ಕರ್ತವ್ಯದ ವೇಳೆ ಬಿಎಂಟಿಸಿ ಬಸ್ಸಿನಲ್ಲಿ ನಿರ್ವಾಹಕ ಧರಿಸಿದ್ದ ಟೋಪಿಯನ್ನು ತೆಗೆಸಿದ ಮಹಿಳಾ ಪ್ರಯಾಣಿಕೆ ; ವಿಡಿಯೋ ಇಲ್ಲಿದೆ ನೋಡಿ
ಬೆಂಗಳೂರು: ಬಿಎಂಟಿಸಿ ಬಸ್ಸಿನಲ್ಲಿ ಕರ್ತವ್ಯದ ವೇಳೆ ನಿರ್ವಾಹಕ ಧರಿಸಿದ್ದ ಧರ್ಮದ ಟೋಪಿಯನ್ನು ಮಹಿಳಾ ಪ್ರಯಾಣಿಕರೊಬ್ಬರು ತೆಗೆಸಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
1 ನಿಮಿಷ 37 ಸೆಕೆಂಡುಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆ ಹಿರಿಯ ಅಧಿಕಾರಿಗಳಿಗೆ ದೂರು ನೀಡುವುದಾಗಿ ಕಂಡಕ್ಟರ್ಗೆ ಹೇಳುತ್ತಿರುವುದು ಕಂಡು ಬರುತ್ತದೆ.
ಏಕರೂಪದ ನಿಯಮಗಳ ಬಗ್ಗೆ ನಿಮಗೆ ತಿಳಿದಿದೆಯೇ? ಧರ್ಮದ ಟೋಪಿ ಧರಿಸಲು ನಿಮಗೆ ಅನುಮತಿ ಇದೆಯೇ ಎಂದು ಮಹಿಳೆ ನಿರ್ವಾಹಕರಿಗೆ ಪ್ರಶ್ನಿಸಿದ್ದಾರೆ.
ಇದಕ್ಕೆ ಅನುಮತಿಸಲಾಗಿದೆ ಎಂದು ಭಾವಿಸುತ್ತೇನೆಂದು ನಿರ್ವಾಹಕ ನಗುತ್ತಲೇ ಉತ್ತರಿಸುತ್ತಾನೆ. ನಂತರ ಮಹಿಳೆ ನೀವು ನಿಮ್ಮ ಧರ್ಮವನ್ನು ಅನುಸರಿಸಬಹುದು. ಅದು ಮನೆ ಮತ್ತು ಮಸೀದಿಗಳಲ್ಲಿ. ಅಲ್ಲಿ ಯಾರೂ ವಿರೋಧಿಸುವುದಿಲ್ಲ. ಆದರೆ, ಸರ್ಕಾರಿ ನೌಕರನಾಗಿರುವ ಹಿನ್ನೆಲೆಯಲ್ಲಿ ಕರ್ತವ್ಯದ ವೇಳೆ ಧರ್ಮದ ಟೋಪಿ ಧರಿಸುವಂತಿಲ್ಲ ಎಂದು ಹೇಳಿದ್ದಾರೆ.
ಈ ವೇಳೆ ನಿರ್ವಾಹಕ ನಾನು ಹಲವು ವರ್ಷಗಳಿಂದ ಟೋಪಿ ಧರಿಸುತ್ತೇನೆ. ಈ ಹಿಂದೆ ಯಾರೂ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದಿದ್ದಾರೆ. ಕಾನೂನಿನ ಪ್ರಕಾರ ಕರ್ತವ್ಯದ ವೇಳೆ ಧರ್ಮದ ಟೋಪಿ ಧರಿಸುವಂತಿಲ್ಲ ಎಂದು ಮಹಿಳೆ ಹೇಳಿದ್ದಾರೆ.
ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ನಿರ್ವಾಹಕ ಹೇಳಿದ್ದು, ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ. ನಿಯಮ ಎಲ್ಲರಿಗೂ ಅನ್ವಯಿಸುತ್ತದೆ. ಕಾನೂನಿನ ಬಗ್ಗೆ ನಿಮಗೆ ಖಚಿತವಿಲ್ಲದಿದ್ದರೆ, ಕೂಡಲೇ ಟೋಪಿ ತೆಗೆಯಿರಿ ಎಂದು ಮಹಿಳೆ ಹೇಳಿದ್ದಾರೆ. ನಂತರ ನಿರ್ವಾಹಕ ಟೋಪಿ ತೆಗೆದು ಜೇಬಿನಲ್ಲಿ ಇಟ್ಟುಕೊಂಡಿದ್ದಾರೆ.
