ಐಶ್ವರ್ಯ ರೈ ಬಗ್ಗೆ ಅವಹೇಳನಕಾರಿ ಹೇಳಿಕೆ ; ವ್ಯಾಪಕ ಟೀಕೆ ಬಳಿಕ ಕ್ಷಮೆ ಕೇಳಿದ ಪಾಕ್ ಮಾಜಿ ಕ್ರಿಕೆಟಿಗ..!
Twitter
Facebook
LinkedIn
WhatsApp
ನಟಿ ಐಶ್ವರ್ಯ ರೈ ಅವರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡಿದ್ದಾರೆ. ರಜಾಕ್ ಹೇಳಿಕೆ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾದ ನಂತರ ಎಚ್ಚೆತ್ತು ಕ್ಷಮೆ ಕೇಳಿದ್ದು, ತಮ್ಮ ಹೇಳಿಕೆ ಉದ್ದೇಶಪೂರ್ವಕವಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
ಮಂಗಳವಾರದ ತಡರಾತ್ರಿಯಲ್ಲಿ ಪೋಸ್ಟ್ ಮಾಡಿದ 27 ಸೆಕೆಂಡುಗಳ ವೀಡಿಯೊದಲ್ಲಿ, ರಜಾಕ್ ಕ್ರಿಕೆಟ್ ತರಬೇತಿಯ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ‘ಉದ್ದೇಶಪೂರ್ವಕವಲ್ಲದ’ ಬಾಯ್ತಪ್ಪಿ ಹೇಳಿಕೆ ನೀಡಿದ್ದೇನೆ ಎಂದಿದ್ದಾರೆ. ಅವರು ಹೇಳಿಕೆ ನೀಡುವಾಗ ಸಹ ಮಾಜಿ ಕ್ರಿಕೆಟಿಗರಾದ ಶಾಹಿದ್ ಅಫ್ರಿದಿ ಮತ್ತು ಉಮರ್ ಗುಲ್ ಕೂಡ ಜೊತೆಗೆ ಕುಳಿತಿದ್ದರು, ಅವರು ಈ ಹೇಳಿಕೆಯನ್ನು ನೋಡಿ ನಗುತ್ತಿದ್ದರು.
ಅಬ್ದುಲ್ ರಜಾಕ್ ಹೇಳಿದ್ದೇನು?
“ನಾನು ಅಬ್ದುಲ್ ರಜಾಕ್… ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ನಾವು ಕ್ರಿಕೆಟ್ ತರಬೇತಿ ಮತ್ತು ಉದ್ದೇಶಗಳ ಕುರಿತು ಚರ್ಚಿಸುತ್ತಿದ್ದೆವು. ಬಾಯ್ತಪ್ಪಿ, ತಪ್ಪಾಗಿ ಐಶ್ವರ್ಯಾ ರೈ ಹೆಸರನ್ನು ತೆಗೆದುಕೊಂಡೆ. ನಾನು ಅವರ ಬಳಿ ವೈಯಕ್ತಿಕವಾಗಿ ಕ್ಷಮೆಯಾಚಿಸುತ್ತೇನೆ. ಯಾರನ್ನೂ ನೋಯಿಸುವ ಉದ್ದೇಶ ನನಗಿರಲಿಲ್ಲ. ನಾನು ಬೇರೆ ಉದಾಹರಣೆಯನ್ನು ನೀಡಬೇಕಾಗಿತ್ತು, ಆದರೆ ತಪ್ಪಾಗಿ ಅವರ ಹೆಸರನ್ನು ಬಳಸಿದ್ದೇನೆ,” ಎಂದು ರಜಾಕ್ ಅವರು ಯೂಟ್ಯೂಬ್‌ನ ಕ್ಯಾಪಿಟಲ್ ಟಿವಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರದರ್ಶನದ ಬಗ್ಗೆ ಮಾತನಾಡುವ ಸಂದರ್ಭದಲ್ಲಿ, “ನಾನು ಐಶ್ವರ್ಯ ರೈ ಅವರನ್ನು ಮದುವೆಯಾಗಿ, ನಮಗೆ ಸುಂದರವಾದ ಮಕ್ಕಳಾಗುತ್ತವೆ ಎಂದು ನೀವು ಭಾವಿಸಿದರೆ, ಅದು ಸಾಧ್ಯವಾಗದ ಮಾತು. ಹೀಗಾಗಿ ಸರಿಯಾದ ಉದ್ದೇಶ ಇಟ್ಟುಕೊಳ್ಳಬೇಕು. ಮೊದಲು ನಿಮ್ಮ ಉದ್ದೇಶಗಳನ್ನು ಸರಿಪಡಿಸಿಕೊಳ್ಳಬೇಕು” ಎಂದು ರಜಾಕ್ ಹೇಳಿದ್ದರು.
ತರಾಟೆಗೆ ತೆಗೆದುಕೊಂಡ ಶೋಯೆಬ್ ಅಖ್ತರ್
ಇನ್ನು ರಜಾಕ್ ಹೇಳಿಕೆಗೆ ಪಾಕಿಸ್ತಾನದ ಮಾಜಿ ಆಟಗಾರ ಶೋಯೆಬ್ ಅಖ್ತರ್ ಆಕ್ರೋಶ ವ್ಯಕ್ತಪಡಿಸಿದ್ದರು. “ರಝಾಕ್ ಮಾಡಿದ ಅನುಚಿತ ಜೋಕ್ ಹೋಲಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಯಾವ ಹೆಣ್ಣಿಗೂ ಈ ರೀತಿ ಅಗೌರವ ತೋರಬಾರದು. ಅವರ ಪಕ್ಕದಲ್ಲಿ ಕುಳಿತಿರುವ ಜನರು ಚಪ್ಪಾಳೆ ತಟ್ಟುವ ಬದಲು ತಕ್ಷಣವೇ ಧ್ವನಿ ಎತ್ತಬೇಕಿತ್ತು” ಎಂದು ಅಖ್ತರ್ ಎಕ್ಸ್‌ನಲ್ಲಿ ಹೇಳಿದ್ದಾರೆ.
ಇದಕ್ಕೂ ಮೊದಲು, ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ಅವರ ಹಳೆಯ ವೀಡಿಯೊ ವೈರಲ್ ಆಗಿದ್ದು, ಮಂಗಳವಾರ ಮತ್ತೊಂದು ವಿವಾದವು ಭುಗಿಲೆದ್ದಿತು, ಅಲ್ಲಿ ಅವರು ಮೌಲಾನಾ ತಾರಿಕ್ ಜಮೀಲ್ ಅವರ ಉಪದೇಶದ ನಂತರ ಭಾರತದ ಸ್ಟಾರ್ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಇಸ್ಲಾಂಗೆ ಮತಾಂತರಗೊಳ್ಳುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದರು.
ಇನ್ನು ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹರ್ಭಜನ್ ಸಿಂಗ್, ನೀವು ಯಾವ ರೀತಿಯ ನಶೆಯಲ್ಲಿ ಮಾತನಾಡುತ್ತಿದ್ದೀರಿ, ನಾನು ಹೆಮ್ಮೆಯ ಭಾರತೀಯ ಮತ್ತು ಹೆಮ್ಮೆಯ ಸಿಖ್. ಈ ಮೂರ್ಖರು ಏನು ಬೇಕಾದರೂ ಮಾತನಾಡುತ್ತಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.