ಬಿಜೆಪಿ ನಾಯಕರ ನಿದ್ದೆಗೆಡಿಸಿದ ಡಿಕೆ ಶಿವಕುಮಾರ್-ತೇಜಸ್ವಿನಿ ಅನಂತಕುಮಾರ್ ಭೇಟಿ!
ಬೆಂಗಳೂರು- DK Sivakumar – Tejaswini Ananthkumar: ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ (DK Sivakumar – Tejaswini Ananthkumar) ಅವರು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಕುಮಾರಕೃಪ ಅತಿಥಿ ಗೃಹಕ್ಕೆ ಆಗಮಿಸಿದ ತೇಜಸ್ವಿನಿ ಅನಂತಕುಮಾರ್ ಸುಮಾರು 45 ನಿಮಿಷಗಳ ಕಾಲ ಚರ್ಚೆ ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಯಾವುದೇ ಪ್ರತಿಕ್ರಿಯೆ ನೀಡದೇ ತೇಜಸ್ವಿನಿ ಅನಂತಕುಮಾರ್ ತೆರಳಿದ್ದಾರೆ.
ಇತ್ತೀಚೆಗೆ ಬಿಜೆಪಿಯ ಹಾಲಿ, ಮಾಜಿ ಶಾಸಕರು ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನ ಭೇಟಿಯಾಗುತ್ತಿದ್ದಾರೆ. ಬಿಜೆಪಿ ನಾಯಕರ ಜೊತೆ ಡಿ.ಕೆ ಶಿವಕುಮಾರ್ ಸಂಪರ್ಕ ಸಾಧಿಸುತ್ತಿರೋದು ಆಪರೇಷನ್ ಹಸ್ತದ ರಾಜಕೀಯ ಗರಿಗೆದರುವಂತೆ ಮಾಡಿದೆ. ಲೋಕಸಭಾ ಚುನಾವಣೆಗೂ ಮುನ್ನ ಆಪರೇಷನ್ ರಾಜಕೀಯ ನಡೆಯೋ ಸಾಧ್ಯತೆಗಳಿದೆ. ಈ ಬೆಳವಣಿಗೆಯ ಮಧ್ಯೆ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಅವರು ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿರೋದು ಕುತೂಹಲ ಕೆರಳಿಸಿದೆ.
ತೇಜಸ್ವಿನಿ ಅನಂತಕುಮಾರ್ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. 2019ರಲ್ಲಿ ಕೈ ತಪ್ಪಿದಂತೆ 2024ರ ಲೋಕಸಭಾ ಚುನಾವಣೆಯಲ್ಲೂ ತೇಜಸ್ವಿನಿಯವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ಕೊಡುವುದು ಅನುಮಾನ ಎನ್ನಲಾಗ್ತಿದೆ. ಈ ಬೆಳವಣಿಗೆಯ ಮಧ್ಯೆ ತೇಜಸ್ವಿನಿ ಅನಂತಕುಮಾರ್ ಅವರು ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಇನ್ನೂ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಹಿನ್ನಲೆ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಭಾಗದಲ್ಲಿ ಕನಿಷ್ಠ ಎರಡು ಕ್ಷೇತ್ರಗಳನ್ನ ಗೆಲ್ಲುವ ಮಾಸ್ಟರ್ ಪ್ಲಾನ್ ಬಗ್ಗೆ ಡಿಸಿಎಂ ಡಿ ಕೆ ಶಿವಕುಮಾರ್ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಮಾಜಿ ಕೇಂದ್ರ ಸಚಿವ ಅನಂತ ಕುಮಾರ್ ರವರ ಪತ್ನಿ ತೇಜಸ್ವಿನಿ ಅನಂತ ಕುಮಾರ್ ಅವರನ್ನ ಕಾಂಗ್ರೆಸ್ ಪಕ್ಷಕ್ಕೆ ಕರೆತರುವ ಮೂಲಕ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಕಣಕ್ಕಿಳಿಸುವ ಚಿಂತನೆಯನ್ನ ಕಾಂಗ್ರೆಸ್ ನಾಯಕರು ಹಾಕಿಕೊಂಡಿದ್ದಾರೆ ಎನ್ನಲಾಗಿದ್ದು, ಡಿಕೆ ಶಿವಕುಮಾರ್ ಅವರನ್ನ ಸೋಮವಾರ ತೇಜಸ್ವಿನಿ ಅನಂತಕುಮಾರ್ ಭೇಟಿ ಮಾಡಿರುವುದು ಮತ್ತೆ ತೆರೆಯ ಮುಂದೆ ಬಂದಿವೆ.
