ರೈತರಲ್ಲಿ ಆತಂಕ ಮೂಡಿಸಿದ ಕಾಳುಮೆಣಸು ದರ ಕುಸಿತ...!
ಕಾಳು ಮೆಣಸನ್ನು ಕರಾವಳಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅತಿ ಹೆಚ್ಚಾಗಿ ಬೆಳೆಸುವಂತಹ ಕೃಷಿ. ಹಲವು ಬಾರಿ ಅಡಿಕೆಗೆ ದರ ಕುಸಿತ ಕಂಡಂತೆ ಕಾಳು ಮೆಣಸಿನ ದರ ಹೆಚ್ಚಾಗುತ್ತಿತ್ತು. ಆದರೆ ಈ ಬಾರಿ ಈ ಎರಡು ಬೆಳೆಯ ದರವು ಕೊಂಚ ಕುಸಿತ ಕಂಡಿದೆ.
ಒಂದು ವಾರದ ಹಿಂದೆ ಪ್ರತಿ ಕ್ವಿಂಟಲ್‌ಗೆ 60 ಸಾವಿರ ಅಸುಪಾಸಿನಲ್ಲಿದ್ದ ದರವು ಈಗ ₹54 ಸಾವಿರಕ್ಕೆ ಇಳಿಕೆಯಾಗಿದೆ. ಎರಡು ವರ್ಷಗಳಿಂದ ಸ್ಥಿರವಾಗಿದ್ದ ದರ ಹಂಗಾಮಿನ ಆರಂಭದಲ್ಲೇ ಇಳಿಮುಖವಾಗಿದೆ. ಇದರಿಂದ ಬೆಳೆಗಾರರಿಗೆ ದಿಕ್ಕು ತೋಚದಂತಾಗಿದೆ.
ಶಿರಸಿ ಎಪಿಎಂಸಿ ವ್ಯಾಪ್ತಿಯಲ್ಲಿ ವಾರದ ಹಿಂದೆ ಪ್ರತಿ ಕ್ವಿಂಟಲ್ ಕಾಳುಮೆಣಸಿಗೆ 61 ಸಾವಿರ ಗರಿಷ್ಠ ದರ ಇತ್ತು. ದಿಢೀರ್ ಕುಸಿತದಿಂದ ಈ ವರ್ಷ ಹೊಸ ಸರಕನ್ನು ಮಾರುಕಟ್ಟೆಗೆ ಪೂರೈಸಲು ಬೆಳೆಗಾರರು ಹಿಂದೇಟು ಹಾಕುತ್ತಿದ್ದಾರೆ.
ವಿಯೆಟ್ನಾಂನಲ್ಲಿ ಕಾಳುಮೆಣಸಿನ ದರ ಪ್ರತಿ ಕ್ವಿಂಟಲ್‌ಗೆ 238 ಸಾವಿರದಿಂದ 42 ಸಾವಿರ ಇದೆ. ಅಲ್ಲಿಂದ ಅಪಾರ ಪ್ರಮಾಣದಲ್ಲಿ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಹಾಗಾಗಿ, ಉತ್ತರ ಭಾರತದ ರಾಜ್ಯಗಳ ಬಹುತೇಕ ಮಾರುಕಟ್ಟೆಗಳಲ್ಲಿ ಕಡಿಮೆ ಬೆಲೆಗೆ ಲಭಿಸುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು.
‘ಸ್ಥಳೀಯ ಮಾರುಕಟ್ಟೆಯಲ್ಲಿ ವಿದೇಶಿ ಸರಕನ್ನು ಅಗ್ಗದ ದರಕ್ಕೆ ಮಾರುತ್ತಿರುವುದೇ ಧಾರಣೆ ಕುಸಿತಕ್ಕೆ ಕಾರಣವಾಗಿದೆ. ಪ್ರಸಕ್ತ ವರ್ಷ ಮಳೆ ಕೊರತೆಯಿಂದ ಸ್ಥಳೀಯವಾಗಿ ಬೆಳೆದಿರುವ ಕಾಳಿನ ಗಾತ್ರವೂ ಕಡಿಮೆ ಆಗಿದೆ. ಇದು ಕೂಡ ಮಾರುಕಟ್ಟೆಯಲ್ಲಿ ದರ ಕುಸಿಯಲು ಕಾರಣವಾಗಿದೆ’ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ.