ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ಗೆ ವೇಗಿ ಆವೇಶ್ ಖಾನ್ ಭಾರತ ತಂಡಕ್ಕೆ ಎಂಟ್ರಿ.!
Avesh Khan: ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆಯಲಿರುವ ಕೇಪ್ ಟೌನ್ ಟೆಸ್ಟ್ ಪಂದ್ಯಕ್ಕೆ ಆವೇಶ್ ಖಾನ್ ಭಾರತ ತಂಡ ಸೇರಿಕೊಳ್ಳಲಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯಕ್ಕೆ ವೇಗದ ಬೌಲರ್ ಅವೇಶ್ ಖಾನ್ (Avesh Khan) ಅವರನ್ನು ಭಾರತ ತಂಡಕ್ಕೆ ಕರೆಸಿಕೊಳ್ಳಲಾಗಿದೆ ಎಂದು ಬಿಸಿಸಿಐ ಖಚಿತಪಡಿಸಿದೆ. ಗಾಯದಿಂದಾಗಿ ಸಂಪೂರ್ಣ ಟೆಸ್ಟ್ ಸರಣಿಯಿಂದ ಹೊರಗುಳಿದಿರುವಜಾ ಮೊಹಮ್ಮದ್ ಶಮಿ ಬದಲಿಗೆ ಅವೇಶ್ ಅವರನ್ನು ತಂಡಕ್ಕೆ ಸೇರಿಸಲಾಗಿದೆ. ಈ ಕುರಿತು ಡಿಸೆಂಬರ್ 29ರ ಶುಕ್ರವಾರ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ.
ಹರಿಣಗಳ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ನೀರಸ ಪ್ರದರ್ಶನ ನೀಡಿತ್ತು. ಪರಿಣಾಮ ಮೂರೇ ದಿನಕ್ಕೆ ಸೆಂಚುರಿಯನ್‌ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಅಂತ್ಯವಾಯ್ತು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಟೀಮ್ ಇಂಡಿಯಾ ಪ್ರದರ್ಶನ ಕಳಪೆಯಾಗಿತ್ತು. ಪರಿಣಾಮ ಇನ್ನಿಂಗ್ಸ್ ಮತ್ತು 32 ರನ್ ಸೋಲನ್ನು ತಂಡ ಎದುರಿಸಿತು.
ಬೌಲಿಂಗ್‌ನಲ್ಲಿಯೂ ಹರಿಣಗಳನ್ನು ಕಟ್ಟಿಹಾಕಲು ಭಾರತೀಯರು ಯಶಸ್ವಿಯಾಗಲಿಲ್ಲ. ಜಸ್ಪ್ರೀತ್ ಬುಮ್ರಾ ನಾಲ್ಕು ವಿಕೆಟ್ ಕಬಳಿಸಿದ್ದನ್ನು ಹೊರತುಪಡಿಸಿದರೆ, ವೇಗಿಗಳಿಗೆ ನೆರವಾಗುವ ಸೆಂಚುರಿಯನ್ ಪಿಚ್‌ನಲ್ಲಿ ಭಾರತದ ಬೇರೆ ಯಾವುದೇ ಬೌಲರ್ ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳಿಗೆ ಬೆದರಿಕೆಯೊಡ್ಡಲಿಲ್ಲ. ಪದಾರ್ಪಣೆ ಪಂದ್ಯದಲ್ಲಿ ಪ್ರಸಿದ್ಧ್ ಕೃಷ್ಣ 20 ಓವರ್‌ಗಳಲ್ಲಿ 93 ರನ್‌ಗಳನ್ನು ನೀಡಿದರು. ಶಾರ್ದೂಲ್ ಠಾಕೂರ್ ಮತ್ತಷ್ಟು ದುಬಾರಿಯಾದರು. ಕೇವಲ 19 ಓವರ್‌ಗಳಲ್ಲಿ 101 ರನ್ ಬಿಟ್ಟುಕೊಟ್ಟು 1 ವಿಕೆಟ್ ಮಾತ್ರ ಪಡೆದರು.