ಈಗಾಗಲೇ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ದಿವಂಗತ ಮಾಜಿ ಕೇಂದ್ರ ಸಚಿವ ಅನಂತ ಕುಮಾರ್ ಹಾಗೂ ತೇಜಸ್ವಿನಿ ಅನಂತಕುಮಾರ್ ಅವರ ವರ್ಚಸ್ಸು ಹೆಚ್ಚಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಅವರನ್ನ ಕರೆತರುವ ಮೂಲಕ ಹಾಲಿ ಸಂಸದ ತೇಜಸ್ವಿ ಸೂರ್ಯ ವಿರುದ್ದ ಕಣಕ್ಕಿಳಿಸಲು ಕಾಂಗ್ರೆಸ್ ನಾಯಕರು ಪ್ಲಾನ್ ನಡೆಸಿದ್ದಾರೆ ಎನ್ನಲಾಗಿದೆ. ಇನ್ನೂ ಬ್ರ್ಯಾಂಡ್ ಬೆಂಗಳೂರು ಕನಸು ಕಾಣುತ್ತಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬೆಂಗಳೂರಿನ 4 ಸ್ಥಾನಗಳಲ್ಲಿ ಕನಿಷ್ಠ 2 ಗೆಲ್ಲುವ ಗುರಿ ಹೊಂದಿದ್ದಾರೆ. ತೇಜಸ್ವಿನಿ ಅನಂತಕುಮಾರ್ ಬಂದರೆ ಬ್ರಾಹ್ಮಣ, ಒಕ್ಕಲಿಗ, ಕಾಂಗ್ರೆಸ್ ಮತಗಳಿಂದ ಗೆಲುವು ಸುಲಭ ಎಂಬುವುದು ಡಿಕೆ ಶಿವಕುಮಾರ್ ಅವರ ಲೆಕ್ಕಾಚಾರವಾಗಿದೆ.
ರಾಜ್ಯ ರಾಜಕೀಯದ ಕುತೂಹಲದ ಮಧ್ಯೆ ಡಿ.ಕೆ ಶಿವಕುಮಾರ್ ಹಾಗೂ ತೇಜಸ್ವಿನಿ ಅನಂತಕುಮಾರ್ ಅವರು ಮಹತ್ವದ ಚರ್ಚೆ ನಡೆಸಿದ್ದಾರೆ. ದಿವಂಗತ ಅನಂತಕುಮಾರ್ ಸ್ಮರಣೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಇದರ ಜೊತೆಗೆ ಅದಮ್ಯ ಚೇತನ ಸಂಸ್ಥೆಗೆ ಸಂಬಂಧಿಸಿದ ಬಾಕಿ ಬಿಲ್ ಬಿಡುಗಡೆ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ಡಿ ಕೆ ಶಿವಕುಮಾರ್ ಟ್ವೀಟ್ ಮೂಲಕ ಹೇಳಿದ್ದೇನು? ಬಿಜೆಪಿಯ ಹಿರಿಯ ನಾಯಕರಾಗಿದ್ದ ದಿ.ಅನಂತ್ ಕುಮಾರ್ ಅವರ ಪತ್ನಿ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರು ಇಂದು ನನ್ನನ್ನು ಕುಮಾರ ಕೃಪಾ ಅತಿಥಿ ಗೃಹದಲ್ಲಿ ಭೇಟಿಯಾಗಿ ರಾಜ್ಯ ರಾಜಕೀಯ ವಿಚಾರಗಳ ಕುರಿತು ಚರ್ಚಿಸಿದರು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.