ಪಟಾಕಿ ಅಂಗಡಿಯಲ್ಲಿ ಅಗ್ನಿ ದುರಂತ ; 9 ಮಂದಿ ಸಜೀವ ದಹನ!

ಅರಿಯಲೂರು: ಬೆಂಗಳೂರಿನ ಅತ್ತಿಬೆಲೆಯಲ್ಲಿ ನಡೆದ ಪಟಾಕಿ ಕಾರ್ಖಾನೆಗೆ ಬೆಂಕಿ ಬಿದ್ದು 14 ಮಂದಿ ಕಾರ್ಮಿಕರು ಸಾವನ್ನಪ್ಪಿದ ಭಯಾನಕ ಘಟನೆ ಮನಸ್ಸಿಂದ ಮಾಸುವ ಮುನ್ನವೇ ಮತ್ತೊಂದು ಇಂತಹದೇ ದುರ್ಘಟನೆ ನಡೆದಿದೆ.
ತಮಿಳುನಾಡಿನ ಅರಿಯಲೂರು ಜಿಲ್ಲೆಯ ಪಟಾಕಿ ಅಂಗಡಿಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಬರೋಬ್ಬರಿ 9 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ವೀರಕಲೂರು ಗ್ರಾಮದಲ್ಲಿ ರಾಜೇಂದ್ರನ್ ಎಂಬುವರಿಗೆ ಸೇರಿದ ಯಾಜ್ ಕ್ರ್ಯಾಕರ್ಸ್ ಎಂಬ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ರಾಜೇಂದ್ರನ್ ಅವರು ಯಾಜ್ ಕ್ರ್ಯಾಕರ್ಸ್ ಎಂಬ ಅಂಗಡಿಯಲ್ಲಿ ಪಟಾಕಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ದೀಪಾವಳಿ ಸಮೀಪಿಸುತ್ತಿದ್ದಂತೆ ಸ್ಥಳೀಯ ಜನರೊಂದಿಗೆ 35ಕ್ಕೂ ಹೆಚ್ಚು ಮಂದಿ ಹಾಗೂ ಶಿವಕಾಶಿಯ ಹತ್ತಕ್ಕೂ ಹೆಚ್ಚು ಮಂದಿ ಪಟಾಕಿ ತಯಾರಿಕೆಯಲ್ಲಿ ತೊಡಗಿದ್ದಾರೆ. ಇಂದು ಬೆಳಗ್ಗೆ 9:30ರ ಸುಮಾರಿಗೆ ಪಟಾಕಿ ತಯಾರಿಸುತ್ತಿದ್ದಾಗ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.
ಏಕಾಏಕಿ ಬೆಂಕಿ ಕಾಣಿಸಿಕೊಂಡ ಕ್ಷಣ ಮಾತ್ರದಲ್ಲೇ ಪಟಾಕಿಗಳಿಗೆ ಬೆಂಕಿ ವ್ಯಾಪಿಸಿ ಭಾರಿ ಶಬ್ಧದೊಂದಿಗೆ ಸ್ಫೋಟಗೊಂಡಿದೆ. ಈ ವೇಳೆ ಪಟಾಕಿ ತಯಾರಿಕೆಯಲ್ಲಿ ನಿರತರಾಗಿದ್ದ 7 ಜನರು ಬೆಂಕಿಗೆ ಆಹುತಿಯಾಗಿದ್ದಾರೆ. ಈ ದುರಂತದ ಸುದ್ದಿ ತಿಳಿಯುತ್ತಿದ್ದಂತೆ ಅರಿಯಲೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಮೂರು ಅಗ್ನಿಶಾಮಕ ದಳಗಳು ಬೆಂಕಿ ನಂದಿಸಲು ಸ್ಥಳಕ್ಕೆ ಧಾವಿಸಿವೆ.
ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಬೆಂಕಿಯನ್ನು ನಂದಿಸುವಲ್ಲಿ ಅಗ್ನಿ ಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಈ ದುರ್ಘಟನೆಯಲ್ಲಿ ಓರ್ವ ಮಹಿಳೆ ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ 6ಕ್ಕೂ ಹೆಚ್ಚು ಜನರನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಾಣಹಾನಿ ಹೆಚ್ಚಾಗುವ ಸಾಧ್ಯತೆಯಿದ್ದು, ಈ ಪಟಾಕಿ ಅಂಗಡಿಯಲ್ಲಿ ಯಾಕೆ ಅಗ್ನಿ ಅವಘಡ ಸಂಭವಿಸಿತು ಎಂಬುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಳೆದ ವಾರ ಬೆಂಗಳೂರಿನ ಅತ್ತಿಬೆಲೆಯ ಪಟಾಕಿ ಗೋದಾಮಿನಲ್ಲಿ ನಡೆದ ಅಗ್ನಿ ಅವಘಡ ಪ್ರಕರಣದಲ್ಲಿ ಒಟ್ಟು 14 ಮಂದಿ ಸಾವನ್ನಪ್ಪಿದ್ದು, 7 ಮಂದಿ ಗಂಭೀರ ಗಾಯಗೊಂಡಿದ್ದರು. ಘಟನೆ ನಡೆದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದರು.