ಖ್ಯಾತ ನಟ ಯೇಸು ಪ್ರಕಾಶ್ ನಿಧನ..!

ಸಿನಿಮಾ ರಂಗಕ್ಕೆ ಇಂದು ಕರಾಳ ದಿನ. ತಮಿಳಿನ ಖ್ಯಾತ ನಟ ಹಾಗೂ ಹಿರಿಯ ನಿರ್ದೇಶಕ ದಿವಂಗತ ಸಿದ್ದಲಿಂಗಯ್ಯ ಅವರ ಸಂಬಂಧಿ ನಟ ಡೇನಿಯಲ್ ಬಾಲಾಜಿ ಅವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದು, ಇತ್ತ ಕನ್ನಡ ಚಿತ್ರರಂಗದ ನಟ, ರಂಗಭೂಮಿ ಕಲಾವಿದ ಹಾಗೂ ಸಾಮಾಜಿಕ ಹೋರಾಟಗಾರರಾಗಿದ್ದ ಯೇಸು ಪ್ರಕಾಶ್ ಕಲ್ಲುಕೊಪ್ಪ (58) (ಪ್ರಕಾಶ್ ಹೆಗ್ಗೋಡು) ಅವರು ಶನಿವಾರ ಸಂಜೆ ನಿಧನರಾಗಿದ್ದಾರೆ.
ಪ್ರಕಾಶ್ ಅವರು ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಯೇಸು ಪ್ರಕಾಶ್ ಪತ್ನಿ ಶೈಲಜಾ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
ಖ್ಯಾತ ನಿರ್ದೇಶಕ ಎಸ್.ನಾರಾಯಣ್ ಮಗ ಪಂಕಜ್ ಅಭಿನಯದ ಮೊದಲ ಸಿನಿಮಾ ‘ವೀರು’ ಚಿತ್ರದಿಂದ ಸ್ಯಾಂಡಲ್ವುಡ್ಗೆ ಯೇಸು ಪ್ರಕಾಶ್ ಪದಾರ್ಪಣೆ ಮಾಡಿದ್ದರು. ಆ ನಂತರ ಪುನೀತ್ ರಾಜ್ಕುಮಾರ್ ಅಭಿನಯದ ‘ಯಾರೇ ಕೂಗಾಡಲಿ’, ದರ್ಶನ್ ನಟನೆಯ ‘ಸಾರಥಿ’ ಸಿನಿಮಾದಲ್ಲಿ ಕಾಡುಜನರ ನಾಯಕ, ‘ಯೋಧ’ ಸಿನಿಮಾದಲ್ಲಿ ರೌಡಿ ಜಯರಾಜ್, ‘ರಾಜಾಹುಲಿ’ ಸಿನಿಮಾದಲ್ಲಿ ಮೇಘನಾ ರಾಜ್ ತಂದೆಯ ಪಾತ್ರ ಸೇರಿದಂತೆ ಕನ್ನಡದ 35 ಕ್ಕೂ ಹೆಚ್ಚು ಚಿತ್ರಗಳಲ್ಲಿ ಏಸು ಪ್ರಕಾಶ್ ಅಭಿನಯಿಸಿದ್ದಾರೆ.
ಸದ್ಯ ಯೇಸು ಪ್ರಕಾಶ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಶಿವಮೊಗ್ಗದ ಸಾಗರದಲ್ಲಿರುವ ಕಲ್ಲುಕೊಪ್ಪದ (ಪುರಪ್ಪೇಮನೆ) ಅವರ ಸ್ವಗೃಹದಲ್ಲಿ ಸಿದ್ಧತೆ ನಡೆಸಲಾಗಿದೆ. ರಂಗ ನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಯೇಸು ಪ್ರಕಾಶ್ ನಿಧನಕ್ಕೆ ಕನ್ನಡ ಚಿತ್ರರಂಗದ ತಾರೆಯರು ಕಂಬನಿ ಮಿಡಿದಿದ್ದಾರೆ.