ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ನಟಿ ಕೀರ್ತಿ ಸುರೇಶ್

ಮಹಾನಟಿ (Mahanati) ಸಿನಿಮಾ ಮೂಲಕ ಸಖತ್ ಫೇಮಸ್ ಆಗಿರುವ ಕೀರ್ತಿ ಸುರೇಶ್ (Keerthi Suresh) , ವಾರಕ್ಕೊಂದು ಸಲ ಬೇರೆ ಬೇರೆ ಕಾರಣಗಳಿಗಾಗಿ ಸುದ್ದಿ ಆಗುತ್ತಿದ್ದಾರೆ. ಈ ಹಿಂದೆ ಅವರ ಮದುವೆ ವಿಚಾರವಾಗಿ ಸಾಕಷ್ಟು ಸದ್ದು ಮಾಡಿದ್ದರು. ಈ ಕುರಿತು ಸ್ವತಃ ಅವರ ತಂದೆಯೇ ಮಾಧ್ಯಮಗಳ ಮುಂದೆ ಬಂದು ಸ್ಪಷ್ಟನೆ ನೀಡಬೇಕಾಯಿತು.

ಈ ಹಿಂದೆ ಡೇಟಿಂಗ್ ವಿಚಾರವಾಗಿಯೂ ಕೀರ್ತಿ ಸುರೇಶ್ ಗಾಸಿಪ್ ಖಾಲಂನಲ್ಲಿ ಕಾಣಿಸಿಕೊಂಡಿದ್ದರು. ದಳಪತಿ ವಿಜಯ್ ಜೊತೆ ಕೀರ್ತಿ ಡೇಟಿಂಗ್ ಮಾಡುತ್ತಿದ್ದು, ವಿಜಯ್ ಅವರ ಸಂಸಾರ ಹಾಳಾಗಿದೆ ಎಂದು ವರದಿಯಾಗಿತ್ತು. ಈ ವಿಚಾರವಾಗಿ ಕೀರ್ತಿ ಮಾತನಾಡಿ, ಅಂಥದ್ದೇನೂ ಇಲ್ಲ. ನಾವಿಬ್ಬರೂ ಡೇಟಿಂಗ್ ಮಾಡುತ್ತಿಲ್ಲ ಎನ್ನುವ ವಿಚಾರವನ್ನು ಹಂಚಿಕೊಂಡಿದ್ದರು. ಅಲ್ಲಿಗೆ ಆ ಗಾಸಿಪ್ ಗೆ ಫುಲ್ ಸ್ಟಾಪ್ ಇಡುವ ಪ್ರಯತ್ನ ಮಾಡಿದ್ದರು.

ಇದೀಗ ಮತ್ತೊಂದು ಕಾರಣಕ್ಕಾಗಿ ಕೀರ್ತಿ ಸುರೇಶ್ ಸುದ್ದಿಗೆ ಸಿಕ್ಕಿದ್ದಾರೆ. ಮಹಾನಟಿ ಸದ್ಯದಲ್ಲೇ ರಾಜಕಾರಣ (Politics) ಪ್ರವೇಶ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಅವರು ಉದಯನಿಧಿ ಸ್ಟಾಲಿನ್ ಜೊತೆ ಮಾಮನನ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ರಾಜಕೀಯ ಹಿನ್ನೆಲೆಯನ್ನು ಕಥೆಯನ್ನು ಹೊಂದಿದೆ. ಸೆಲ್ವರಾಜ್ ನಿರ್ದೇಶನದಲ್ಲಿ ಮೂಡಿ ಬಂದಿದೆ. ಈ ಸಿನಿಮಾದ ಪ್ರಚಾರದಲ್ಲಿ ಕೇಳಿ ಬಂದ ಪ್ರಶ್ನೆಗೆ ಕೀರ್ತಿ ನೀಡಿದ ಉತ್ತರವೇ ಅವರ ರಾಜಕೀಯ ಕುರಿತಾದ ಸುದ್ದಿಗೆ ಕಾರಣವಾಗಿದೆ.
ನಿಮಗೇನಾದರೂ ರಾಜಕಾರಣಕ್ಕೆ ಬರುವ ಆಲೋಚನೆ ಇದೆಯಾ? ಎಂದು ಕೇಳಿದ ಪ್ರಶ್ನೆಗೆ, ‘ಆ ವಿಚಾರದ ಬಗ್ಗೆ ಆಲೋಚಿಸಬೇಕಿದೆ’ ಎಂದು ಹೇಳಿದ ಉತ್ತರವೇ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಹೇಳಿ ಕೇಳಿ ಈ ಸಿನಿಮಾದ ನಟ ಉದಯನಿಧಿ (Udayanidhi Stalin) ರಾಜಕಾರಣಿ. ತಮಿಳು ನಾಡು ಸರಕಾರದ ಸಚಿವ ಕೂಡ. ಹಾಗಾಗಿ ಮುಂದಿನ ದಿನಗಳಲ್ಲಿ ಪ್ರಚಾರಕ್ಕಾದರೂ ಕೀರ್ತಿ ಸುರೇಶ್ ಬರುತ್ತಾರೆ ಎನ್ನುವ ನಂಬಿಕೆ ಅವರ ಅಭಿಮಾನಿಗಳದ್ದು.
