ಡಿಪ್ಲೊಮಾ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2023ನೇ ಸಾಲಿನ ಎರಡನೇ ವರ್ಷದ / ಮೂರನೇ ಸೆಮಿಸ್ಟರ್ ನ ಎಂಜಿನಿಯರಿಂಗ್ / ತಂತ್ರಜ್ಞಾನ ಕೋರ್ಸುಗಳಿಗೆ ಪ್ರವೇಶಕ್ಕಾಗಿ ಅರ್ಹ ಡಿಪ್ಲೊಮಾ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, 10-09-2023 ರಂದು ಡಿಸಿಇಟಿ-2023 ನಡೆಸಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಶುಕ್ರವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಹ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ನಿಗದಿತ ಲಿಂಕ್ ಅನ್ನು ಆಯ್ಕೆ ಮಾಡಿಕೊಂಡು 31-07-2023 ರಿಂದ 13 -08 -2023ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಆಯ್ಕೆಯಾದವರಿಗೆ ಹಗಲು ಇಂಜಿನಿಯರಿಂಗ್ ಕಾಲೇಜ್ ಗಳಲ್ಲಿ ಪ್ರವೇಶಾವಕಾಶ ಕೊಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ವಿವರಗಳಿಗಾಗಿ ಪ್ರಾಧಿಕಾರದ ವೆಬ್ ಸೈಟ್ http://kea.kar.nic.in ನೋಡಲು ಸೂಚಿಸಲಾಗಿದೆ.
ಗ್ಯಾರಂಟಿ ಮಂಜೂರಾತಿ ಪತ್ರದಲ್ಲಿ ಸಿಎಂ, ಡಿಸಿಎಂ ಫೋಟೊ ತೆಗೆಯಿರಿ: ಗಡಾದ
ಬೆಳಗಾವಿ(ಜು.29): ರಾಜ್ಯ ಸರ್ಕಾರದ ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಮಂಜೂರಾತಿ ಆದೇಶ ಪತ್ರದಲ್ಲಿ ಸಚಿವರ ಭಾವಚಿತ್ರ ತೆಗೆಯಬೇಕು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರದಲ್ಲಿನ ಸಚಿವರ ಭಾವಚಿತ್ರ ತೆಗೆಯಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಪತ್ರ ಬರೆಯಲಾಗಿದೆ ಎಂದರು.
ಮಂಜೂರಾತಿ ಪತ್ರದಲ್ಲಿ ಸಿಎಂ, ಡಿಸಿಎಂ ಮತ್ತು ಸಚಿವರ ಭಾವಚಿತ್ರ ಪ್ರಕಟಿಸಲಾಗಿದೆ. ಸರ್ಕಾರದ ಐದು ಗ್ಯಾರಂಟಿ ಯೋಜನೆಯನ್ನು ನಾನು ಸ್ವಾಗತಿಸುತ್ತೇನೆ. ಆದರೆ ಸಿಎಂ, ಡಿಸಿಎಂ, ಸಚಿವರ ಭಾವಚಿತ್ರ ಪ್ರಕಟಿಸಿ ನ್ಯಾಯಾಂಗ ನಿಂದನೆ ಮಾಡಲಾಗುತ್ತಿದೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ಬಡವರ ಯೋಜನೆಯ ಅನುಷ್ಠಾನವನ್ನು ಸರ್ಕಾರ ಮಾಡುತ್ತಿದೆ. ಹೀಗಿದ್ದರೂ ಸಚಿವರ ಭಾವಚಿತ್ರ ಹಾಕಿರುವುದನ್ನು ನೋಡಿದರೆ ತಮ್ಮ ಸ್ವಂತ ಜೇಬಿನಿಂದ ಯೋಜನೆಗೆ ಹಣ ಕೊಟ್ಟಂತೆ ಕಾಣುತ್ತಿದೆ ಎಂದು ಕಿಡಿಕಾರಿದರು.
ಸುಪ್ರೀಂ ಕೋರ್ಟ್ ಸರ್ಕಾರದ ಯೋಜನೆಯಲ್ಲಿ ಸಚಿವರ ಭಾವಚಿತ್ರ ಹಾಕಲು ಅವಕಾಶ ಇಲ್ಲವೆಂದು ಹೇಳಿದೆ. ಆದರೂ ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ ಸಚಿವರ ಭಾವಚಿತ್ರ ಹಾಕಲಾಗುತ್ತಿದೆ. ಇದರಿಂದಾಗಿ ನ್ಯಾಯಾಂಗ ನಿಂದನೆಯಾಗುತ್ತಿದೆ. ತಕ್ಷಣವೇ ಭಾವಚಿತ್ರ ಇರುವ ಆದೇಶ ಪತ್ರ ವಾಪಸ್ ಪಡೆಯಬೇಕು. ಯಾವುದೇ ಭಾವಚಿತ್ರ ಇರದ ಆದೇಶ ಪತ್ರಗಳನ್ನು ಫಲಾನುಭವಿಗಳಿಗೆ ನೀಡಬೇಕು. ಇಲ್ಲದಿದ್ದರೆ ಸಚಿವರ, ಸರ್ಕಾರದ ವಿರುದ್ಧ ಹೈಕೋರ್ಚ್‌ನಲ್ಲಿ ಪಿಐಎಲ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.