ಭ್ರೂಣ ಪತ್ತೆ ಪ್ರಕರಣ: ಮೈಸೂರಿನಲ್ಲಿ 14 ಕ್ಲಿನಿಕ್ಗಳಿಗೆ ಬೀಗ..!
ಮೈಸೂರು: ಜಿಲ್ಲೆಯಲ್ಲಿ ವೈದ್ಯಕೀಯ ಪ್ರಮಾಣಪತ್ರ ಇಲ್ಲದ 14 ಕ್ಲಿನಿಕ್ಗಳಿಗೆ ಬೀಗ ಜಡಿಯಲಾಗಿದೆ. ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ಮುಂದುವರೆಸಿದೆ.
ಪಿಸಿಪಿಎನ್ಡಿಟಿ ಕಾಯಿದೆ ಪಾಲನೆ ಮಾಡದ 80 ಸ್ಕ್ಯಾನಿಂಗ್ ಸೆಂಟರ್ ಹಾಗೂ ನಿಯಮ ಬಾಹಿರವಾಗಿ ಕೆಲಸ ಮಾಡುತ್ತಿರುವ 62 ರೇಡಿಯಾಲಜಿಸ್ಟ್ಗಳನ್ನು ಪತ್ತೆ ಹಚ್ಚಿದೆ. ಅಲ್ಲದೆ, ಕೆಪಿಎಂಇ ಕಾಯಿದೆ ಉಲ್ಲಂಘಿಸಿರುವ 49 ಆಸ್ಪತ್ರೆ, ಕ್ಲಿನಿಕ್ಗಳಿಗೆ ನೋಟಿಸ್ ಜಾರಿಗೊಳಿಸುವ ಮೂಲಕ ಚಾಟಿ ಬೀಸಿದೆ.
ಹೆಣ್ಣು ಭ್ರೂಣ ಪತ್ತೆ ಪ್ರಕರಣದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಅವರು ಕೂಡಲೇ ವಿಶೇಷ ತಂಡ ರಚಿಸಿ ಜಿಲ್ಲೆಯಲ್ಲಿರುವ ಎಲ್ಲಾ ಆಸ್ಪತ್ರೆ, ಕ್ಲಿನಿಕ್, ಸ್ಕ್ಯಾನಿಂಗ್ ಸೆಂಟರ್ಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದರು. ಅದರಂತೆ ಕಾರ್ಯೋನ್ಮುಖವಾದ ಆರೋಗ್ಯ ಇಲಾಖೆ ಆರು ತಾಲೂಕು ಹಾಗೂ ನಗರ ವ್ಯಾಪ್ತಿಯ 9 ವಲಯಗಳಲ್ಲಿ ಒಟ್ಟು 15 ವಿಶೇಷ ತಂಡಗಳನ್ನು ರಚಿಸಿ ಪಿಸಿಪಿಎನ್ಡಿಟಿ ಹಾಗೂ ಕೆಪಿಎಂಇ ಕಾಯಿದೆ ಪಾಲನೆ ಕುರಿತು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿತ್ತು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜಿಲ್ಲಾ ಟಾಸ್ಕ್ಪೋರ್ಸ್ ತಂಡ ಆಸ್ಪತ್ರೆ, ಕ್ಲಿನಿಕ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಇದರಲ್ಲಿ 14 ಕ್ಲಿನಿಕ್ಗಳಿಗೆ ಬೀಗ ಹಾಕಿದ್ದು, ಇಂತಹ ಇನ್ನು 4 ಕ್ಲಿನಿಕ್ಗಳನ್ನು ಪತ್ತೆ ಮಾಡಲಾಗಿದೆ.
ಭ್ರೂಣ ಹತ್ಯೆ ಸುಳಿವು ನೀಡಿದವರಿಗೆ 1 ಲಕ್ಷ ನಗದು ಬಹುಮಾನ: ಆರೋಗ್ಯ ಇಲಾಖೆ
ಬೆಂಗಳೂರು: ಭ್ರೂಣ ಹತ್ಯೆ ಸುಳಿವು ನೀಡಿದವರಿಗೆ ರೂ. 1 ಲಕ್ಷ ನಗದು ಬಹುಮಾನ ನೀಡುವುದಾಗಿ ಆರೋಗ್ಯ ಇಲಾಖೆ ಘೋಷಿಸಿದೆ. ಇದಲ್ಲದೇ ಸುಳಿವು ನೀಡುವವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದೆ.
ರಾಜ್ಯದ ಯಾವುದೇ ಭಾಗದ ಆಸ್ಪತ್ರೆಯಲ್ಲಿ ಭ್ರೂಣ ಲಿಂಗ ಪತ್ತೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಸ್ಪಷ್ಟವಾಗಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದವರಿಗೆ ಒಂದು ಲಕ್ಷಣ ರೂಪಾಯಿ ಬಹುಮಾನ ಹಣ ನೀಡುತ್ತೇವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಸಾರ್ವಜನಿಕರ ಸಹಾಯಕ್ಕಾಗಿ ಆರೋಗ್ಯ ಇಲಾಖೆ ಸಹಾಯವಾಣಿ ತೆರೆದಿದ್ದು, 080-25202264/65ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ತಿಳಿಸಿದೆ.