ಬಿಯರ್ ಬೆಲೆ ಮತ್ತೆ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ ಅಬಕಾರಿ ಇಲಾಖೆ?
ಬೆಂಗಳೂರು: ಮದ್ಯ ಪ್ರಿಯರ ಮೇಲೆ ರಾಜ್ಯ ಸರ್ಕಾರದ ಗ್ಯಾರಂಟಿ ಹೊರೆ ಮತ್ತೆ ಬೀಳುತ್ತಿದೆ. ಪ್ರತಿ ಬಾರಿ ಬಜೆಟ್‌ನಲ್ಲಿಯೂ ಮದ್ಯ ಪ್ರಿಯರಿಗೆ ಬೆಲೆ ಏರಿಕೆ (Alcohol price hike) ಬಿಸಿಯನ್ನು ತಾಗಲುತ್ತಲೇ ಇದೆ. ಈ ಬಾರಿ ಮತ್ತೆ ಬಿಯರ್ ಮೇಲಿನ ದರವನ್ನು ಹೆಚ್ಚಳ (Beer price hike) ಮಾಡಲು ಅಬಕಾರಿ ಇಲಾಖೆ ಮುಂದಾಗಿದೆ. 8ರಿಂದ 10 ರೂಪಾಯಿ ಹೆಚ್ಚಳ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಿದೆ.
ಬಿಯರ್ ಮೇಲಿನ ಅಬಕಾರಿ ತೆರಿಗೆ ಹೆಚ್ಚಳದ ಮೂಲಕ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಇಲಾಖೆ ಮುಂದಾಗಿದೆ. 650 ಎಂ.ಎಲ್. ಬಾಟಲಿ ಬಿಯರ್‌ಗೆ 8ರಿಂದ 10 ರೂಪಾಯಿವರೆಗೆ ಏರಿಕೆ ಮಾಡಬೇಕು ಎಂದು ಬೇಡಿಕೆಯನ್ನು ಇಟ್ಟಿದೆ.
ಕರ್ನಾಟಕ ಅಬಕಾರಿ (ಸುಂಕಗಳು ಮತ್ತು ಶುಲ್ಕಗಳು) ನಿಯಮಕ್ಕೆ ತಿದ್ದುಪಡಿ 2024ರ ಕರಡನ್ನು ರಾಜ್ಯಪತ್ರದಲ್ಲಿ ಹೊರಡಿಸಲಾಗಿದೆ. ಬಿಯರ್ ಮೇಲಿನ ಅಬಕಾರಿ ತೆರಿಗೆ ಮೂಲ ದರದ ಶೇಕಡಾ 185 ರಿಂದ ಶೇಕಡಾ 195ಕ್ಕೆ ಏರಿಕೆ ಮಾಡುವ ಪ್ರಸ್ತಾಪವನ್ನು ಮಾಡಲಾಗಿದೆ. ಕರಡು ಪ್ರತಿಗೆ ಆಕ್ಷೇಪಣೆ ಸಲ್ಲಿಸಲು ಏಳು ದಿನಗಳ ಕಾಲಾವಕಾಶವನ್ನು ನೀಡಲಾಗಿದೆ. ಹೀಗಾಗಿ ಆಕ್ಷೇಪಣೆಗಳ ಆಧಾರದ ಮೇಲೆ ಯಾವ ಕ್ರಮವನ್ನು ಕೈಗೊಳ್ಳಲಾಗುವುದು? ತೀವ್ರ ಆಕ್ಷೇಪಣೆ ವ್ಯಕ್ತವಾದರೆ 3ರಿಂದ 5 ರೂಪಾಯಿ ಹೆಚ್ಚಳ ಮಾಡುವ ಪ್ಲ್ಯಾನ್‌ನಲ್ಲಿದ್ದಾರೆಯೇ? ಎಂಬುದು ಸದ್ಯದ ಕುತೂಹಲವಾಗಿದೆ.
ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಎಂಎಸ್ಐಎಲ್ – MSIL) ಸರ್ಕಾರಿ ಪ್ರೀಮಿಯಂ ಮದ್ಯ ಮಾರಾಟ ಮಳಿಗೆಯನ್ನು (Liquor Shop) ಪ್ರಾರಂಭ ಮಾಡಿದೆ. ಅಲ್ಲದೆ, ಇದಕ್ಕೆ ಕಾರ್ಪೊರೇಟ್ ಟಚ್ ನೀಡಲಾಗಿದ್ದು, ಎಲ್ಲ ವರ್ಗದ ಮದ್ಯ ಪ್ರಿಯರನ್ನೂ ಸೆಳೆಯಲು ಮುಂದಾಗಲಾಗಿದೆ. ಸದ್ಯ ಇದನ್ನು ಬಸವೇಶ್ವರ ನಗರದಲ್ಲಿ ಪ್ರಾರಂಭ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರಿನ ಹಲವು ಕಡೆ ಸ್ಥಾಪನೆ ಮಾಡುವ ಚಿಂತನೆಯನ್ನು ನಡೆಸಲಾಗಿದೆ.
