ಡ್ರಗ್ ಕೇಸ್ ನಲ್ಲಿ ವಿಚಾರಣೆಗೆ ಹಾಜರಾಗದೇ ತಲೆಮರಿಸಿಕೊಂಡ ತೆಲುಗು ನಟ ನವದೀಪ್ ; ಬಂಧನ ಸಾಧ್ಯತೆ!
ತೆಲುಗು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿರುವ ನವದೀಪ್ (Navdeep) ಅವರು ಈಗ ಡ್ರಗ್ಸ್ ಪ್ರಕರಣದಲ್ಲಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಡ್ರಗ್ ಕೇಸ್ನಲ್ಲಿ ಅವರ ಹೆಸರೂ ಸಿಲುಕಿದೆ. ಆದರೆ, ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಅವರು ತಲೆಮರೆಸಿಕೊಂಡಿದ್ದಾರೆ. ನಟನ ನಡೆಯ ಬಗ್ಗೆ ಪೊಲೀಸರು ಅಸಮಾಧಾನಗೊಂಡಿದ್ದಾರೆ. ತನಿಖೆಗೆ ಅಸಹಕಾರ ತೋರಿದ ಆರೋಪದ ಮೇಲೆ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.
ತೆಲುಗು ಸಿನಿಮಾಗಳಲ್ಲಿ ನವದೀಪ್ ಅವರು ಗುರುತಿಸಿಕೊಂಡಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ. ನವದೀಪ್ ಅವರು ಮಾದಾಪುರ ಡ್ರಗ್ ಕೇಸ್ನಲ್ಲಿ 37ನೇ ಆರೋಪಿ ಆಗಿದ್ದಾರೆ. ಅವರ ವಿಚಾರಣೆಗೆ ಪೊಲೀಸರು ಸಾಕಷ್ಟು ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ಅವರ ಸುಳಿವು ಸಿಗುತ್ತಿಲ್ಲ.
‘ನವದೀಪ್ ಅವರು ತನಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ, ನಾನು ಡ್ರಗ್ ಸೇವಿಸಿಲ್ಲ’ ಎಂದು ಹೇಳುತ್ತಾ ಬರುತ್ತಿದ್ದಾರೆ. ಹಾಗಿದ್ದರೂ ಅವರು ತಲೆಮರೆಸಿಕೊಂಡಿದ್ದಾರೆ. ಇದು ಸಾಕಷ್ಟು ಅನುಮಾನ ಮೂಡಿಸಿದೆ. ನವದೀಪ್ ಅವರ ಗೆಳೆಯ ರಾಮಚಂದ್ ಕೂಡ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇನ್ನು ಇತ್ತೀಚೆಗೆ ನವದೀಪ್ ಅವರು ಹೈಕೋರ್ಟ್ನಿಂದ ನಿರೀಕ್ಷಣಾ ಜಾಮೀನು ಪಡೆಯಲು ಕೂಡ ಪ್ರಯತ್ನಿಸಿದ್ದರು. ಈ ಎಲ್ಲಾ ಬೆಳವಣಿಗೆಯಿಂದ ಈ ಪ್ರಕರಣದಲ್ಲಿ ನವದೀಪ್ಗೆ ಸಂಕಷ್ಟ ಹೆಚ್ಚಿದೆ.
ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಅವರು ಹೇಳುವ ಪ್ರಕಾರ ನವದೀಪ್ ಅವರು ಡ್ರಗ್ ಪೆಡ್ಲರ್ಗಳ ಜೊತೆ ಲಿಂಕ್ ಹೊಂದಿದ್ದಾರಂತೆ. ಅವರ ಜೊತೆ ಇವರು ಮಾತುಕತೆ ಕೂಡ ನಡೆದಿದೆ. ಈ ರೀತಿಯ ದಾಖಲೆಗಳನ್ನು ಎನ್ಸಿಬಿ ಪರ ವಕೀಲರು ಕೋರ್ಟ್ಗೆ ನೀಡಿದ್ದು, ನವದೀಪ್ ಜಾಮೀನು ಅರ್ಜಿ ತಿರಸ್ಕಾರಗೊಂಡಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ನವದೀಪ್ ಅವರನ್ನು ಬಂಧಿಸಬಾರದು ಎಂದು ಅವರ ಬೆಂಬಲಿಗರು ಆಗ್ರಹಿಸುತ್ತಿದ್ದಾರೆ. ಇನ್ನೂ ಕೆಲವರು ಅವರನ್ನು ಶೀಘ್ರವೇ ಬಂಧಿಸಬೇಕು ಎಂದು ಹೇಳುತ್ತಿದ್ದಾರೆ. ನವದೀಪ್ ಅವರು 2004ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ಹಲವು ತೆಲುಗು ಸಿನಿಮಾಗಳಲ್ಲಿ ಅವರು ನಟಿಸಿದರು. ಧಾರಾವಾಹಿಗಳಲ್ಲೂ ಅವರು ಅಭಿನಯಿಸಿದ್ದಾರೆ.