ದೀಪಕ್ ರಾವ್, ಫಾಝಿಲ್ ಸೇರಿದಂತೆ ಹತ್ಯೆಗೀಡಾದ ಆರು ಕುಟುಂಬಗಳಿಗೆ 25 ಲಕ್ಷ ಪರಿಹಾರ ವಿತರಿಸಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು; ಕರಾವಳಿಯಲ್ಲಿ ಕೋಮುಗಲಭೆಗಳಿಗೆ ಬಲಿಯಾದ ನಾಲ್ವರ ಕುಟುಂಬಗಳಿಗೆ ಸೋಮವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ಸಿದ್ದರಾಮಯ್ಯ ಅವರು ತಲಾ 25 ಲಕ್ಷ ಮೊತ್ತದ ಪರಿಹಾರ ಚೆಕ್ ಗಳನ್ನು ವಿತರಿಸಿದ್ದಾರೆ.
ಈ ವೇಳೆ ಮಾತನಾಡಿದ ಸಿಎಂ ಅವರು, ಬಿಜೆಪಿ ಅವಧಿಯಲ್ಲಿ ಕೋಮುರಾಜಕಾರಣಕ್ಕೆ ಬಲಿಯಾದ ಬಳಿಕವೂ ಸರ್ಕಾರದ ತಾರತಮ್ಯ ನೀತಿಯಿಂದ ವಂಚನೆಗೆ ಒಳಗಾಗಿದ್ದ ಕುಟುಂಬಗಳಿಗೆ ಚೆಕ್ ನೀಡಿದ್ದೇವೆ.
ಬಿಜೆಪಿಯ ಸಂವಿಧಾನ ವಿರೋಧಿ ತಾರತಮ್ಯ ನೀತಿಯನ್ನು ಅಳಿಸಿದ್ದೇವೆ. ಸರ್ಕಾರ ಸರ್ವರಿಗೂ ಸೇರಿದ್ದು. ಬಿಡಿ ಬಿಡಿಯಾಗಿ ಒಂದು ಜಾತಿ, ಒಂದು ಧರ್ಮದ ಪರವಾಗಿ ವರ್ತಿಸುವುದು ಸಂವಿಧಾನ ವಿರೋಧಿ ಕೃತ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ಸದನದಲ್ಲೇ ಬಿಜೆಪಿಯ ತಾರತಮ್ಯದ ಬಗ್ಗೆ ಧ್ವನಿ ಎತ್ತಿದ್ದೆ. ಕೋಮುಗಲಭೆಗಳಿಗೆ ಬಲಿಯಾದ ಮೃತರ ಹೆಸರಲ್ಲೂ ಬಿಜೆಪಿ ತಾರತಮ್ಯ ನೀತಿಯನ್ನು ಅನುಸರಿಸಿತು. ಮೃತರ ಕುಟುಂಬದವರ ಕಣ್ಣೀರು ಒರೆಸುವುದು ಮತ್ತು ಪರಿಹಾರ ವಿತರಣೆಯಲ್ಲೂ ಹಿಂದಿನ ಸರ್ಕಾರ ತಾರತಮ್ಯವನ್ನು ಮೆರೆದಿತ್ತು. ಹಿಂದಿನ ಬಿಜೆಪಿ ಪರಿವಾರ ಮಾಡಿದ ತಾರತಮ್ಯವನ್ನು ಸರಿ ಪಡಿಸಿದ್ದೇವೆ ಎಂದು ಹೇಳಿದರು.
ನಮ್ಮ ಅವಧಿಯಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಮತಾಂಧರಿಗೆ, ಅನೈತಿಕ ಪೊಲೀಸ್ ಗಿರಿಗೆ, ಜಾತಿ-ಧರ್ಮದ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವವರಿಗೆ ತಕ್ಕ ಶಾಸ್ತಿ ಮಾಡ್ತೀವಿ. ಕಠಿಣ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿದ್ದೇನೆ ಎಂದು ಸಿಎಂ ಇದೇ ವೇಳೆ ಹೇಳಿದ್ದಾರೆ.
ಫಾಝಿಲ್, ಮಸೂದ್, ದೀಪಕ್ ರಾವ್ ಜಲೀಲ್, ಇದ್ರೀಶ್ ಪಾಷಾ, ಸಮೀರ್ ಕುಟುಂಬಕ್ಕೆ ಪರಿಹಾರದ ಚೆಕ್ ನ್ನು ಸಿಎಂ ವಿತರಿಸಿದ್ದಾರೆ.