ಶೆಟ್ಟರ್ ಯಾಕೆ ಬಿಜೆಪಿಗೆ ಹೋಗಿದ್ದಾರೆ ಗೊತ್ತಿಲ್ಲ - ನನ್ನ ನಿಲುವು ಸ್ಪಷ್ಟ, ನಾನು ಬಿಜೆಪಿಗೆ ಹೋಗಲ್ಲ: ಲಕ್ಷ್ಮಣ್ ಸವದಿ
ಬೆಂಗಳೂರು: ನನ್ನ ನಿಲುವು ಸ್ಪಷ್ಟ. ನಾನು ಬಿಜೆಪಿಗೆ ಹೋಗಲ್ಲ ಎಂದು ಶಾಸಕ ಲಕ್ಷ್ಮಣ್ ಸವದಿ (Laxman Savadi) ಹೇಳಿದ್ದಾರೆ.
ಜಗದೀಶ್ ಶೆಟ್ಟರ್ (Jagadish Shettar) ಬೆನ್ನಲ್ಲೇ ಸವದಿ ಕೂಡ ಬಿಜೆಪಿ ಸೇರುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು, ಅವರು ಒಟ್ಟಿಗೆ ನಿರ್ಧಾರ ಮಾಡಿರಲಿಲ್ಲ. ನಾನು ಮೊದಲು ಕಾಂಗ್ರೆಸ್‍ಗೆ ಬಂದೆ. ಟಿಕೆಟ್ ಸಿಗದ ಕಾರಣ ಅವರು ನಂತರ ಬಂದರು. ಯಾಕೆ ಹೋಗಿದ್ದಾರೆ ಅಂತ ಗೊತ್ತಿಲ್ಲ, ಅವರನ್ನೇ ಕೇಳಬೇಕು. ನನ್ನನ್ನ ಬಿಜೆಪಿ ಸಂಪರ್ಕ ಮಾಡಿಲ್ಲ, ಆ ಪ್ರಶ್ನೆಯೇ ಇಲ್ಲ. ಬಿಜೆಪಿಗೆ ಲೋಕಸಭೆ ಅಗತ್ಯ, ಅನಿವಾರ್ಯ ಇದೆ. ಹಾಗಾಗಿ ಎಲ್ಲರನ್ನ ಸಂಪರ್ಕ ಮಾಡುತ್ತಿದ್ದಾರೆ. ನಾನು ಎಲ್ಲೂ ಹೋಗಲ್ಲ. ಇದು ನನ್ನ ತೀರ್ಮಾನ ಎಂದರು.
ರಾಷ್ಟ್ರೀಯ ಪಕ್ಷಗಳು ಬ್ಯಾಲೆನ್ಸ್ ಆಗಿರುತ್ತೆ. ನನ್ನಿಂದಲೇ ಎಲ್ಲಾ ಆಗುತ್ತೆ ಅನ್ನೋಕೆ ಆಗಲ್ಲ. ಶೆಟ್ಟರ್ ಹೋಗಿರೋದು ದೊಡ್ಡ ಬದಲಾವಣೆ ಆಗೋದಿಲ್ಲ ಅನಿಸುತ್ತೆ. ಶೆಟ್ಟರ್ ವೈಯಕ್ತಿಕ ವಿಚಾರವಾಗಿ ನಿರ್ಧಾರ ಮಾಡಿದ್ದಾರೆ. ನನ್ನ ನಿರ್ಧಾರ ಸ್ಪಷ್ಟವಾಗಿದೆ. ನಾನು ಎಲ್ಲೂ ಹೋಗಲ್ಲ ಎಂದರು.
ಅವರ ನಿರ್ಧಾರ ಗೊತ್ತಿಲ್ಲ: ಈಗ ಯಾಕೆ ಬಿಜೆಪಿಗೆ ಹೋಗಿದ್ದಾರೆ ಅಂತ ಗೊತ್ತಿಲ್ಲ. ನಾನು ಅವರು ಸ್ನೇಹಿತರು. ದಿನ ನಾವಿಬ್ಬರು ಮಾತನಾಡುತ್ತೇವೆ. ಆದರೆ ಅವರು ಈ ನಿರ್ಧಾರ ಮಾಡ್ತಾರೆ ಅಂತ ಗೊತ್ತಿರಲಿಲ್ಲ. ಲೋಕಸಭೆ ಚುನಾವಣಾ (Loksabha Election) ಹಿನ್ನೆಲೆ ಅವರಿಗೆ ನಮ್ಮ ಅನಿರ್ವಾಯತೆ ಇದೆ. ಹಾಗಾಗಿ ಸಂಪರ್ಕ ಮಾಡ್ತಾ ಇದ್ದಾರೆ ಎಂದ ಅವರು, ಸಚಿವ ಸ್ಥಾನ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದರ ಬಗ್ಗೆ ಈಗ ಮಾತನಾಡೋದು ಸೂಕ್ತ ಅಲ್ಲ. ಪಕ್ಷ ಏನು ಹೇಳುತ್ತೋ ಅದನ್ನ ಮಾಡುತ್ತೇನೆ ಎಂದು ಹೇಳಿದರು.