ಸದ್ಯ ಭಾರತದ ಮುಂದಿರುವ ಆಯ್ಕೆ ಒಂದೇ. ಸರಣಿಯ ಎರಡನೇ ಪಂದ್ಯದಲ್ಲಿ ಗೆದ್ದು ಸರಣಿ ಸಮಬಲಗೊಳಿಸುವ ಅವಕಾಶ ಮಾತ್ರ ಇದೆ. ಹೀಗಾಗಿ ಹೆಚ್ಚುವರಿ ವೇಗಿಗಳನ್ನು ಬತ್ತಳಿಕೆಯಲ್ಲಿ ಇಟ್ಟುಕೊಳ್ಳುವುದು ತಂಡದ ತಂತ್ರ. ಹೀಗಾಗಿ ಆವೇಶ್ ಖಾನ್ ಅವರನ್ನು ದಕ್ಷಿಣ ಆಫ್ರಿಕಾಗೆ ಕರೆಸಿಕೊಳ್ಳಲಾಗಿದೆ. ಭಾರತದ ಪರ 27 ವರ್ಷದ ಆಟಗಾರ ಇನ್ನೂ ಟೆಸ್ಟ್ ಪಂದ್ಯ ಆಡಿಲ್ಲ. ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಭಾಗವಾಗಿದ್ದರು. ಅಲ್ಲಿ ಮೂರು ಪಂದ್ಯಗಳಲ್ಲಿ ಆರು ವಿಕೆಟ್‌ಗಳನ್ನು ಪಡೆದು ಮಿಂಚಿದ್ದರು.
ಬಲಗೈ ವೇಗಿ ಇದುವರೆಗೆ ಟೀಮ್ ಇಂಡಿಯಾ ಪರ 8 ಏಕದಿನ ಮತ್ತು 19 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶ ಪರ ಅಮೋಘ ಪ್ರದರ್ಶನ ನೀಡಿದ್ದಾರೆ. 38 ಪಂದ್ಯಗಳಲ್ಲಿ 22.65 ಸರಾಸರಿಯಲ್ಲಿ 149 ವಿಕೆಟ್‌ಗಳನ್ನು ಪಡೆದಿದ್ದಾರೆ.
ಎಲ್ಲಾ ದೇಶಗಳಲ್ಲೂ ಟೆಸ್ಟ್ ಸರಣಿ ಗೆದ್ದಿರುವ ಭಾರತವು, ದಕ್ಷಿಣ ಆಫ್ರಿಕಾ ನೆಲದಲ್ಲಿ ಇನ್ನೂ ಸುದೀರ್ಘ ಸ್ವರೂಪದಲ್ಲಿ ಸರಣಿ ಗೆದ್ದಿಲ್ಲ. ವಿಶ್ವ ಕ್ರಿಕೆಟ್‌ನ ನಂಬರ್ ವನ್ ತಂಡಕ್ಕೆ ದಕ್ಷಿಣ ಆಫ್ರಿಕಾ ಸರಣಿ ದೂರದ ಬೆಟ್ಟವಾಗಿಯೇ ಉಳಿದಿದೆ.
ಮೊದಲ ಟೆಸ್ಟ್‌ನಲ್ಲಿ 163 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತವು, ಬರ್ಗರ್ ಮತ್ತು ರಬಾಡಾ ಆಕ್ರಮಣಕ್ಕೆ ಬಲಿಯಾಯ್ತು. ಟೀಮ್ ಇಂಡಿಯಾ ಪರ ಕೆಲಕಾಲ ಪ್ರತಿರೋಧ ಒಡ್ಡಿದ್ದು ವಿರಾಟ್ ಕೊಹ್ಲಿ ಮಾತ್ರ. ಅಂತಿಮವಾಗಿ ಭಾರತವು ಕೇವಲ 131 ರನ್ ಗಳಿಗೆ ಆಲೌಟ್ ಆಯ್ತು. ಆ ಮೂಲಕ ಆತಿಥೇಯ ದಕ್ಷಿಣ ಆಫ್ರಿಕಾ ಭರ್ಜರಿಯಾಗಿ ಗೆಲ್ಲುವುದರೊಂದಿಗೆ ಟೆಸ್ಟ್ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.