಜ್ಞಾನ ತಜ್ಞರನ್ನು ಸ್ಥಳಕ್ಕೆ ಕರೆಸಲಾಗಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.