ವಾಟ್ಸಾಪಲ್ಲಿ ನೋಡ್ದೆ. ಆ ಮಹಿಳೆಯ ಹೃದಯದಲ್ಲಿ ತುಂಬಿದ ಕೋಮು ವಿಷದ ತೀವ್ರತೆಯನ್ನು ಅಳೆಯುವ ಯಂತ್ರವೊಂದಿದ್ರೆ ಅದರ ಮುಳ್ಳುಗಳೇ ಒಡೆದುಹೋಗುತ್ತಿದ್ವೆನೋ?. ಕುಂಕುಮ, ಮಾಲೆಗಳನ್ನು ಧರಿಸುವಂತೆ ಟೋಪಿಗೂ ಅವಕಾಶವಿದೆಎಂದಾಗಿದೆ ನನ್ನ ಭಾವನೆ. ಏನಿದ್ದರೂ ವಿಷ ಕಾರುತ್ತಿರುವ ಮಹಿಳೆಯ ಮುಂದೆಯೂ ಸೌಮ್ಯವಾಗಿ ನಡೆದುಕೊಂಡ ನಿರ್ವಾಹಕರಿಗೆ ನನ್ನದೊಂದು ಸಲಾಂ pic.twitter.com/RFaIXGuq3M
— ನನ್ನೊಳಗಿನ ನಾನು (Me in Me) (@Mohamed47623244) July 11, 2023
ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ಕುರಿತು ಪರ ಹಾಗೂ ವಿರೋಧದ ಚರ್ಚಗಳು ಆರಂಭವಾಗಿವೆ. ಕೆಲವರು ಮಹಿಳೆಯನ್ನು ಕೋಮುವಾದಿ ಎಂದು ಕರೆದಿದ್ದರೆ, ಮತ್ತೆ ಕೆಲವರು ನಿರ್ವಾಹಕನ ತಾಳ್ಮೆ ಹಾಗೂ ಶಾಂತವಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಕಾನೂನು ಅನುಸರಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ವಿಡಿಯೋ ಸಂಬಂಧ ಸಾರಿಗೆ ನಿಗಮ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಸಾರಿಗೆ ನಿಗಮದ ಸಮವಸ್ತ್ರ ನಿಯಮದ ಪ್ರಕಾರ, ಕರ್ತವ್ಯದ ಸಮಯದಲ್ಲಿ ನೌಕರರು ಧಾರ್ಮಿಕ ಟೋಪಿ ಅಥವಾ ಕೇಸರಿ ಶಾಲುಗಳನ್ನು ಧರಿಸಲು ಅನುಮತಿ ಇಲ್ಲ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.
ಈ ನಡುವೆ ವಿಡಿಯೋವನ್ನು ಗಮನಿಸಿದ ಬೆಂಗಳೂರು ಪೊಲೀಸರು ಹೆಚ್ಚಿನ ವಿವರ ಹಂಚಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
ಚಂದ್ರಯಾನ-3 ಕಾರ್ಯಾಚರಣೆಗೆ ಕೌಂಟ್‌ಡೌನ್ ಶುರು, ಜುಲೈ 14ಕ್ಕೆ ಉಡಾವಣೆ
ಶ್ರೀಹರಿಕೋಟಾ: ಭಾರತದ ಮಹತ್ವಾಕಾಂಕ್ಷೆಯ ಚಂದ್ರನ ಪರಿಶೋಧನಾ ಮಿಷನ್ ಚಂದ್ರಯಾನ-3 ಗೆ (Chandrayaan-3) ಇಂದಿನಿಂದ ಕೌಂಟ್‌ಡೌನ್ ಶುರುವಾಗಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು (ಜುಲೈ 13 ರಂದು) ಮಧ್ಯಾಹ್ನ 1.05 ಕ್ಕೆ 26 ಗಂಟೆಗಳ ಕೌಂಟ್‌ಡೌನ್ ಪ್ರಾರಂಭವಾಗಲಿದೆ ಎಂದು ಹೇಳಿದೆ. ನಾಳೆ (ಜುಲೈ 14 ರಂದು) ಮಧ್ಯಾಹ್ನ 2.35 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಉಡಾವಣೆವಾಗಲಿದೆ ಎಂದು ಹೇಳಲಾಗಿದೆ.
