ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಾರು
ಬೆಳ್ಮಣ್, ಜು 10 ಚಾಲಕನ ನಿಯಂತ್ರಣ ತಪ್ಪಿ ಕಾರೊಂರು ರಸ್ತೆ ಬದಿಯ ಚರಂಡಿಗೆ ಬಿದ್ದ ಘಟನೆ ಬೆಳ್ಮಣ್ ಸಮೀಪದ ಕೆದಿಂಜೆ ಪಕಳ ಚರ್ಚ್ ಬಳಿ ನಡೆದಿದೆ.
ಭಾನುವಾರ ತಡರಾತ್ರಿ ಘಟನೆ ನಡೆದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರ್ಕಳ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಮಂಗಳೂರು ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರು ಎನ್ನಲಾಗಿದೆ. ಗಾಯಾಳುಗಳನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಡಬ: ಇಚ್ಲಂಪಾಡಿಯಲ್ಲಿ ನದಿ ನೀರಿಗೆ ಬಿದ್ದು ಕೃಷಿಕ ಸಾವು
ಕಡಬ, ಜು 10 :ಹೊಳೆಗೆ ಬಿದ್ದು ಕೃಷಿಕರೋರ್ವರು ಮೃತಪಟ್ಟ ಘಟನೆ ಕಡಬ ಸಮೀಪದ ಇಚ್ಲಂಪಾಡಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಇಚ್ಲಂಪಾಡಿ ಗ್ರಾಮದ ಕುಡಾಲ ನಿವಾಸಿ ಕೃಷ್ಣಪ್ಪ ಗೌಡ ಯಾನೆ ಕಿಟ್ಟಣ್ಣ (60) ಎಂದು ಗುರುತಿಸಲಾಗಿದೆ.
ಜು.9ರಂದು ಮಧ್ಯಾಹ್ನ ಇಚ್ಲಂಪಾಡಿಯ ಕೊಕ್ಕೊ ಕಾಡಿನ ಹೊಳೆಬದಿಗೆ ಹೋದವರು ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಮನೆಯವರು ಹೊಳೆಯಲ್ಲಿ ಹುಡುಕಾಟ ನಡೆಸಿದ್ದ ವೇಳೆ ಅವರ ಚಪ್ಪಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ರಾತ್ರಿ ತನಕ ಹೊಳೆ ಬದಿ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ದೊರೆತಿರಲಿಲ್ಲ.
ಜು.10ರಂದು ಬೆಳಿಗ್ಗೆ ಹೊಳೆಬದಿ ಮತ್ತೆ ಹುಡುಕಾಟ ನಡೆಸಿದಾಗ ಗುಂಡ್ಯಹೊಳೆ ಸೇರುವಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿರುವುದಾಗಿ ತಿಳಿದುಬಂದಿದೆ.