ಅಭಿಮಾನಿಗೆ ಕಪಾಳಮೋಕ್ಷ ಮಾಡಿದ ಚುನಾಯಿತ ಸಂಸದ ಶಕೀಬ್ ಅಲ್ ಹಸನ್; ವಿಡಿಯೋ ವೈರಲ್
Shakib Al Hasan: ಬಾಂಗ್ಲಾದೇಶ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾದ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಅವರು ಅಭಿಮಾನಿಯೊಬ್ಬರಿಗೆ ಕಪಾಳ ಮೋಕ್ಷ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಜನವರಿ 7ರ ಭಾನುವಾರ ನಡೆದ ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯ ಫಲಿತಾಂಶದಲ್ಲಿ ಗೆದ್ದಿರುವ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಅವರು (Shakib Al Hasan) ತಮ್ಮ ದೇಶದ ಪ್ರಜೆಯೊಬ್ಬರಿಗೆ ಕಪಾಳಮೊಕ್ಷ ಮಾಡಿರುವ ವಿಡಿಯೋ ವೈರಲ್ ಆಗಿದೆ. ಆದರೆ ಈ ವಿಡಿಯೋ ಯಾವ ಸಮಯದ್ದು ಎಂಬುದು ತಿಳಿದು ಬಂದಿಲ್ಲ. ಶಕೀಬ್ ಸಂಸದರಾಗಿ ಆಯ್ಕೆಯಾದ ಬೆನ್ನಲ್ಲೇ ಈ ವಿಡಿಯೋ ಸಾಕಷ್ಟು ಹರಿದಾಡುತ್ತಿದ್ದು, ಅವರ ನಡೆಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.
ಸೆಲ್ಫಿಗೆ ಮುಂದಾದಾಗ ಕಪಾಳ ಮೋಕ್ಷ
ವರದಿಗಳ ಪ್ರಕಾರ 36 ವರ್ಷದ ಶಕೀಬ್ ಮತಗಟ್ಟೆಯೊಂದರಲ್ಲಿ ನಡಾವಳಿಗಳನ್ನು ವೀಕ್ಷಿಸಲು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಬಾಂಗ್ಲಾದ ಲೆಜೆಂಡರಿ ಕ್ರಿಕೆಟಿಗ ಶಕೀಬ್ ಅವರು ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಹಾಗಾಗಿ ಅವರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ಅಭಿಮಾನಿಯೊಬ್ಬ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಕಪಾಳಕ್ಕೆ ಬಾರಿಸಿದ್ದಾರೆ ಎಂದು ಬಾಂಗ್ಲಾದ ಮಾಧ್ಯಮಗಳು ವರದಿ ಮಾಡಿವೆ.
ಶಕೀಬ್ ಕೈ ಹಿಡಿದ ಅಭಿಮಾನಿ
ಜನಸ್ತೋಮ ತುಂಬಿತ್ತು. ಅವರು ಮುಂದೆ ಹೋಗುವುದು ಕಷ್ಟವಾಗಿತ್ತು. ಕನಿಷ್ಠ ಹೇಳುವುದಾದರೆ, ಹಲವಾರು ಅಭಿಮಾನಿಗಳು ಸೆಲ್ಫಿ ಪಡೆಯುವ ಸಲುವಾಗಿ ಮುತ್ತಿಗೆ ಹಾಕಿದರು. ಈ ನಡುವೆ ಅಭಿಮಾನಿಯೊಬ್ಬ ಶಕೀಬ್ ಕೈ ಹಿಡಿಯಲು ಯತ್ನಿಸಿದ್ದಾನೆ. ಇದು ಬಾಂಗ್ಲಾದೇಶದ ನಾಯಕನಿಗೆ ಕೋಪ ತರಿಸುವಂತೆ ಮಾಡಿತು. ತಕ್ಷಣವೇ ಅವರು ಅಭಿಮಾನಿಗೆ ಕಪಾಳ ಮೋಕ್ಷ ಮಾಡಿದರು. ಆದರೆ ಅವರು ಗೆದ್ದ ನಂತರ ಇದೀಗ ಸಾಕಷ್ಟು ವೈರಲ್ ಆಗುತ್ತಿದ್ದು, ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಭರ್ಜರಿ ಗೆಲುವು ಸಾಧಿಸಿದ ಆಲ್ರೌಂಡರ್
ಅವಾಮಿ ಲೀಗ್ ಪಕ್ಷದಿಂದ ಮಗುರಾ-1 ರಿಂದ ಚುನಾವಣೆಗೆ ಸ್ಪರ್ಧಿಸಿದ್ದ ಶಕಿಬ್ ಅಲ್ ಹಸನ್ 185,388 ಮತಗಳನ್ನು ಗಳಿಸಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಖಾಜಿ ರೆಜಾಲ್ ಹೊಸೈನ್ 45,993 ಮತಗಳನ್ನು ಮಾತ್ರ ಪಡೆದು 1,39,395 ವೋಟ್ಗಳಿಂದ ಸೋತಿದ್ದಾರೆ. ಆದರೆ ಶಕೀಬ್ ಈ ರೀತಿ ತನ್ನ ತಾಳ್ಮೆಯನ್ನು ಕಳೆದುಕೊಂಡು ಕೋಪ ಪ್ರದರ್ಶಿಸಿದ್ದು ಇದೇ ಮೊದಲಲ್ಲ. ಇದೇ ಸುದ್ದಿಗಳ ಮೂಲಕವೇ ಆಗಾಗ್ಗೆ ಸುದ್ದಿಯಲ್ಲಿದ್ದಾರೆ. ಕೆಲವು ವರ್ಷಗಳ ಹಿಂದೆ ಢಾಕಾ ಪ್ರೀಮಿಯರ್ ಲೀಗ್‌ನಲ್ಲಿ ಅಂಪೈರ್‌ಗಳ ಮೇಲೆ ಉದ್ಧಟತನ ತೋರಿದ್ದರು. ಆಗ ಅವರನ್ನು ಬಿಸಿಬಿ ಅಮಾನತುಗೊಳಿಸಿತ್ತು.
Slap Shot from Shakib 🏏 pic.twitter.com/D2MGqqAhPK
— Zaki Ishtiaque Hussain (@Gunner_811) January 7, 2024
ಸದ್ಯಕ್ಕಿಲ್ಲ ನಿವೃತ್ತಿ
2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಶಕೀಬ್ ಕೊನೆಯದಾಗಿ ಶ್ರೀಲಂಕಾ ವಿರುದ್ಧ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. ಬಾಂಗ್ಲಾದೇಶಕ್ಕಾಗಿ ಆಡಿದ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಸದ್ಯ ರಾಜಕೀಯ ರಂಗ ಪ್ರವೇಶಿಸಿರುವ ಆಲ್ರೌಂಡರ್, ಕ್ರಿಕೆಟ್ನಲ್ಲೂ ಮುಂದುವರೆಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಯೋಚಿಸುವುದಾಗಿಯೂ ತಿಳಿಸಿದ್ದಾರೆ. ಶೇಖ್ ಹಸೀನಾ ಅವರ ಪಕ್ಷ ಅವಾಮಿ ಲೀಗ್‌ನಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.