ಚಂದ್ರಯಾನ-3 ಕಾರ್ಯಾಚರಣೆ ಚಂದ್ರನ ಕಡೆ ಸಾಗುತ್ತಿರುವ ಭಾರತದ ಮೂರನೇ ಪ್ರಯತ್ನವಾಗಿದೆ. ಜತೆಗೆ ಇದು ರಾಷ್ಟ್ರದ ಬಾಹ್ಯಾಕಾಶ ಪರಿಶೋಧನೆಯಲ್ಲಿ ಮಹತ್ವಾಕಾಂಕ್ಷೆಯ ಸಾಧನೆಯಾಗಿದೆ. ಈಗಾಗಲೇ ಚಂದ್ರಯಾನ-3ಯ ಎಲ್ಲ ಕಾರ್ಯತಂತ್ರಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಭಾರತವು ಚಂದ್ರನಲ್ಲಿ ತನ್ನ ಮಿಷನ್ನ್ನು ಸುರಕ್ಷಿತ ಲ್ಯಾಂಡಿಂಗ್ ಮಾಡುವ ನಾಲ್ಕನೇ ರಾಷ್ಟ್ರವಾಗಲಿದೆ, ಬಾಹ್ಯಾಕಾಶ ಸಂಶೋಧನೆಯ ಕ್ಷೇತ್ರದಲ್ಲಿ ಭಾರತ ತನ್ನ ತಾಂತ್ರಿಕ ಸಾಮರ್ಥ್ಯವನ್ನು ಈ ಮೂಲಕ ಪ್ರದರ್ಶಿಸುತ್ತಿದೆ.
LVM3 ರಾಕೆಟ್ ಉಡಾವಣೆಯಾದ ಸರಿಸುಮಾರು 16 ನಿಮಿಷಗಳ ನಂತರ, ಪ್ರೊಪಲ್ಷನ್ ಮಾಡ್ಯೂಲ್ ಮುಖ್ಯ ರಾಕೆಟ್‌ನಿಂದ ಪ್ರತ್ಯೇಕಗೊಳ್ಳುತ್ತದೆ. ನಂತರ ಅದರಿಂದ ಅಂಡಾಕಾರದ ಚಕ್ರ ಹೊರಗೆ ಬಂದು, ಭೂಮಿಯ ಸುತ್ತ 5 ರಿಂದ 6 ಬಾರಿ ಸುತ್ತುತ್ತದೆ. ಭೂಮಿಯಿಂದ 36,500 ಕಿಮೀ ದೂರದಿಂದ ಸಾಗಿ, ಕ್ರಮೇಣ ಚಂದ್ರನ ಕಕ್ಷೆಯತ್ತ ಬರುತ್ತದೆ. ಇದು ಹೀಗೆ ಪ್ರಯಾಣ ನಡೆಸುತ್ತ ಚಂದ್ರನ ಮೇಲ್ಮೈಯಿಂದ 100 ಕಿಮೀ ಎತ್ತರವನ್ನು ತಲುಪುವವರೆಗೆ ಅದೇ ಸ್ಥಿರವಾದ ವೇಗವನ್ನು ಹೊಂದಿರುತ್ತದೆ.
ತನ್ನ ಸ್ಥಾನವನ್ನು ತಲುಪಿದ ನಂತರ, ಲ್ಯಾಂಡರ್ ಮಾಡ್ಯೂಲ್ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಮೇಲೆ ಲ್ಯಾಂಡಿಂಗ್ ಆಗಲು ಶುರು ಮಾಡುತ್ತದೆ. ಈ ಪ್ರಕ್ರಿಯೆ ಈ ತಿಂಗಳ 23 ಅಥವಾ 24ರ ತನಕ ನಡೆಯಲಿದೆ ಎಂದು ಹೇಳಲಾಗಿದೆ. ಈ ಚಂದ್ರಯಾನ-3 ಮಿಷನ್‌ನ ಪ್ರಾಥಮಿಕ ಉದ್ದೇಶವೇನೆಂದರೆ, ಚಂದ್ರನ ಕಕ್ಷೆಯಿಂದ ಭೂಮಿಯನ್ನು ಅಧ್ಯಯನ ಮಾಡುವುದು ಮತ್ತು ಅದರ ಸಾಂದ್ರತೆಯ ಬದಲಾವಣೆಗಳನ್ನು ಅಳೆಯುವುದು, ಜತೆಗೆ ಧ್ರುವ ಪ್ರದೇಶದಲ್ಲಿನ ಚಂದ್ರನ ಮೇಲ್ಮೈಯ ಉಷ್ಣ ಗುಣಲಕ್ಷಣಗಳನ್ನು ವಿಶ್ಲೇಷಿಸುವುದು. ಇದು ಲ್ಯಾಂಡಿಂಗ್ ಆದ್ಮೇಲೆ ಚಂದ್ರನ ಸುತ್ತಲೂ ಭೂಕಂಪನ ಚಟುವಟಿಕೆಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತದೆ, ಇದರ ಜತೆಗೆ ಇದು ಚಂದ್ರನ ಹೊರಪದರ ಮತ್ತು ನಿಲುವಂಗಿಯ ರಚನೆಯ ಒಳನೋಟಗಳನ್ನು ನೀಡುತ್ತದೆ.