ಅಮೇಥಿಯಲ್ಲಿ ಕಿಶೋರಿ ಲಾಲ್ ಶರ್ಮಾ ವಿರುದ್ಧ ನಿಂತು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದ ಸ್ಮೃತಿ ಇರಾನಿಗೆ ಸೋಲು..!
ಲಕ್ನೋ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿಗೆ ದೊಡ್ಡ ಆಘಾತ ಉಂಟಾಗಿದೆ. ಕಳೆದ ಎರಡು ಸರ್ಕಾರಗಳಲ್ಲಿ ಬಿಜೆಪಿಯಲ್ಲಿ ಶಾಶ್ವತ ಸ್ಥಾನ ಪಡೆದಿರುವ ಪಕ್ಷದ ದೊಡ್ಡ ನಾಯಕಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಮೇಥಿ ಲೋಕಸಭಾ ಕ್ಷೇತ್ರದಿಂದ ಸೋಲನುಭವಿಸಿದ್ದಾರೆ.
ಕಾಂಗ್ರೆಸ್ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಿಂದ ರಾಹುಲ್ ಗಾಂಧಿ ಬದಲಿಗೆ ಸಾಮಾನ್ಯ ಕಾರ್ಯಕರ್ತ ಕಿಶೋರಿ ಲಾಲ್ ಶರ್ಮಾ ಅವರನ್ನು ಕಣಕ್ಕಿಳಿಸಿತ್ತು. ರಾಹುಲ್ ಗಾಂಧಿ ಕುಟುಂಬದ ವಿಶ್ವಾಸಾರ್ಹ ವ್ಯಕ್ತಿ ಎಂದು ಕರೆಸಿಕೊಳ್ಳುವ ಕಿಶೋರಿ ಲಾಲ್ ಶರ್ಮಾ ಅವರು ಸ್ಮೃತಿ ಇರಾನಿಗೆ ಸಕತ್ ಫೈಟ್ ನೀಡಿ, ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಅಮೇಥಿಯಲ್ಲಿ ಮೇ 20 ರಂದು ನಡೆದ ಐದನೇ ಹಂತದ ಚುನಾವಣೆಯಲ್ಲಿ ಅಮೇಥಿಯಲ್ಲಿ ಮತದಾನ ನಡೆದಿತ್ತು. ಈ ವೇಳೆ 54.40% ಮತದಾನವಾಗಿತ್ತು. 2019 ರ ಲೋಕಸಭಾ ಚುನಾವಣೆಯಲ್ಲಿ, ಅಮೇಥಿಯಲ್ಲಿ ಕಾಂಗ್ರೆಸ್ ತನ್ನ ದೊಡ್ಡ ಸೋಲು ಕಂಡಿತ್ತು. ಸ್ಮೃತಿ ಇರಾನಿ 55,000 ಮತಗಳಿಂದ ರಾಹುಲ್ ಗಾಂಧಿಯನ್ನು ಸೋಲಿಸಿದ್ದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಮೇಥಿ ಬದಲಿಗೆ ರಾಯ್ಬರೇಲಿಯಿಂದ ಸ್ಪರ್ಧಿಸಲು ನಿರ್ಧರಿಸಿದಾಗ, ಬಿಜೆಪಿ ವ್ಯಂಗ್ಯವಾಡಿತ್ತು. ಬಿಜೆಪಿ ನಾಯಕಿ ಸ್ಮೃತಿ ಇರಾನಿ ಈಗಾಗಲೇ ತಾನು ಗೆದ್ದೆ ಎಂದು ಹೇಳಿಕೊಂಡಿದ್ದರು. ಆಗ ಕಾಂಗ್ರೆಸ್ ಕಿಶೋರಿ ಲಾಲ್ ಶರ್ಮಾ ಅವರನ್ನು ಕಣಕ್ಕಿಳಿಸಿತ್ತು. ಈ ನಿರ್ಧಾರವು ರಾಜ್ಯ ರಾಜಕೀಯದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು.
ಸ್ಮೃತಿ ಇರಾನಿ ಅವರ ವಿವಾದಗಳು 2014 ರಿಂದ 2016 ರವರೆಗೆ ಮಾನವ ಸಂಪನ್ಮೂಲ ಸಚಿವರಾಗಿದ್ದ ಅವಧಿಯಲ್ಲಿ ಸ್ಮೃತಿ ಇರಾನಿ ಹಲವಾರು ವಿವಾದಗಳಲ್ಲಿ ಭಾಗಿಯಾಗಿದ್ದರು. ಸಂಸತ್ತಿನಲ್ಲಿ ದುರ್ಗಾ ಮಾತೆಯ ಬಗ್ಗೆ ಅವಹೇಳನಕಾರಿ ಟೀಕೆಗಳನ್ನು ಹೊಂದಿರುವ ಕರಪತ್ರವನ್ನು ಅವರು ಓದಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿದವು, ಅವರು ದುರ್ಗೆಯ ಆರಾಧನೆಯನ್ನು ಉಲ್ಲೇಖಿಸಿ ಅವರು ಅದನ್ನು ಕಟುವಾಗಿ ನಿರಾಕರಿಸಿದರು. 2004 ಮತ್ತು 2014 ರಲ್ಲಿ ಆಕೆಯ ಚುನಾವಣಾ ಅಫಿಡವಿಟ್‌ಗಳ ನಡುವೆ ಆಕೆಯ ಶೈಕ್ಷಣಿಕ ಅರ್ಹತೆಗಳ ಬಗ್ಗೆ ಅನೇಕ ಪ್ರಶ್ನೆಗಳು ಎತ್ತಲಾಗಿದೆ.
ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ದಲಿತ ಪಿಎಚ್‌ಡಿ ಸಂಶೋಧನ ವಿದ್ಯಾರ್ಥಿ ರೋಹಿತ್ ವೇಮುಲಾ ಪ್ರಕರಣವನ್ನು ಅವರು ನಿರ್ವಹಿಸಿದ ರೀತಿಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ರೋಹಿತ್ ವಿರುದ್ಧದ ದೂರಿಗೆ ಸಂಬಂಧಿಸಿದಂತೆ ವಿಶ್ವವಿದ್ಯಾನಿಲಯದ ಉಪಕುಲಪತಿಗಳಿಗೆ ಜ್ಞಾಪನೆಗಳನ್ನು ಕಳುಹಿಸುವುದು ಸೇರಿದಂತೆ ಮಾನವ ಸಂಪನ್ಮೂಲ ಸಚಿವಾಲಯ ತೊಡಗಿಸಿಕೊಂಡಿದೆ ಎಂದು ಪ್ರತಿಪಕ್ಷಗಳಿಂದ ಖಂಡನೆಗೆ ಗುರಿಯಾಯಿತು.