ಬರೋಬ್ಬರಿ 10 ಗ್ಯಾರಂಟಿಗಳ ಘೋಷಣೆ; ಮಧ್ಯಪ್ರದೇಶದಲ್ಲಿ ಕೇಜ್ರಿವಾಲ್ ಮತಬೇಟೆ ಆರಂಭ!
ಭೋಪಾಲ್: ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದಲ್ಲಿ ತಮ್ಮ ಪಕ್ಷಕ್ಕೆ ಒಂದು ಅವಕಾಶವನ್ನು ನೀಡಿ ಎಂದು ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಜನತೆಗೆ ಮನವಿ ಮಾಡಿದ್ದಾರೆ.
ಮದ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್ ಆಡಳಿತರೂಢ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ರನ್ನು ಮಾಮ ಎಂದು ಸಂಬೋಧಿಸಿದ್ದಾರೆ.
ನಾನು ಇಲ್ಲಿಗೆ ಬರುವ ಮುನ್ನ ಸೋದರಳಿಯ ಹಾಗೂ ಸೊಸೆಯಂದಿರಿಗೆ ಒಬ್ಬ ಮಾಮ ಮೋಸ ಮಾಡಿದ್ದಾನೆಂದು ತಿಳಿದು ಬಂದಿತ್ತು. ಮುಂಬರುವ ಚುನಾವಣೆಯಲ್ಲಿ ನೀವು ಅವನನ್ನು ನಂಬಬೇಡಿ. ನಿಮ್ಮ ಚಿಕ್ಕಪ್ಪ(ಅರವಿಂದ್ ಕೇಜ್ರಿವಾಲ್) ಬಂದಿದ್ದು, ನನ್ನ ಮೇಲೆ ನಂಬಿಕೆ ಇಡಿ ಎಂದಿದ್ದಾರೆ.
ಗ್ಯಾರಂಟಿಗಳ ಘೋಷಣೆ
ಸಮಾವೇಶವನ್ನುದ್ದೇಶಿಸಿ ಮಾತನಾಡುವ ವೇಳೆ ಕೇಜ್ರಿವಾಲ್ ಮಹತ್ವದ ಘೋಷಣೆಗಳನ್ನು ಮಾಡಿದ್ದು, ಎಎಪಿ ಅಧಿಕಾರಕ್ಕೆ ಬಂದಲ್ಲಿ ಪ್ರತಿ ಮನೆಗೆ 300 ಯೂನಿಟ್ ಉಚಿತ ವಿದ್ಯುತ್, ಮಹಿಳೆಯರು ಹಾಗೂ ನಿರುದ್ಯೋಗಿ ಯುವಕರಿಗೆ ಮಾಸಿಕ ಮೂರು ಸಾವಿರ ರೂಪಾಯಿ ಭತ್ಯೆ, ಉಚಿತ ಚಿಕಿತ್ಸೆ ಸೇರಿದಂತೆ ದೆಹಲಿ ಹಾಗೂ ಪಂಜಾಬ್ನಲ್ಲಿ ಜಾರಿಯಲ್ಲಿರುವ 10 ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದಾರೆ.
ಚುನಾವಣೆ ಸಮಯದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡುವ ನಾಯಕರು ಅದರಲ್ಲೇನಿದೆ ಎಂದು ಓದುವುದಿಲ್ಲ. ಆದರೆ, ನಾವು ಕೊಟ್ಟ ಮಾತನ್ನು ಸಂಪೂರ್ಣವಾಗಿ ಈಡೇರಿಸುತ್ತೇವೆ ನಮ್ಮ ಮೇಲೆ ವಿಶ್ವಾವನ್ನಿಟ್ಟು ಮತ ಹಾಕಿ. ನೀವು ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್ಗೆ ಆಶೀರ್ವಾದ ಮಾಡಿದ್ದೀರಾ. ದೆಹಲಿ ಹಾಗೂ ಪಂಜಾಬ್ನಲ್ಲಿ ನಮ್ಮ ಆಡಳಿತವನ್ನು ನೋಡಿ ನಮಗೂ ಒಂದು ಅವಕಾಶ ಕೊಡಿ ಎಂದು ಅರವಿಂದ್ ಕೇಜ್ರಿವಾಲ್ ವಿನಂತಿಸಿದ್ದಾರೆ.