ಇದೇ ವೇಳೆ ಬುಧವಾರ ಸಿಎಂ ಭೇಟಿ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಕ್ಷೇತ್ರದ ಅನುದಾನ ವಿಚಾರವಾಗಿ ಭೇಟಿಯಾಗಿದ್ದೆ. ಕೃಷಿ ಕಾಲೇಜಿನ ಬಗ್ಗೆ ಬಜೆಟ್ ನಲ್ಲಿ ಅನುದಾನ ಬಿಡುಗಡೆ ಸಂಬಂಧ ಚರ್ಚಿಸಲು ಹೋಗಿದ್ದೆ. ಬೇರೆ ರಾಜಕೀಯ ಚರ್ಚೆ ಇಲ್ಲ. ದೆಹಲಿಗೆ ಹೋಗುವುದಾದರೆ ಹೇಳಿಯೇ ಹೋಗುತ್ತೇನೆ. ಎಂದರು.
ಸಿದ್ಧಾಂತಕ್ಕೆ ಬದ್ಧರಾದವರು ಬೇರೆ ಪಕ್ಷಕ್ಕೆ ಒಗ್ಗಲ್ಲ: ಶೆಟ್ಟರ್ ಬಿಜೆಪಿಗೆ ಮರಳಿದ್ದಕ್ಕೆ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ
ಉಡುಪಿ: ಜಗದೀಶ್ ಶೆಟ್ಟರ್ (Jagadish Shettar) ಬಿಜೆಪಿಗೆ (BJP) ಮರಳುವ ನಿರೀಕ್ಷೆ ಇತ್ತು. ಅವರು ನಮ್ಮ ಸಿದ್ಧಾಂತದ ಜೊತೆಗೆ ಸುದೀರ್ಘ ಕಾಲ ಗುರುತಿಸಿಕೊಂಡಿದ್ದವರು. ಸೈದ್ಧಾಂತಿಕ ಹಿನ್ನೆಲೆಯವರಿಗೆ ಬೇರೆ ಪಕ್ಷ ಒಗ್ಗುವುದಿಲ್ಲ ಎಂದು ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೆಟ್ಟರ್ ಆಗಮನದಿಂದ ಪಕ್ಷದ ಶಕ್ತಿ ವೃದ್ಧಿಯಾಗುತ್ತದೆ. ಇದರಿಂದ ನಮ್ಮ ವಿಶ್ವಾಸ ಹೆಚ್ಚಾಗಿದೆ. ಮತ್ತಷ್ಟು ನಾಯಕರು ಬಿಜೆಪಿಗೆ ಮರಳುತ್ತಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಶೆಟ್ಟರ್ ಸುದೀರ್ಘ ರಾಜಕೀಯ ಅನುಭವಿ ಮತ್ತು ಮುತ್ಸದ್ದಿ. ಅವರು ಜನಸಂಘ ಕಾಲದಿಂದ ಬಿಜೆಪಿ ಕಟ್ಟಿದವರು. ಅವರು ಪಕ್ಷಕ್ಕೆ ಮರಳಿರುವುದು ಸಂತೋಷ ಹಾಗೂ ಸಮಾಧಾನ ತಂದಿದೆ. ಅವರು ಬಿಜೆಪಿಯ ಪರಮೋಚ್ಚ ನಾಯಕರನ್ನು ಎಂದೂ ಟೀಕಿಸಿಲ್ಲ. ಆರೋಗ್ಯಕರ ಟೀಕೆಗಳನ್ನು ಮಾತ್ರ ಮಾಡುತ್ತಿದ್ದರು. ಶೆಟ್ಟರ್ ಬಿಜೆಪಿಗೆ ಮರಳಿದ ಕ್ರೆಡಿಟ್ ಪಕ್ಷಕ್ಕೆ ಸಲ್ಲುತ್ತದೆ ಎಂದಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ವೇಳೆ, ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್‍ಗೆ ಸೇರಿದ್ದರು. ಇದೀಗ, ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇಂದು (ಗುರುವಾರ) ದೆಹಲಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಜೊತೆಯಲ್ಲಿ ಅಮಿತ್ ಶಾ ಅವರನ್ನು ಭೇಟಿಯಾಗಿ ಸುದೀರ್ಘವಾದ ಚರ್ಚೆ ನಡೆಸಿದ್ದಾರೆ. ಈ ವೇಳೆ ಹಾವೇರಿ ಅಥವಾ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಒಂದು ಕ್ಷೇತ್ರಕ್ಕೆ ಟಿಕೆಟ್ ಕೊಡಿಸುವ ಭರವಸೆಯನ್ನು ಹೈಕಮಾಂಡ್ ನೀಡಿದೆ.