ಬಿಜೆಪಿಯ ಮಾಜಿ ಸಿಎಂಗೆ ಕಾಂಗ್ರೆಸ್ ಟಿಕೆಟ್ ನೀಡಲು ಡಿಕೆ ಶಿವಕುಮಾರ್ ಗಾಳ?
ಬೆಂಗಳೂರು, ಮಾರ್ಚ್ 18: ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿರುವ ಬಿಜೆಪಿ ಸಂಕಷ್ಟಕ್ಕೆ ಸಿಲುಕಿದೆ. ತಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ. ತಮ್ಮ ಮನೆಗೆ ಅನ್ಯಾಯವಾಗಿದೆ.. ಹೀಗೆ ಹಲವು ಕಾರಣಗಳನ್ನಿಟ್ಟುಕೊಂಡು ಬಿಜೆಪಿಯ ಪ್ರಮುಖ ನಾಯಕರು ಒಳಗೊಳಗೆ ಕೆಂಡಕಾರುತ್ತಿದ್ದಾರೆ. ಆದರೆ, ಕೆಎಸ್ ಈಶ್ವರಪ್ಪ ಮಾತ್ರ ಬಹಿರಂಗವಾಗಿ ಬಂಡಾಯ ನಿಂತಿದ್ದಾರೆ.
ಈ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಅವರಿಗೆ ಟಿಕೆಟ್ ಮಿಸ್ ಆಗಿದ್ದು, ಬಂಡಾಯ ಏಳುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಅದೇ ಕಾರಣಕ್ಕೆ ಅವರನ್ನು ತಮ್ಮತ್ತ ಸೆಳೆಯಲು ಕಾಂಗ್ರೆಸ್ ಕೂಡ ಪ್ರಯತ್ನ ಪಡುತ್ತಿದೆ. ಒಕ್ಕಲಿಗ ನಾಯಕರಾಗಿರುವ ಅವರಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಫರ್ ನೀಡಿದ್ದಾರೆ.
ಉತ್ತರ ಭಾರತದಲ್ಲಿ ಟಿಕೆಟ್ ಹಂಚಿಕೆ ಮಾಡಿದಂತೆಯೇ ರಾಜ್ಯದಲ್ಲಿಯೂ ಕೂಡ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ 28 ಸ್ಥಾನಗಳನ್ನು ಗೆಲ್ಲಲೇಬೇಕೆಂದು ಮಾಸ್ಟರ್ ಪ್ಲ್ಯಾನ್ ಮಾಡಿ ಟಿಕೆಟ್ ಹಂಚಿಕೆ ಮಾಡಲಾಗಿದೆ. ಆದರೆ, ಇದು ಕರ್ನಾಟಕದಲ್ಲಿ ವರ್ಕ್ ಆದ ಹಾಗೆ ಕಾಣಿಸುತ್ತಿಲ್ಲ. ಹಲವು ನಾಯಕರು ಟಿಕೆಟ್ ಹಂಚಿಕೆ ಬಗ್ಗೆ ನೇರವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಉತ್ತರ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರಿಗೆ ಈ ಬಾರಿ ಟಿಕೆಟ್ ಮಿಸ್ ಆಗಿದೆ. ಅದೇ ಜಾಗದಲ್ಲಿ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಅವರನ್ನು ನಿಲ್ಲಿಸಲಾಗಿದೆ. ಮೊದಲು ರಾಜಕೀಯದಿಂದ ದೂರ ಇರುತ್ತೇನೆ ಎಂದಿದ್ದ ಸದಾನಂದ ಗೌಡರು ಬಳಿಕ ನಾನು ಟಿಕೆಟ್ ಆಕಾಂಕ್ಷಿ ಎಂದು ಬಾಂಬ್ ಹಾಕಿದ್ದರು. ಆದರೂ ಟಿಕೆಟ್ ಕೊಟ್ಟಿಲ್ಲ. ಟಿಕೆಟ್ ಕೈತಪ್ಪಿರುವುದರಿಂದ ಅಸಮಾಧಾನಗೊಂಡಿದ್ದಾರೆ. ಅವರಿಗೆ ಡಿಕೆ ಶಿವಕುಮಾರ್ ಆಫರ್ ನೀಡಿದ್ದಾರೆ.ಟಿಕೆಟ್ ಹಂಚಿಕೆ ಬಳಿಕ ಸ್ವಪಕ್ಷದ ಮೇಲೆ ಲಿಂಗಾಯತ, ಕುರುಬ ಸಮುದಾಯ ಬಂಡಾಯವೆದ್ದಿದೆ. ಈಗ ಡಿವಿ ಸದಾನಂದಗೌಡರು ಕೂಡ ಬಂಡಾಯವೆದ್ದರೆ ರಾಜ್ಯದ ಪ್ರಮುಖ ಸಮುದಾಯವೊಂದರ ಬಂಡಾಯವನ್ನು ಬಿಜೆಪಿ ಎದುರಿಸಬೇಕಿದೆ. ಇದನ್ನೇ ಎನ್‌ಕ್ಯಾಚ್ ಮಾಡಿಕೊಳ್ಳಲು ಕಾಂಗ್ರೆಸ್ ಮುಂದಾಗಿದ್ದು, ಸದಾನಂದ ಗೌಡರನ್ನು ಪಕ್ಷಕ್ಕೆ ಎಳೆದು ತರುವ ಕೆಲಸ ತೆರೆಮರೆಯಲ್ಲಿ ನಡೆಯುತ್ತಿದೆ.
ಡಿ.ವಿ ಸದಾನಂದ ಗೌಡ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೆ ಒಕ್ಕಲಿಗ ಮತಗಳನ್ನು ಪಕ್ಷಕ್ಕೆ ಸೆಳೆಯಬಹುದು ಎಂಬುದು ಡಿಕೆ ಶಿವಕುಮಾರ್ ಲೆಕ್ಕಾಚಾರ. ಟಿಕೆಟ್ ಘೋಷಿಸದ ಬೆಂಗಳೂರು ಉತ್ತರ, ಮೈಸೂರು, ದಕ್ಷಿಣ ಕನ್ನಡ ಈ ಮೂರರಲ್ಲಿ ಯಾವುದಾರು ಕ್ಷೇತ್ರದಿಂದ ಡಿ.ವಿ ಸದಾನಂದ ಗೌಡ ಅವರನ್ನು ಕಣಕ್ಕಿಳಿಸುವ ಯೋಚನೆಯಲ್ಲಿದೆ ಕಾಂಗ್ರೆಸ್. ಈ ಬಗ್ಗೆ ಅವರಿಗೆ ಆಫರ್ ನೀಡಲಾಗಿದೆ. ಹೀಗಾಗಿ ಇಷ್ಟು ವರ್ಷ ಎಲ್ಲವನ್ನೂ ಕೊಟ್ಟಿರುವ ಪಕ್ಷವನ್ನು ಬಿಟ್ಟು ಡಿ.ವಿ ಸದಾನಂದ ಗೌಡ ಕೈ ಹಿಡಿತಾರಾ ಎಂಬುದನ್ನು ಕಾದುನೋಡಬೇಕಿದೆ.