ಮಗಳನ್ನು ಹತ್ಯೆಗೈದಿದ್ದ ತಂದೆಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್
ತುಮಕೂರು, ಸೆ.2: ಬೇರೊಬ್ಬಳ ಜೊತೆ ಮದುವೆಯಾಗಲು ಅಡ್ಡಿ ಬರುತ್ತಾಳೆ ಎಂದು ತನ್ನ ಮಗಳನ್ನೇ ಹತ್ಯೆ (Murder) ಮಾಡಿದ್ದ ಅಪರಾಧಿ ತಂದೆಗೆ ತುಮಕೂರು (Tumkur) ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯವು ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ತನ್ನ ನಾಲ್ಕು ವರ್ಷದ ಮಗಳನ್ನು ಕೊಲೆ ಮಾಡಿ ಬಾವಿಗೆ ಬಿಸಾಡಿದ್ದ ನರಸಿಂಹಮೂರ್ತಿಗೆ ಶಿಕ್ಷೆಗೆ ಒಳಗಾದ ಅಪರಾಧಿ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತಣ್ಣೇನಹಳ್ಳಿ ಸಮೀಪದ ವೆಂಕಟಾಪುರದ ಗ್ರಾಮದ ನರಸಿಂಹಮೂರ್ತಿ, ತನ್ನ ಪತ್ನಿಯ ಮೇಲೆ ಅಕ್ರಮ ಸಂಬಂಧದ ಶಂಕೆ ಹೊಂದಿದ್ದನು. ಹೀಗಾಗಿ ಆಕೆಯನ್ನು ಬಿಟ್ಟು ಬೇರೊಬ್ಬಳಂದಿಗೆ ಮದುವೆಯಾಗಲು ನಿರ್ಧರಿಸಿದ್ದನು.
ಆದರೆ, ಮದುವೆಗೆ ಸ್ವಂತ ಮಗಳು ಅಡ್ಡ ಬರುತ್ತಾಳೆಂದು 2018 ಡಿಸೆಂಬರ್ 4 ರಂದು ನಾಲ್ಕು ವರ್ಷದ ಮಗಳನ್ನೇ ಕೊಂದು ಬಾವಿಗೆ ಎಸೆದು ಪರಾರಿಯಾಗಿದ್ದನು. ಪ್ರಕರಣ ದಾಖಲಿಸಿಕೊಂಡಿದ್ದ ಕೋಳಾಲ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ತುಮಕೂರು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಬಿ ಗೀತಾ ಅವರು, ಆರೋಪಿ ನರಸಿಂಹಮೂರ್ತಿ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆ ನರಸಿಂಹಮೂರ್ತಿಯನ್ನು ಅಪರಾಧಿ ಎಂದು ಘೋಷಿಸಿ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರಿ ವಕೀಲ ಎಸ್ ರಾಜಣ್ಣ ವಾದ ಮಂಡಿಸಿದ್ದರು.
ನಾಟಿ ಔಷಧ ಪಡೆದು ಎರಡು ಕಿಡ್ನಿ ಕಳೆದುಕೊಂಡ ಯುವಕ: ವಿಚಿತ್ರ ಘಟನೆಗೆ ಸಾಕ್ಷಿಯಾದ ಗಡಿ ನಾಡು ಚಾಮರಾಜನಗರ
ಚಾಮರಾಜನಗರ, ಸೆಪ್ಟೆಂಬರ್ 2: ನಾಟಿ ಮದ್ದು (naati medicine) ಔಷಧ ಪಡೆದು ಯುವಕಯೊರ್ವ ತನ್ನ ಎರಡು ಕಿಡ್ನಿಗಳನ್ನು ಕಳೆದುಕೊಂಡಂತಹ ಘಟನೆ ಗಡಿ ನಾಡು ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಅನೂಪ್ ಕಿಡ್ನಿ ಕಳೆದುಕೊಂಡ ಯುವಕ. ಜಾಂಡಿಸ್ ಬಂದ ಕಾರಣ ಯುವಕ ಅನೂಪ್ ನಾಟಿ ಮದ್ದು ಚಿಕಿತ್ಸೆ ಪಡೆದಿದ್ದ. ನಾಟಿ ಮದ್ದು ಚಿಕಿತ್ಸೆ ಪಡೆದ ಬಳಿಕ ಇದ್ದಕ್ಕಿದ್ದಂತೆ ವಾಂತಿ ಶುರುವಾಗಿತ್ತು. ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದು, ವೈದ್ಯರ ತಪಾಸಣೆ ವೇಳೆ ಎರಡು ಕಿಡ್ನಿ ವೈಫಲ್ಯವಾಗಿರುವುದು ಬೆಳಕಿಗೆ ಬಂದಿದೆ.
ಚಾಮರಾಜನಗರದಲ್ಲಿ ಯುವಕ ಅನೂಪ್ ಪಾನಿಪೂರಿ ಅಂಗಡಿಯನ್ನ ಹಾಕಿ ಜೀವನ ಸಾಗಿಸುತ್ತಿದ್ದು, ಜಿಲ್ಲೆಯಲ್ಲಿ ಇವರ ಭಜರಂಗಿ ಚಾಟ್ಸ್ ಸಿಕ್ಕಾಪಟ್ಟೆ ಫೇಮಸ್. ಇತ್ತ ಕಿಡ್ನಿ ವೈಫಲ್ಯದಿಂದ ಜೀವನ ಸಾಗಿಸಲು ನರಕ ಅನುಭವಿಸುವಂತ್ತಾಗಿದೆ.
ಸದ್ಯ ಡಯಾಲಿಸಿಸ್ ಮಾಡಿಸಿಕೊಳ್ಳಲು ಹಣವಿಲ್ಲದೆ ಯುವಕ ಪರದಾಡುತ್ತಿದ್ದಾರೆ. ತಾಯಿ ತನ್ನ ಕಿಡ್ನಿ ದಾನ ಮಾಡಲು ಸಿದ್ದವಿದ್ದರು ಕೂಡ ಕಿಡ್ನಿ ಟ್ರಾನ್ಸ್ ಪ್ಲಟೇಷನ್ ಮಾಡಿಸಲು ಆಗದೆ ಕುಟುಂಬ ಒದ್ದಾಡುತ್ತಿದ್ದು, ಚಿಕಿತ್ಸೆಗೆ ಹಣ ಸಹಾಯ ಮಾಡುವಂತೆ ಸಂತ್ರಸ್ಥ ಯುವಕ ಮನವಿ ಮಾಡಿದ್ದಾರೆ.