ಪಟಾಕಿ ಗೋದಾಮಿಗೆ ಬೆಂಕಿ ; 4 ಮಂದಿ ಸಜೀವ ದಹನ!
ಹಾವೇರಿ(ಆ.30): ಸಮೀಪದ ಆಲದಕಟ್ಟಿಗ್ರಾಮದ ಪಟಾಕಿ ಗೋದಾಮಿನಲ್ಲಿ ಮಂಗಳವಾರ ಭಾರಿ ಅಗ್ನಿ ದುರಂತ ಸಂಭವಿಸಿದ್ದು, ಸುಟ್ಟು ಕರಕಲಾದ ಸ್ಥಿತಿಯಲ್ಲಿ ನಾಲ್ವರ ಮೃತದೇಹ ಪತ್ತೆಯಾಗಿವೆ. ಇನ್ನೂ ಇಬ್ಬರು ಬೆಂಕಿ ಕೆನ್ನಾಲಿಗೆಗೆ ಸಿಲುಕಿರುವ ಶಂಕೆಯಿದ್ದು, ಕಾರ್ಯಾಚರಣೆ ಮುಂದುವರಿಸಲಾಗಿದೆ.
ದ್ಯಾಮಪ್ಪ ಓಲೇಕಾರ (45), ರಮೇಶ್ ಬಾರ್ಕಿ (23) ಹಾಗೂ ಶಿವಲಿಂಗ ಅಕ್ಕಿ (25) ಎಂಬವರ ಮೃತದೇಹ ಪತ್ತೆಯಾಗಿವೆ. ಮೂವರೂ ತಾಲೂಕಿನ ಕಾಟೇನಹಳ್ಳಿ ಗ್ರಾಮದವ ರಾಗಿದ್ದು, ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಗುರುತು ಸಿಗದ ರೀತಿಯಲ್ಲಿ ಸುಟ್ಟು ಕರಕಲಾಗಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿದ್ದ ವಾಸಿಂ ಶಫಿ ಅಹ್ಮದ್ ಹಾಗೂ ಶೇರು ಕಟ್ಟೀಮನಿ ಎಂಬವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದುರ್ಘಟನೆ ನಡೆದಿರುವ ಗೋದಾಮಿನಲ್ಲಿ ಇನ್ನೂ ಇಬ್ಬರು ಸಿಲುಕಿರುವ ಶಂಕೆಯಿದ್ದು, ಅಗ್ನಿಶಾಮಕದಳ, ಪೊಲೀಸರಿಂದ ಕಾರ್ಯಾಚರಣೆ ಮುಂದುವರಿದಿದೆ.
ಏನಾಯ್ತು?
ಆಲದಕಟ್ಟಿಯಲ್ಲಿ ಇರುವ ವೀರೇಶ ಸಾತೇನಹಳ್ಳಿ ಎಂಬವರಿಗೆ ಸೇರಿದ ಭೂಮಿಕಾ ಪಟಾಕಿ ಗೋದಾಮಿನಲ್ಲಿ ಮುಂಬರುವ ಗಣೇಶ ಚತುರ್ಥಿ ನಿಮಿತ್ತ ಕೋಟ್ಯಂತರ ರು. ಮೌಲ್ಯದ ಪಟಾಕಿ ಸೇರಿದಂತೆ ಇತರ ಸಿಡಿಮದ್ದುಗಳನ್ನು ಸಂಗ್ರಹಿಸಿಡಲಾಗಿತ್ತು. ಮಂಗಳವಾರ ಗೋದಾಮಿನ ಶಟರ್ಸ್ ಹಾಗೂ ಗೇಟ್ ವೆಲ್ಡಿಂಗ್ ಮಾಡುತ್ತಿದ್ದ ವೇಳೆ ಸಂಗ್ರಹಿಸಿಡಲಾಗಿದ್ದ ಸಿಡಿಮದ್ದಿಗೆ ವೆಲ್ಡಿಂಗ್ ಕಿಡಿ ತಾಕಿದೆ. ಬೆಳಗ್ಗೆ 11 ಗಂಟೆಗೆ ದುರ್ಘಟನೆ ಸಂಭವಿಸಿದ್ದು, ಘಟನೆ ಬೆನ್ನಲ್ಲೇ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಷ್ಟರಲ್ಲಾಗಲೇ ಸಿಡಿಮದ್ದು ಸಿಡಿದು ಬೆಂಕಿಯ ಕೆನ್ನಾಲಗೆ ಸುತ್ತಲೂ ವ್ಯಾಪಿಸಿದೆ. ಸಂಜೆ 5 ಗಂಟೆ ವೇಳೆಗೆ ಬೆಂಕಿ ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ. ಆಗ ಕಾರ್ಯಾಚರಣೆ ನಡೆಸಿ ಸುಟ್ಟು ಕರಕಲಾದ ಸ್ಥಿತಿಯಲ್ಲಿದ್ದ ನಾಲ್ವರ ಮೃತದೇಹ ಹೊರತೆಗೆಯಲಾಗಿದೆ. ಆದರೆ ಇನ್ನೂ ಒಬ್ಬ ಅಥವಾ ಇಬ್ಬರು ಗೋದಾಮಿನ ಒಳಗೆ ಸಿಲುಕಿ ಮೃತಪಟ್ಟಿರುವ ಶಂಕೆ ವ್ಯಕ್ತ ವಾಗಿದೆ.
ತಲಾ 5 ಲಕ್ಷ ರು.ಪರಿಹಾರ ಘೋಷಣೆ
ಆಲದಕಟ್ಟಿಯ ಸಮೀಪದ ಪಟಾಕಿ ಗೋದಾಮಿನ ಬೆಂಕಿ ಅವಘಡದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಹಿತಿ ಪಡೆದಿದ್ದು, ಕೂಡಲೇ ಸ್ಥಳಕ್ಕೆ ಹೋಗುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರಿಗೆ ಸೂಚಿಸಿದ್ದಾರೆ. ಅಲ್ಲದೆ ಇದೇ ವೇಳೆ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರು. ಪರಿಹಾರ ಘೋಷಿಸಿದ್ದಾರೆ.
ರುದ್ರಪ್ಪ ಭೇಟಿ, ಪರಿಶೀಲನೆ:
ಘಟನೆಯ ಬೆನ್ನಲ್ಲೆ ಕರ್ನಾಟಕ ವಿಧಾನಸಭೆ ಉಪಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಸ್ಥಳಕ್ಕೆ ಭೇಟಿ ನೀಡಿ, ಅವಘಡದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಮಾತನಾಡಿ, ಜಿಲ್ಲಾಧಿಕಾರಿ, ಜಿಲ್ಲಾ ವರಿಷ್ಠಾಧಿಕಾರಿ ಸ್ಥಳದಲ್ಲಿದ್ದು ಪರಿಸ್ಥಿತಿ ನಿಭಾಯಿಸಿದ್ದಾರೆ.