ಬೆಂಗಳೂರು ಬಸವೇಶ್ವರ ನಗರದ ತಿಮ್ಮಯ್ಯ ರಸ್ತೆಯಲ್ಲಿ ಹೊಸದಾಗಿ ಆರಂಭಿಸಲಾಗಿದ್ದು, ಮಧ್ಯಮ ವರ್ಗದಿಂದ ಹಿಡಿದು ಸಮಾಜದ ಪ್ರತಿಯೊಂದು ವರ್ಗದ ಗ್ರಾಹಕರನ್ನೂ ಸೆಳೆಯುವುದು ಎಂಎಸ್ಐಎಲ್‌ನ ಗುರಿಯಾಗಿದೆ. ಇದರಂತೆ, ಹೊಸ ರೂಪ ಪಡೆದಿರುವ ಈ ಬೋಟಿಕ್‌ನಲ್ಲಿ ಸಾಮಾನ್ಯ ಬೆಲೆಯಿಂದ ಹಿಡಿದು ಅತ್ಯಂತ ದುಬಾರಿ ಬೆಲೆಯ ಬ್ರಾಂಡೆಡ್ ಮದ್ಯದ ಉತ್ಪನ್ನಗಳು ಸುಲಭವಾಗಿ ಸಿಗಲಿದೆ. ಚಿತ್ತಾಕರ್ಷಕ ಒಳಾಂಗಣ ವಿನ್ಯಾಸ ಮತ್ತು ಗ್ರಾಹಕರಿಗೆ ಹಿತಕರ ಅನುಭವ ಸಿಗುವಂತೆ ಮಾಡಲು ಇಲ್ಲಿ ಆದ್ಯತೆ ಕೊಡಲಾಗಿದ್ದು, ಜಾಗತಿಕ ಗುಣಮಟ್ಟದ ಮಾಲ್ ರೀತಿಯಲ್ಲಿ ಈ ಪ್ರೀಮಿಯಂ ಬೋಟಿಕ್ ಇದೆ.
ಬೋಟಿಕ್ ಆಗಿ 200 ಮಳಿಗೆಗಳು ಮೇಲ್ದರ್ಜೆಗೆ
ಎಂಎಸ್ಐಎಲ್ ರಾಜ್ಯದಲ್ಲಿ ಒಟ್ಟು 1,029 ಮದ್ಯ ಮಾರಾಟ ಮಳಿಗೆಗಳನ್ನು ನಡೆಸುತ್ತಿದೆ. ಈ ಪೈಕಿ 200 ಮಳಿಗೆಗಳನ್ನು ಬೋಟಿಕ್ ಆಗಿ ಮೇಲ್ದರ್ಜೆಗೇರಿಸಲಾಗುತ್ತಿದ್ದು, ಇದರಲ್ಲಿ 20 ಮಳಿಗೆಗಳು ಬೆಂಗಳೂರಿನಲ್ಲೇ ಇರಲಿವೆ. ಇನ್ನು ಕೆಲವೇ ದಿನಗಳಲ್ಲಿ ಡಾ.ರಾಜಕುಮಾರ್ ರಸ್ತೆ, ಆರ್ ಪಿಸಿ ಬಡಾವಣೆ ಮತ್ತು ವಿಜಯನಗರದಲ್ಲಿ ಇಂತಹ ಬೋಟಿಕ್ ಮದ್ಯಪ್ರಿಯರಿಗೆ ಮುಕ್ತವಾಗಲಿವೆ ಎಂದು ಎಂಎಸ್‌ಐಎಲ್‌ನ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಮನೋಜ್ ಕುಮಾರ್ ಹೇಳಿದ್ದರು.
ಇದಲ್ಲದೆ ಶಿವಾನಂದ ವೃತ್ತ, ವರ್ತೂರು, ಕೆಂಗೇರಿ ಉಪನಗರ, ಮಾರುತಿ ಸೇವಾ ನಗರ, ಹನುಮಂತ ನಗರ ಮತ್ತು ಸರ್ಜಾಪುರ ರಸ್ತೆಯಲ್ಲಿರುವ ದೊಡ್ಡಕನ್ನಹಳ್ಳಿಯಲ್ಲಿ ಇರುವ ಎಂಎಸ್ಐಎಲ್ ಮಳಿಗೆಗಳನ್ನು ಬೋಟಿಕ್‌ಗಳಾಗಿ ರೂಪಾಂತರಿಸುವ ಕೆಲಸ ಪ್ರಗತಿಯಲ್ಲಿದೆ. ಈ ಎಲ್ಲ ಮಳಿಗೆಗಳಲ್ಲೂ ಚಿಲ್ಲರೆ ಮಾರಾಟ ದರದಲ್ಲಿ ಅತ್ಯುತ್ಕೃಷ್ಟ ಮದ್ಯಗಳು ಲಭ್ಯವಾಗಲಿವೆ ಎಂದು ಮನೋಜ್ ಕುಮಾರ್ ಹೇಳಿದ್ದರು.