ಅನಂತ್ ನಾಗ್ ನಲ್ಲಿ ಗುಂಡೇಟಿಗೆ ಹುತಾತ್ಮರಾದ ಡಿಎಸ್ಪಿ ಹುಮಾಯೂನ್ ; ಮಗುವನ್ನು ಚೆನ್ನಾಗಿ ನೋಡಿಕೊ ನಾನು ಬದುಕುಳಿಯುವುದಿಲ್ಲ ಎಂದು ಪತ್ನಿಗೆ ಕರೆ..!
ಶ್ರೀನಗರ: ಅನಂತ್‌ನಾಗ್‌ನ ಕೋಕರ್‌ನಾಗ್ (Anantnag Encounter) ಪ್ರದೇಶದ ಗಡೋಲ್ ಅರಣ್ಯದಲ್ಲಿ ನಡೆದ ಭಯೋತ್ಪಾದಕರ ಎನ್‌ಕೌಂಟರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೊಲೀಸ್ ಉಪ ಅಧೀಕ್ಷಕ ಹುಮಾಯೂನ್ ಭಟ್ ಹತರಾಗಿದ್ದಾರೆ. ಸಾವಿಗೆ ಕೆಲವೇ ಕ್ಷಣಗಳ ಮೊದಲು ಡಿಎಸ್ಪಿ ಹುಮಾಯೂನ್ ಭಟ್ ತಮ್ಮ ಒಂದು ತಿಂಗಳ ಮಗುವನ್ನು ನೋಡುವುದಕ್ಕಾಗಿ ಕುಟುಂಬದವರಿಗೆ ವೀಡಿಯೋ ಕರೆ ಮಾಡಿದ್ದರು. ಆಗ ಅವರಾಡಿದ ಕೊನೆ ಮಾತು ಮನಕಲಕುವಂತಿತ್ತು.
ಭಯೋತ್ಪಾದಕರ ಗುಂಡೇಟಿನಿಂದ ಗಂಭೀರ ಸ್ಥಿತಿಯಲ್ಲಿದ್ದ ಹುಮಾಯೂನ್ ಭಟ್ (Humayun Bhat) ಅವರು ಸಾವಿಗೆ ಕೆಲವೇ ಕ್ಷಣ ಇದ್ದಾಗ, ತಮ್ಮ ಪತ್ನಿ ಫಾತಿಮಾ ಅವರಿಗೆ ವೀಡಿಯೋ ಕರೆ ಮಾಡಿದರು. ಈ ವೇಳೆ ಪತ್ನಿಗೆ ‘ನಾನು ಬದುಕಿ ಉಳಿಯವುದಿಲ್ಲ’ ಎಂದು ಹೇಳಿದರು. ಕುಟುಂಬದ ಸದಸ್ಯರೊಂದಿಗೆ ಅವರಾಡಿದ ಕೊನೆ ಮಾತು ಇದು
ಅನಂತ್‌ನಾಗ್‌ನಲ್ಲಿ ಭಯೋತ್ಪಾದಕರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಯುತ್ತಿದೆ. ಭಯೋತ್ಪಾದಕರು ಹಾರಿಸಿದ ಗುಂಡುಗಳು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ ದೇಹವನ್ನು ಒಕ್ಕಿದ್ದವು. ಲಷ್ಕರ್-ಎ-ತೊಯ್ಬಾದ (ಎಲ್‌ಇಟಿ) ಆಫ್-ಶೂಟ್ ಆಗಿರುವ ಟಿಆರ್‌ಎಫ್‌ನ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರ ಗುಂಟೇಟಿನಿಂದ ಹುಮಾಯೂನ್ ಭಟ್ ಅವರಿಗೆ ತೀವ್ರ ರಕ್ತಸ್ರಾವವಾಗಿತ್ತು. ಹುಮಾಯೂನ್ ಭಟ್ ಅವರ ವಿವಾಹ ವಾರ್ಷಿಕೋತ್ಸವ ಸಂಭ್ರಮಕ್ಕೆ 15 ದಿನಗಳಷ್ಟೇ ಬಾಕಿ ಇದ್ದವು. ಆ ಹೊತ್ತಿಗಾಗಲೇ ಈ ದುರಂತ ನಡೆದು ಹೋಗಿತ್ತು.
ಗುಂಡೇಟಿನಿಂದ ದೇಹಕ್ಕೆ ಗಂಭೀರ ಗಾಯಗಳಾಗಿವೆ. ನಾನು ಬದುಕಿ ಉಳಿಯುವುದಿಲ್ಲ. ಮಗುವನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಹುಮಾಯೂನ್ ಅವರು ಪತ್ನಿ ಫಾತಿಮಾಗೆ ವೀಡಿಯೋ ಕರೆ ಮಾಡಿ ಕೊನೆ ಮಾತುಗಳನ್ನು ಹೇಳಿದ್ದರು. ಪತ್ನಿಗೆ ಕರೆ ಮಾಡುವುದಕ್ಕೂ ಮುನ್ನ ಅವರು ತಮ್ಮ ತಂದೆ, ನಿವೃತ್ತ ಐಜಿ ಗುಲಾಮ್ ಹಸನ್ ಭಟ್ ಅವರಿಗೆ ಕರೆ ಮಾಡಿದ್ದರು. ತಮಗಾಗಿರುವ ಗಾಯದ ಪ್ರಮಾಣದ ಬಗ್ಗೆ ತಿಳಿಸಿದ್ದರು
ಅನಂತ್‌ನಾಗ್ ಜಿಲ್ಲೆಯ ಕೋಕೆರ್‌ನಾಗ್‌ನಲ್ಲಿ ಬುಧವಾರ ನಡೆದ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಉಪ ಅಧೀಕ್ಷಕ ಹುಮಾಯೂನ್ ಭಟ್, ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ತೀವ್ರವಾಗಿ ಗಾಯಗೊಂಡು ನಂತರ ಹುತಾತ್ಮರಾದರು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದರು.