ಭಾರತ್ ಜೋಡೋ ನ್ಯಾಯ್ ಯಾತ್ರೆ ವೇಳೆ ರಾಹುಲ್ ಗಾಂಧಿ ಕಾರಿಗೆ ಅಪರಿಚಿತರಿಂದ ಕಲ್ಲೆಸೆತ...!
ಕೋಲ್ಕತ್ತಾ: ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಗೆ ಪ್ರವೇಶಿಸುತ್ತಿದ್ದಂತೆ ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಅಪರಿಚಿತ ವ್ಯಕ್ತಿಗಳು ಇಂದು ಬುಧವಾರ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪಕ್ಷದ ರಾಜ್ಯ ಮುಖ್ಯಸ್ಥ ಲೋಕಸಭಾ ಸದಸ್ಯ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.
ಘಟನೆಯಲ್ಲಿ ವಾಹನದ ಹಿಂಬದಿಯ ಕಿಟಕಿ ಗಾಜು ಜಖಂಗೊಂಡಿದ್ದರೂ ರಾಹುಲ್ ಗಾಂಧಿಗೆ ಯಾವುದೇ ಗಾಯವಾಗಿಲ್ಲ. ಯಾತ್ರೆ ಗೊತ್ತುಪಡಿಸಿದ ಸ್ಥಳಕ್ಕೆ ತಲುಪಿದ ನಂತರ ಕಾರಿನ ಹಾನಿಗೀಡಾದ ಕಿಟಕಿಗಳನ್ನು ಪರೀಕ್ಷಿಸಿದ ರಾಹುಲ್ ಗಾಂಧಿ ವಾಹನದಿಂದ ಕೆಳಗಿಳಿಯುತ್ತಿರುವ ದೃಶ್ಯ ಕಾಣಬಹುದು. ಯಾತ್ರೆ ಬಿಹಾರದಿಂದ ಪಶ್ಚಿಮ ಬಂಗಾಳಕ್ಕೆ ಮರು ಪ್ರವೇಶಿಸುತ್ತಿದ್ದಂತೆ ಮಾಲ್ಡಾದ ಹರಿಶ್ಚಂದ್ರಪುರ ಪ್ರದೇಶದಲ್ಲಿ ದಾಳಿ ನಡೆದಿದೆ.
ರಾಹುಲ್ ಗಾಂಧಿ ಅವರು ಪ್ರಯಾಣಿಸುತ್ತಿದ್ದ ವಾಹನದ ಹಿಂಬದಿಯ ಕಿಟಕಿ ಗಾಜನ್ನು ಕಲ್ಲು ತೂರಾಟದ ನಂತರ ಒಡೆದು ಹಾಕಲಾಗಿದೆ. ಇದು ಅಕ್ಷಮ್ಯ ಅಪರಾಧ ನಡೆ, ಇಂತಹ ಕ್ರಮಗಳನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.
ಕಲ್ಪನಾ ಸೊರೆನ್ ಜಾರ್ಖಂಡ್ ರಾಜ್ಯದ ಮುಂದಿನ ಮುಖ್ಯಮಂತ್ರಿ? ಹೇಮಂತ್ ಸೊರೆನ್ ಪತ್ನಿ ಬಗ್ಗೆ ಇಲ್ಲಿದೆ ಮಾಹಿತಿ!
ರಾಂಚಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹೇಮಂತ್ ಸೊರೆನ್ ಅವರ ಬಂಧನವಾದರೆ, ಅವರ ಪತ್ನಿ ಕಲ್ಪನಾ ಸೊರೆನ್ ಅವರು ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಲಿದ್ದಾರೆ ಎನ್ನುವ ಮಾಹಿತಿ ಕೇಳಿಬಂದಿದೆ.
