ನೆಲಕ್ಕೆ ಕುಸಿದ ಲಿಫ್ಟ್ – 7 ಜನರ ದುರ್ಮರಣ
ಮುಂಬೈ: 40ನೇ ಮಹಡಿಯಿಂದ ಒಮ್ಮೆಲೆ ನೆಲ ಮಾಳಿಗೆಗೆ ಲಿಫ್ಟ್ (Lift) ಕುಸಿದ ಪರಿಣಾಮ 7 ಜನ ಮೃತಪಟ್ಟ ಘಟನೆ ಮಹಾರಾಷ್ಟ್ರದ (Maharashtra) ಥಾಣೆಯಲ್ಲಿ (Thane) ನಡೆದಿದೆ.
ಮೃತರನ್ನು ಮಹೇಂದ್ರ ಚೌಪಾಲ್ (32), ರೂಪೇಶ್ ಕುಮಾರ್ ದಾಸ್ (21), ಹರೂನ್ ಶೇಖ್ (47), ಮಿಥ್ಲೇಶ್ (35), ಕರಿದಾಸ್ (38) ಮತ್ತು ಸುನೀಲ್ ಕುಮಾರ್ ದಾಸ್ (21) ಎಂದು ಗುರುತಿಸಲಾಗಿದೆ. ಮತ್ತೋರ್ವನ ಗುರುತು ಪತ್ತೆಯಾಗಿಲ್ಲ. ಇವರೆಲ್ಲ ಕಟ್ಟಡ ಕಾರ್ಮಿಕರಾಗಿದ್ದು ಲಿಫ್ಟ್ನಲ್ಲಿ ಇಳಿಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಲಿಫ್ಟ್ನಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ, ಲಿಫ್ಟ್ ಅಪಘಾತ ಬಹು ದೊಡ್ಡ ದುರಂತವಾಗಿದೆ. ಈ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನನ್ನ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ ಲಿಫ್ಟ್ನ ಕೇಬಲ್ ತುಂಡಾಗಿ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು (Police) ತಿಳಿಸಿದ್ದಾರೆ.
ಬ್ಯಾಂಕುಗಳ ನಡುವೆ ಶೀಘ್ರದಲ್ಲೇ ಡಿಜಿಟಲ್ ಕರೆನ್ಸಿ ವಹಿವಾಟು ಶುರು
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಶೀಘ್ರದಲ್ಲೇ ಬ್ಯಾಂಕುಗಳ ನಡುವಿನ ಕೊಡುಕೊಳ್ಳುವಿಕೆ ಅಥವಾ ಕಾಲ್ ಮನಿ ಮಾರ್ಕೆಟ್ನಲ್ಲಿ ಡಿಜಿಟಲ್ ಕರೆನ್ಸಿ ಬಳಕೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಿದೆ. ಜಿ20 ಸಮಾವೇಶದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಆರ್ಬಿಐ ಕಾರ್ಯಕಾರಿ ನಿರ್ದೇಶಕ ಅಜಯ್ ಕುಮಾರ್ ಚೌಧರಿ ಈ ವಿಷಯ ತಿಳಿಸಿದ್ದಾರೆ.
ಡಿಜಿಟಲ್ ರುಪೀ-ಹೋಲ್ಸೇಲ್ (ಎ-ಡಬ್ಲ್ಯು) (Digital Rupee-Wholesale)ಎಂದು ಕರೆಸಿಕೊಳ್ಳುವ ಈ ಕರೆನ್ಸಿಯನ್ನು ಸರ್ಕಾರಿ ಷೇರುಗಳ ವಹಿವಾಟಿನಲ್ಲಿ ಬಳಕೆ ಮಾಡುವುದನ್ನು ಸರ್ಕಾರ ಕಳೆದ ವರ್ಷವೇ ಆರಂಭಿಸಿತ್ತು. ಈ ತಿಂಗಳು ಅಥವಾ ಮುಂದಿನ ತಿಂಗಳು ಕಾಲ್ ಮಾರ್ಕೆಟ್ನಲ್ಲೂ ಇದನ್ನು ಬಳಸುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ಬ್ಯಾಂಕುಗಳ ನಡುವೆ ಡಿಜಿಟಲ್ ಕರೆನ್ಸಿ ಬಳಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India), ಬ್ಯಾಂಕ್ ಆಫ್ ಬರೋಡಾ (Bank of Baroda), ಯೂನಿಯನ್ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್ (HDFC Bank), ಐಸಿಐಸಿಐ ಬ್ಯಾಂಕ್, ಯಸ್ ಬ್ಯಾಂಕ್, ಐಡಿಎಫ್ಸಿ ಫಸ್ಟ್ ಬ್ಯಾಂಕ್(IDFC First Bank) ಹಾಗೂ ಎಚ್ಎಸ್ಬಿಸಿ ಬ್ಯಾಂಕುಗಳನ್ನು ಆರ್ಬಿಐ ಆಯ್ಕೆ ಮಾಡಿಕೊಂಡಿದೆ. ಈ ಬ್ಯಾಂಕುಗಳ ನಡುವಿನ ಆಂತರಿಕ ವ್ಯವಹಾರದಲ್ಲಿ ಇನ್ನುಮುಂದೆ ಡಿಜಿಟಲ್ ಕರೆನ್ಸಿಯನ್ನು ಬಳಕೆ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ.