ಹಿಟ್ಟಿನ ಗಿರಣಿಯಲ್ಲಿ ವಿದ್ಯುತ್ ಸ್ಪರ್ಶ; ತಾಯಿ,ಮಕ್ಕಳು ಸೇರಿ ನಾಲ್ವರು ಮೃತ್ಯು
ಜೈಪುರ: ಹಿಟ್ಟಿನ ಗಿರಣಿಯಲ್ಲಿ ವಿದ್ಯುತ್ ಸ್ಪರ್ಶಗೊಂಡು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ದಾರುಣ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಶುಕ್ರವಾರ(ಸೆ.1 ರಂದು) ನಡೆದಿರುವುದು ವರದಿಯಾಗಿದೆ.
ಅರ್ಜುನ ಸಿಂಗ್ ಅವರಿಗೆ ಈ ಹಿಟ್ಟಿನ ಗಿರಣಿ ಸೇರಿದೆ. ಅರ್ಜುನ ಸಿಂಗ್ ಅವರು ಘಟನೆ ನಡೆದ ದಿನ ಅನ್ಯ ಕೆಲಸದ ಕಾರಣ ದೆಹಲಿಗೆ ತಲುಪಿದ್ದರು. ಈ ಕಾರಣದಿಂದ ಅರ್ಜುನ ಸಿಂಗ್ ಅವರ ಪತ್ನಿ ಹಿಟ್ಟಿನ ಗಿರಣಿಯನ್ನು ನೋಡಿಕೊಳ್ಳುತ್ತಿದ್ದರು.
ವಿದ್ಯುತ್ ನಿಂದ ಚಲಿಸುವ ಹಿಟ್ಟಿನ ಗಿರಣಿಯನ್ನು ಬಳಸುವಾಗ ಅರ್ಜುನ ಸಿಂಗ್ ಅವರ ಪತ್ನಿಗೆ ವಿದ್ಯುತ್ ಶಾಕ್ ಹೊಡೆದಿದೆ. ಇದನ್ನು ನೋಡಿದ ಅವರ ಇಬ್ಬರು ಮಕ್ಕಳು ಕೂಡಲೇ ತಾಯಿಯನ್ನು ರಕ್ಷಿಸಲು ಹೋಗಿದ್ದಾರೆ. ಆದರೆ ಅವರ ಸಂಪರ್ಕಕ್ಕೆ ಬಂದ ಕಾರಣ ವಿದ್ಯುತ್ ಸ್ಪರ್ಶದಿಂದ ಮಕ್ಕಳು ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅರ್ಜುನ ಅವರ ಮಾವ ಮೂವರನ್ನು ವಿದ್ಯುತ್ ಶಾಕ್ ನಲ್ಲಿ ನೋಡಿದಾಗ ಜೀವದ ಹಂಗು ತೊರೆದು ರಕ್ಷಣೆ ಮಾಡಲು ಹೋಗಿದ್ದಾರೆ. ಆದರೆ ಅವರು ಕೂಡ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.
ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬ್ಯಾಂಕ್ ವಂಚನೆ ಪ್ರಕರಣ: ಜಾರಿ ನಿರ್ದೇಶನಾಲಯದಿಂದ ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಬಂಧನ
ಮುಂಬೈ, ಸೆ.2: ಕೆನರಾ ಬ್ಯಾಂಕ್ನ 538 ಕೋಟಿ ರೂ. ವಂಚನೆ ಪ್ರಕರಣ ಸಮಬಂಧ ಜಾರಿ ನಿರ್ದೇಶನಾಲಯವು (Enforcement Directorate) ಜೆಟ್ ಏರ್‌ವೇಸ್ (Jet Airways) ಸಂಸ್ಥಾಪಕ ನರೇಶ್ ಗೋಯಲ್ ಅವರನ್ನು ಬಂಧಿಸಿದೆ. ಪಿಎಂಎಲ್ಎ ಕಾಯ್ದೆಯಡಿ ನರೇಶ್ ಗೋಯಲ್ ಅವರನ್ನು ವಶಕ್ಕೆ ಪಡೆದ ಅಧಿಕಾರಿಗಳು, ಶನಿವಾರ ಸತತ ಏಳು ಗಂಟೆಗಳ ಕಾಲ ಮುಂಬೈನಲ್ಲಿ ವಿಚಾರಣೆ ನಡೆಸಿದ ನಂತರ ಬಂಧಿಸಿದ್ದಾರೆ.
ಸದ್ಯ, 74 ವರ್ಷದ ನರೇಶ್ ಗೋಯಲ್ ಅವರನ್ನು ಇ.ಡಿ. ಅಧಿಕಾರಿಗಳು ಪಿಎಂಎಲ್ಎ ವಿಶೇಷ ಕೋರ್ಟ್ಗೆ ಇಂದು (ಸೆಪ್ಟೆಂಬರ್ 2) ಹಾಜರುಪಡಿಸಿ ತಮ್ಮ ವಶಕ್ಕೆ ನೀಡುವಂತೆ ಕೋರಲಿದ್ದಾರೆ.
ಕೆನರಾ ಬ್ಯಾಂಕ್ನಿಂದ ಪಡೆದ ಸಾಲವನ್ನು ಸಂಪೂರ್ಣವಾಗಿ ಪವಾತಿಸದ ಜೆಟ್ ಏರ್‌ವೇಸ್ ಸಂಸ್ಥಾಪಕ ಗೋಯಲ್ ವಿರುದ್ಧದ ಸಿಬಿಐ ಮೇ 3 ರಂದು ವಂಚನೆ ಪ್ರಕರಣ ದಾಖಲಿಸಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಮತ್ತು ದೆಹಲಿಯಲ್ಲಿ ಗೋಯಲ್ ಅವರಿಗೆ ಸೇರಿದ ಎಂಟು ಸ್ಥಳಗಳ ಮೇಲೆ ಜುಲೈನಲ್ಲಿ ದಾಳಿ ನಡೆಸಿತ್ತು.
ಜೆಟ್ ಏರ್‌ವೇಸ್ (ಇಂಡಿಯಾ) ಲಿಮಿಟೆಡ್ 2005 ರಿಂದ ಕೆನರಾ ಬ್ಯಾಂಕ್‌ನೊಂದಿಗೆ ವ್ಯವಹರಿಸುತ್ತಿದೆ ಮತ್ತು ಕಂಪನಿಗೆ ಎಲ್ಲಾ ಮಾನ್ಯತೆಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಒಕ್ಕೂಟದ ವ್ಯವಸ್ಥೆಯಲ್ಲಿದೆ.
ಕೆನರಾ ಬ್ಯಾಂಕ್ನಿಂದ ಜೆಟ್ ಏರ್‌ವೇಸ್ ಸಂಸ್ಥೆಯು 848 ಕೋಟಿ ರೂ. ಸಾಲ ಪಡೆದಿತ್ತು. ಈ ಸಾಲದ ಮೊತ್ತದ ಪೈಕಿ 538 ಕೋಟಿ ರೂ.ಗಳನ್ನು ಮರುಪಾವತಿಸದೆ ಬಾಕಿ ಉಳಿಸಲಾಗಿತ್ತು. ಈ ಪ್ರಕರಣವನ್ನು 2011ರ ಜುಲೈ 29 ರಂದು ವಂಚನೆ ಪ್ರಕರಣವೆಂದು ಘೋಷಿಸಿ ಪ್ರಕರಣ ದಾಖಲಿಸಿಕೊಂಡಿತ್ತು.