ಭೂಮಿ ಅವ್ಯವಹಾರ ಪ್ರಕರಣದಲ್ಲಿ ಕಾನೂನು ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗುವ ಪೂರ್ವದಲ್ಲಿ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ 40 ಗಂಟೆಗಳ ಕಾಲ ಕಣ್ಮರೆಯಾಗಿದ್ದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಬಂಧನದ ಭೀತಿಯಲ್ಲಿರುವ ಸೊರೇನ್ ತಮ್ಮ ಪತ್ನಿ ಕಲ್ಪನಾ ಸೊರೇನ್ ಅವರನ್ನು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕಲ್ಪನಾ ಯಾವುದೇ ರಾಜಕೀಯ ಹಿನ್ನೆಲೆ ಹೊಂದಿರುವವರಲ್ಲ ಹಾಗೂ ಮೂಲತಃ ಒಡಿಶಾದ ಮಯೂರ್ಗಂಜ್ ಜಿಲ್ಲೆಯವರು. 48 ವರ್ಷದ ಕಲ್ಪನಾ ಅವರು ರಾಂಚಿಯಲ್ಲಿ 1976 ರಲ್ಲಿ ಜನಿಸಿದರು. ಅವರು ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಮೂಲದ ವ್ಯಾಪಾರ ಕುಟುಂಬದಿಂದ ಬಂದವರು. ಆಕೆಯ ಕುಟುಂಬವು ಮಯೂರ್‌ಭಂಜ್‌ನಲ್ಲಿ ಇನ್ನೂ ವಾಸಿಸುತ್ತಿದೆ.
2006ರ ಫೆಬ್ರುವರಿ 7ರಂದು ಅವರು ಹೇಮಂತ್ ಸೊರೇನ್ ಅವರನ್ನು ವಿವಾಹವಾಗಿದ್ದು, ಇವರಿಗೆ ನಿಖಿಲ್ ಹಾಗೂ ಅಂಶ್ ಎಂಬ ಇಬ್ಬರು ಮಕ್ಕಳಿದ್ದಾರೆ. ಕಲ್ಪನಾ ಸೊರೆನ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು, ನಂತರ ಎಂಬಿಎ ಮಾಡಿದರು. ಕಲ್ಪನಾ ಅವರ ತಂದೆ ಉದ್ಯಮಿ ಹಾಗೂ ತಾಯಿ ಗೃಹಿಣಿ. ಕಲ್ಪನಾ ಅವರು ವ್ಯಾಪಾರ- ವ್ಯವಹಾರ ಮತ್ತು ದತ್ತಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಲ್ಪನಾ ಶಾಲೆಯನ್ನು ನಡೆಸುತ್ತಿದ್ದು, ಸಾವಯವ ಕೃಷಿ ಮಾಡುತ್ತಿದ್ದಾರೆ.
ಕಳೆದ ವರ್ಷದವರೆಗೂ ಸಕ್ರಿಯ ರಾಜಕಾರಣದಿಂದ ಅಂತರ ಕಾಯ್ದುಕೊಂಡಿದ್ದ ಕಲ್ಪನಾ ಸೊರೆನ್, ಇತ್ತೀಚೆಗೆ ಪ್ರಕರಣದಲ್ಲಿ ಪತಿ ಹೆಸರು ಕಾಣಿಸಿಕೊಂಡ ನಂತರ ವಿವಿಧ ಕಾರ್ಯಕ್ರಮಗಳಲ್ಲಿ ಅವರ ಜೊತೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕಲ್ಪನಾ ಅವರಿಗೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ ಎಂದು ಹೇಳಲಾಗುತ್ತಿದೆ, ಆದರೆ ರಾಜಕೀಯ ಕುಟುಂಬದಲ್ಲಿ ವಿವಾಹವಾಗಿರುವುದರಿಂದ ಕಲ್ಪನಾ ಸೊರೆನ್ ಅವರಿಗೆ ಅವಕಾಶ ನೀಡಿದರೆ ರಾಜ್ಯದಲ್ಲಿ ಪ್ರಸ್ತುತ ಸನ್ನಿವೇಶವನ್ನು ನಿಭಾಯಿಸಲು ಸಾಧ್ಯವಾಗುತ್ತದೆ ಎಂದು ಹಲವರು ನಂಬುತ್ತಾರೆ.